Latest

ಬಂಜಾರಾ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧ : ಮುಖ್ಯಮಂತ್ರಿ

ಪ್ರಗತಿವಾಹಿನಿ ಸುದ್ದಿ, ವಿಜಯಪುರ:
ಜಿಲ್ಲೆಯ ತಾಂಡಾಗಳಲ್ಲಿನ ಬಂಜಾರಾ ಸಮಾಜದ ಬಡತನವನ್ನು ಹಾಗೂ ಶೈಕ್ಷಣಿಕವಾಗಿ ಹಿಂದೆ ಉಳಿದಿರುವ ಹಾಗೂ ಈ ಜನಾಂಗದ ಪರಿಶ್ರಮವನ್ನು ಗಮನಿಸಿದ್ದು, ನಿಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅನುಕೂಲ ಮಾಡಿಕೊಡುವುದಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿಂದು ಸಂತ ಶ್ರೀ ಸೇವಾಲಾಲರ ಜಯಂತಿ ಕಾರ್ಯಕ್ರಮ ಹಾಗೂ ಬಂಜಾರಾ ಸಮಾಜದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಜಿಲ್ಲೆಯ ಮಧಬಾವಿ ತಾಂಡಾಕ್ಕೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿರುವುದಾಗಿ ತಿಳಿಸಿದ ಮಾನ್ಯ ಮುಖ್ಯಮಂತ್ರಿಗಳು ಈ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ 19 ಜನ ಕುಟುಂಬಸ್ಥರಿಗೆ ಸಾಂತ್ವನ ನೀಡಿ ಸಮಸ್ಯೆಯನ್ನು ಕಣ್ಣಾರೆ ನೋಡಿದ್ದಾಗಿ ತಿಳಿಸಿದ ಅವರು, ಈ ಜನಾಂಗಕ್ಕೆ ಕೆಲವು ಯೋಜನೆ ತರುವಂತೆ ವಿಶೇಷ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿತ್ತು. ಅದರಂತೆ ತಲಾ 2 ಲಕ್ಷ ರೂ.ಗಳಂತೆ ಪರಿಹಾರವನ್ನು ಸಹ ಈ ಕುಟುಂಬಗಳಿಗೆ ಮಂಜೂರು ಮಾಡಿರುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಬಂಜಾರಾ ಸಮಾಜದ ಮುಖಂಡರು, ರಾಜಕೀಯ ಮುಖಂಡರು ಈ ಸಮಾಜಕ್ಕೆ ಸಂಬಂಧಪಟ್ಟಂತೆ ನ್ಯಾಯಯುತ ಸಮಸ್ಯೆಗೆ ಪರಿಹಾರ ಕಲ್ಪಿಸಲು ತಿಳಿಸಿದ್ದಲ್ಲಿ ಅದಕ್ಕೆ ಪರಿಹಾರ ಕಲ್ಪಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದರು.
ಬಂಜಾರಾ ಸಮಾಜವು ಅತ್ಯಂತ ಕಡು ಬಡ ಮತ್ತು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಸರಳತೆ, ಮುಗ್ದತೆಯನ್ನು ಹೊಂದಿರುವ ಈ ಸಮಾಜದ ದುರುಪಯೋಗವೂ ಸಹ ಒಂದು ಕಡೆ ಆಗುತ್ತಿದೆ ಎಂಬ ಭಾವನೆಯೂ ಸಹ ಬರುತ್ತಿದೆ ಎಂದು ತಿಳಿಸಿದ ಅವರು, ಈ ಸಮಾಜದ ಹಾಗೂ ಇತರೆ ಸಮಾಜದ ಜನರಿಗೆ ವಿವಿಧ ಸೌಲಭ್ಯ ಕಲ್ಪಿಸಿ ಅವರ ಸಮಸ್ಯೆಗೆ ಪರಿಹಾರ ಕಲ್ಪಿಸಲು ತಾವು ಬದ್ಧವಿರುವುದಾಗಿ ತಿಳಿಸಿದ ಅವರು, ಈಗಾಗಲೇ ಬಂಜಾರಾ ಸಮಾಜ ಪ್ರಾಧಿಕಾರ ಸಹ ರಚಿಸಲಾಗಿದೆ. ಈ ಸಮಾಜದ ಕುಟುಂಬಸ್ಥರು ತಮ್ಮ ಜೀವನ ನಿರ್ವಹಣೆಗಾಗಿ ವಿವಿಧ ಕಡೆ ಕೂಲಿ ಕೆಲಸಕ್ಕೆ ಹೋಗುವುದು ಗಮನಿಸಿದ್ದು, ಅದರಂತೆ ಪ್ರತಿನಿತ್ಯ ಅಪಘಾತದಂತಹ ದುರ್ಘಟನೆಗಳಿಂದ ಹಾನಿಯನ್ನು ಅನುಭವಿಸಿರುವ ಕೂಡ ಗಮನಿಸಿರುವುದಾಗಿ ತಿಳಿಸಿದ ಅವರು, ಈ ಸಮಾಜದ ಆರ್ಥಿಕ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಮಕ್ಕಳನ್ನು ಮುಂಚೂಣಿಗೆ ತರಲು ಈ ಸಮಾಜಕ್ಕೆ ಸಹಕಾರದ ಅವಶ್ಯಕತೆ ಇದ್ದು, ರಾಜ್ಯದ ಸಮ್ಮಿಶ್ರ ಸರ್ಕಾರ ಈ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲಿದೆ. ಅದರಂತೆ ಯಾವ ಯೋಜನೆಗಳ ಮೂಲಕ ಈ ಸಮಾಜದ ಸಮಸ್ಯೆಗಳನ್ನು ಬಗೆಹರಿಸಬಹುದು ಎಂಬುದರ ಬಗ್ಗೆ ಚಿಂತನೆಯನ್ನು ಸಹ ಸಮಾಜದ ಮುಖಂಡರು ಒಟ್ಟುಗೂಡಿ ಸರ್ಕಾರದ ಗಮನಕ್ಕೆ ತಂದಲ್ಲಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದ್ದರಿಂದ ಹಣಕಾಸಿನ ಕೊರತೆ ಸರ್ಕಾರಕ್ಕೆ ಇದೆ ಎಂಬ ಕೆಲವರ ಟೀಕೆಯು ಸತ್ಯಕ್ಕೆ ದೂರವಾಗಿದ್ದು, ಜನಪರ ಯೋಜನೆಗಳಿಗೆ ಯಾವುದೇ ರೀತಿಯ ಹಣಕಾಸಿನ ಕೊರತೆಯಿಲ್ಲ. ಈ ಜಿಲ್ಲೆಯ ನೀರಾವರಿ ಯೋಜನೆಗಳಿಗಾಗಿ ಹಾಗೂ ಕಳೆದ ಹತ್ತು ವರ್ಷಗಳಿಂದ ದ್ರಾಕ್ಷಿ ಬೆಳೆಗಾರರ ರೈತರಿಗೆ ಪರಿಹಾರ ಕೊಡದೇ ಇರುವಂತಹ ಕಾರ್ಯವನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಮಾಡುವ ಮೂಲಕ ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಯನ್ನು ಕಾಯ್ದುಕೊಂಡಿದೆ. ಬಂಜಾರಾ ಸಮಾಜವನ್ನು ಮತ್ತು ಎಲ್ಲ ತಾಂಡಾಗಳ ಸಂಪೂರ್ಣ ಅಭಿವೃದ್ದಿಗೆ ಯೋಜನೆ ರೂಪಿಸಲು ಮತ್ತು ಆರ್ಥಿಕ ಶಕ್ತಿ ತುಂಬಲು ತಾವು ಸಿದ್ದರಿರುವುದಾಗಿ ತಿಳಿಸಿದ ಅವರು, ಇಂತಹ ಸಮಾವೇಶಗಳು ಬಂಜಾರಾ ಸಮಾಜಕ್ಕೆ ಹೆಚ್ಚು ಸಹಕಾರಿಯಾಗಲಿದ್ದು, ಈ ಸಮಾಜದ ಮುಗ್ದತೆಯನ್ನು ವಂಚಿಸುವವರ ಬಗ್ಗೆಯೂ ಎಚ್ಚರವಿರುವಂತೆ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ಸಂತ ಶ್ರೀ ಸೇವಾಲಾಲ ಅವರು ಈ ಸಮಾಜಕ್ಕೆ ಮಾರ್ಗದರ್ಶನ ಹಾಗೂ ಅತ್ಯುತ್ತಮ ಸಂದೇಶಗಳನ್ನು ನೀಡಿದ್ದು, ಎಲ್ಲರೂ ಸಂತ ಸೇವಾಲಾಲ ಅವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 18-19ನೇ ಶತಮಾನದಲ್ಲಿ ಆಗಿ ಹೋದ ಸೇವಾಲಾಲರು ಬಂಜಾರಾ ಜನಾಂಗವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಕೊಡುಗೆ ಅಪಾರವಾಗಿದೆ ಎಂಬುವುದನ್ನು ಈ ಸಂದರ್ಭದಲ್ಲಿ ಸ್ಮರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗೃಹ ಖಾತೆ ಸಚಿವರಾದ ಎಂ.ಬಿ.ಪಾಟೀಲ ಅವರು ಮಾತನಾಡಿ,  ಬಂಜಾರಾ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಅನೇಕ ರಾಜಕೀಯ ಮುಖಂಡರುಗಳು ಈ ಸಮಾಜದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ನಾನೂ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಹಲವಾರು ಶಿಕ್ಷಣ ಸಂಸ್ಥೆ ಸ್ಥಾಪನೆ,  ಹಲವು ಗ್ರಾಮಗಳಿಗೆ ನೀರಿನ ಸೌಲಭ್ಯ, ಸಮಾಜದ ಭವನಗಳ ನಿರ್ಮಾಣಕ್ಕೆ ಅನುದಾನವನ್ನು ಒದಗಿಸಿದ್ದೇನೆ ಎಂದು ಹೇಳಿ, ಸಮಾಜದ ಸಮಸ್ಯೆಗಳಿಗೆ ಮುಂದೆಯೂ ಸ್ಪಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ  ನಾಗಠಾಣ ಶಾಸಕರಾದ ದೇವಾನಂದ ಚವ್ಹಾಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಶಿವಾನಂದ ಪಾಟೀಲ, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ದಿನೇಶ ಗುಂಡೂರಾವ್, ಸಚಿವರಾದ ಬಂಡೆಪ್ಪ ಕಾಶೆಂಪೂರ, ಪರಮೇಶ್ವರ ನಾಯಕ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಂಜಾರಾ ಸಮಾಜದವರಾದ ಮಿಸ್ ಮುಂಬಯಿ ರಿಯಾ ರಾಠೋಡ ಅವರನ್ನು ಸನ್ಮಾನಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button