ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಮ್ಮ ಬದುಕು ಮತ್ತು ನಮ್ಮ ಸಾಧನೆಯಿಂದ ಬೇರೆಯವರಿಗೆ ಆದರ್ಶವಾಗಬೇಕು ಆಗ ಮಾತ್ರ ನಾವು ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಅವರು ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ನಡೆದ ಡಾ. ಸಂಗಮೇಶ ಸವದತ್ತಿಮಠ ಅವರ ಅಮೃತ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಸಂಗಮೇಶ ಸವದತ್ತಿಮಠ ಅವರು ನಮ್ಮ ಜಿಲ್ಲೆಯಲ್ಲಿಯೇ ಹುಟ್ಟಿ ಬಾಲ್ಯದಲ್ಲಿ ನಾವು ಅಂಕಲಿಯಲ್ಲಿ ಕೂಡಿ ಆಡಿದ ನೆನೆಪು. ಇವತ್ತು ೧೮೦ ಪುಸ್ತಕಗಳನ್ನು ರಚಿಸುವುದರ ಮೂಲಕ ಇಡೀ ರಾಜ್ಯ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಷಾ ವಿಜ್ಞಾನಿಯಾಗಿ ಅವರು ಖ್ಯಾತರಾಗಿದ್ದಾರೆ. ಇವರ ಸಾಧನೆ ನಿಜಕ್ಕೂ ಆದರ್ಶ. ಮನುಷ್ಯ ಎಷ್ಟು ದಿನ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ. ಬದುಕಿದ್ದಾಗ ಎಷ್ಟು ಒಳ್ಳೆಯ ಕೆಲಸ ಮಾಡಿರುತ್ತಾನೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಎಂದರು.
ಹುಕ್ಕೇರಿ ಹಿರೇಮಠ ಕವಿಗಳಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸ್ಪೂರ್ತಿ ತುಂಬುವ ಕೇಂದ್ರವಾಗಿದೆ ಎಂದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ನೇತ್ರಾವತಿ ಹಿರೇಮಠ ಅವರು ರಚಿಸಿದ ಡಾ. ಸಂಗಮೇಶ ಸವದತ್ತಿಮಠ ಅವರ ಬರಹ ಬದುಕು ಬಿಡುಗಡೆಗೊಳಿಸಿ ಮಾತನಾಡಿ, ಮಹಾನ್ ತಪಸ್ವಿ ಮುರುಗೋಡದ ಮಹಾಂತ ಶಿವಯೋಗಿಗಳ ತಾಣದಲ್ಲಿ ಹುಟ್ಟಿರುವ ಡಾ. ಸಂಗಮೇಶ ಅವರು ವಿಶೇಷವಾಗಿ ತಮ್ಮ ಸರಳ ಸ್ವಭಾವದಿಂದ ಎಲ್ಲರ ಮನವನ್ನು ಗೆದ್ದಿದ್ದಾರೆ ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಡಾ. ಸಂಗಮೇಶ ಅವರ ಅಮೃತ ಮಹೋತ್ಸವವನ್ನು ಎಲ್ಲರೂ ಸೇರಿಕೊಂಡು ಆಚರಿಸಬೇಕಿತ್ತು. ಆದರೆ ಹುಕ್ಕೇರಿ ಶ್ರೀಗಳು ಸ್ವತಃ ತಮ್ಮ ಮಠದಿಂದ ಆಚರಿಸುವ ಮೂಲಕ ತವರು ಜಿಲ್ಲೆಯ ಸಾಹಿತಿಗೆ ಒಂದು ಗೌರವ ನೀಡಿದ್ದಾರೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸುಮಾರು ೧೧ ಜನ ನಿವೃತ್ತ ಯೋಧರನ್ನು ಶ್ರೀಮಠ ಸನ್ಮಾನಿಸುತ್ತಿದೆ. ನರೇಂದ್ರ ಮೋದಿ ವೀರಭದ್ರನಾಗಿ, ಕಾಲಭೈರವನಾಗಿ ಪಾಪಿ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ನಮ್ಮ ಸೈನಿಕರ ಪಾತ್ರ ಬಹಳ ಮಹತ್ವವಾಗಿದೆ. ಆದ್ದರಿಂದ ಅವರಿಗೆ ಕೃತಜ್ಞತೆ ಅರ್ಪಿಸಲು ನಿವೃತ್ತ ಯೋಧರಿಗೆ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.
ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ಇಂದು ಸಂಗಮೇಶ ಸವದತ್ತಿಮಠ ಅವರಂಥ ಸಾಹಿತಿಗಳನ್ನು ಶ್ರೀಮಠ ಗೌರವಿಸಿದ್ದು ಸಂತಸ ತಂದಿದೆ. ಇವರ ಪುಸ್ತಕ ನೋಡುವುದಷ್ಟೆ ಅಲ್ಲ ಅದರಲ್ಲಿನ ವಿಷಯ ತಿಳಿದುಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಸುಪ್ರೀಯಾ ಪಾಟೀಲ, ಮೀನಾಕ್ಷಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ರಾಣಿ ಚನ್ನಮ್ಮ ವಿವಿಯ ಉಪನ್ಯಾಸಕಿ ಮೈತ್ರಾಣಿ ಗದಗೇಪ್ಪಗೌಡರ ಉಪನ್ಯಾಸ ನೀಡಿದರು. ವಿಮಲಾ ನೀರಲಗಿಮಠ ಪ್ರಸಾದಸೇವೆ ನೆರವೇರಿಸಿದರು.