Latest

ಬರ ತಾಲೂಕುಗಳಿಗೆ ಹೆಚ್ಚುವರಿ ೫೦ ಲಕ್ಷ ರೂ. ಅನುದಾನ :ಕಂದಾಯ ಸಚಿವ ಆರ್.ವಿ. ದೇಶಪಾಂಡೆ

ಡಿಸೆಂಬರ್ ಅಂತ್ಯದಲ್ಲಿ ಮತ್ತಷ್ಟು ಬರಪೀಡಿತ ತಾಲೂಕುಗಳ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ರಾಜ್ಯದಲ್ಲಿ ಈಗಾಗಲೇ ಘೋಷಣೆಯಾಗಿರುವ ನೂರು ಬರಪೀಡಿತ ತಾಲೂಕುಗಳಿಗೆ ಹೆಚ್ಚುವರಿಯಾಗಿ ೫೦ ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಹಾಗೂ ಈ ತಿಂಗಳಾಂತ್ಯದಲ್ಲಿ ಮತ್ತಷ್ಟು ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುವುದಾಗಿ ಕಂದಾಯ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ವಿಧಾನ ಸಭೆಯಲ್ಲಿ ಬರಗಾಲ ಕುರಿತಂತೆ ನಡೆಸಿದ ಚರ್ಚೆಗೆ ಉತ್ತರಿಸಿ ಅವರು, ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-೨೦೧೬ ರ ಅನ್ವಯ ರಾಜ್ಯದಲ್ಲಿ ಈಗಾಗಲೇ ನೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೇ ಡಿಸೆಂಬರ್ ೩೧ ರ ನಂತರ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ಈಗಾಗಲೇ ಘೋಷಿಸಿರುವ ಬರಪೀಡಿತ ತಾಲೂಕುಗಳಿಗೆ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ತಲಾ ೫೦ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದಾಗ್ಯೂ ಬರದ ತೀಕ್ಷ್ಣತೆಯನ್ನು ಗಮನಿಸಿ ಹೆಚ್ಚುವರಿಯಾಗಿ ೫೦ ಲಕ್ಷ ರೂ. ಬಿಡುಗಡೆ ಮಾಡಲಾಗುವುದು.

ರಾಜ್ಯದಲ್ಲಿ ಬರ ನಿರ್ವಹಣೆ ಸಂಬಂಧ ಸರ್ಕಾರ ಮುಂದಾಲೋಚನೆ ಮಾಡಿ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ. ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸುವ ಸಂಬಂಧ ಕೈಗೊಳ್ಳಬಹುದಾದ ಎಲ್ಲಾ ಕಾರ್ಯಕ್ರಮಗಳಿಗೂ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಸಚಿವರು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯ ಕಳೆದ ೧೪ ವರ್ಷಗಳಲ್ಲಿ ಬರ ಪರಿಸ್ಥಿತಿ ಎದುರಿಸಿದೆ. ಭಾರತ ಸರ್ಕಾರ ದೇಶದ ೨೪ ಜಿಲ್ಲೆಗಳಲ್ಲಿ ಕರ್ನಾಟಕದ ೧೬ ಜಿಲ್ಲೆಗಳು ನಿರಂತರ ಬರದ ಜಿಲ್ಲೆಗಳೆಂದು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಸತತ ಬರಗಾಲ ಸ್ಥಿತಿಯಲ್ಲಿರುವ ಕರ್ನಾಟಕ ರಾಜ್ಯದಲ್ಲಿನ ಬರಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ.

ಕಳೆದ ಮುಂಗಾರಿನಲ್ಲಿ ಕೊಡಗು, ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಮಾತ್ರ ೮೦೪ ಮಿ.ಮೀ. ಮಳೆ ಬಿದ್ದಿದ್ದು, ಉಳಿದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ, ಕೃಷಿ ಬೆಳೆಗಳು ಸೇರಿದಂತೆ ಮುಂಗಾರು ಬೆಳೆ ಉತ್ಪಾದನೆಯಲ್ಲಿ ಕುಂಠಿತವಾಗಿದೆ ಹಾಗೂ ಸಾಕಷ್ಟು ಬೆಳೆಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಇನ್‌ಪುಟ್ ಸಬ್ಸಿಡಿ ಪರಿಹಾರಗಳನ್ನು ಈಗಾಗಲೇ ರಾಜ್ಯದ ರೈತರಿಗೆ ವಿತರಣೆ ಮಾಡಲಾಗಿದೆ.
ರಾಜ್ಯದಲ್ಲಿ ಉಲ್ಬಣಿಸಿರುವ ಬರ ಪರಿಸ್ಥಿತಿಯನ್ನು ಎಲ್ಲಾ ಇಲಾಖೆಗಳ ಸಹಕಾರದಿಂದ ನಿಭಾಯಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಲುವಾಗಿ ಏಳು ಸಚಿವ ಸಂಪುಟ ಸಭೆಗಳನ್ನು ಮಾಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿಯವರು ಪತ್ರ ಬರೆದು ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಬರಗಾಲಕ್ಕೆ ತುತ್ತಾಗಿರುವ ತಾಲೂಕುಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಆಧ್ಯತೆ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬರಪೀಡಿತ ತಾಲೂಕುಗಳೆಂದು ಘೋಷಣೆ ಆಗದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ತಾಲೂಕುಗಳಿಗೂ ತಲಾ ೨೫ ಲಕ್ಷ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ ೧೭ ಜಿಲ್ಲೆಗಳ ೨೦೯ ಗ್ರಾಮಗಳಲ್ಲಿ ೪೦೯ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ೩೮೨ ಖಾಸಗಿ ಕೊಳವೆಬಾವಿ ಮಾಲೀಕರೊಂದಿಗೆ ಕುಡಿಯುವ ನೀರು ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ ಆಯಾ ತಾಲೂಕುಗಳಲ್ಲಿ ತಹಶೀಲ್ದಾರರ ಪಿ.ಡಿ. ಖಾತೆಗಳಲ್ಲಿ ಕನಿಷ್ಠ ೧೦ ಲಕ್ಷ ರೂ.ಹಣ ಇಡಲಾಗಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ರಾಜ್ಯದಲ್ಲಿ ಜಾನುವಾರುಗಳಿಗೆ ೯೨.೬೨ ಮೆಟ್ರಿಕ್‌ಟನ್ ಮೇವಿನ ಅಗತ್ಯವಿದೆ. ಈಗಾಗಲೇ ಪಶುಸಂಗೋಪನೆ ಇಲಾಖೆಯಿಂದ ೧೫ ಕೋಟಿ. ರೂ. ವೆಚ್ಚದಲ್ಲಿ ಮೇವಿನ ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ಮೇವು ಸಂಗ್ರಹಣಾ ಕೇಂದ್ರ ಹಾಗೂ ಗೋಶಾಲೆಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದ್ದು, ರಾಜ್ಯದಲ್ಲಿ ೨೨೪ ಮೇವು ಸಂಗ್ರಹಣಾ ಕೇಂದ್ರಗಳು ಹಾಗೂ ೨೯೪ ಗೋಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಅಲ್ಲದೇ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇನ್ನಿತರ ಕೆಲವು ಜಿಲ್ಲೆಗಳಲ್ಲಿ ಹಸಿರು ಮೇವು ಬೆಳೆಯಲು ಹೆಚ್ಚುವರಿಯಾಗಿ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.
ಬರಗಾಲದ ಸ್ಥಿತಿಯಲ್ಲಿ ರಾಜ್ಯದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೆಚ್ಚುವರಿ ಉದ್ಯೋಗಗಳನ್ನು ಸೃಜಿಸಲಾಗಿದೆ. ಪ್ರತಿ ಜಾಬ್‌ಕಾರ್ಡ್‌ದಾರರಿಗೆ ಪ್ರಸ್ತುತ ಈಗಿರುವ ವಾರ್ಷಿಕ ೧೦೦ ದಿನಗಳನ್ನು ಪರಿಷ್ಕರಿಸಿ ೧೫೦ ದಿನಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆಯ ಉದ್ಯೋಗಗಳನ್ನು ಸೃಜಿಸಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಬರಪೀಡಿತ ತಾಲೂಕುಗಳಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಕೈಗೊಳ್ಳುವ ಮೂಲಕ, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೇ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರ ನೇತೃತ್ವದಲ್ಲಿ ಹವಾಮಾನ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ೫ ಕೋಟಿಯಂತೆ ರಾಜ್ಯಾದ್ಯಂತ ೨೨೬ ಕೋಟಿ ರೂ. ಅನುದಾನ ಲಭ್ಯವಿದೆ. ಈಗಾಗಲೇ ಎಪ್ರೀಲ್ ನಿಂದ ನವೆಂಬರ್ ವರೆಗೆ ೧೪೨.೫೮ ಕೋಟಿ ರೂ. ವೆಚ್ಚ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿರುವ ಅನುದಾನ ೫ ರೂ. ಕೋಟಿಗಿಂತ ಕಡಿಮೆ ಇದ್ದಲ್ಲಿ ಅನುದಾನದ ಬೇಡಿಕೆಯನ್ವಯ ಮಂಜೂರಾತಿ ನೀಡಲಾಗುವುದು. ಬರಪರಿಸ್ಥಿತಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ಹಣಕಾಸಿನ ಕೊರತೆ ಇಲ್ಲ. ಈ ವರ್ಷದ ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ೫೪೬ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಬೆಳೆಯ ಹಾನಿ ಸಂತ್ರಸ್ಥ ರೈತರ ಖಾತೆಗೆ ಪರಿಹಾರ ಜಮಾ ಮಾಡಲಾಗುತ್ತಿದೆ. ಮುಂದಿನ ಒಂದು ವಾರದೊಳಗಾಗಿ ಜಿಲ್ಲೆಯ ಎಲ್ಲಾ ರೈತರ ಖಾತೆಗಳಲ್ಲಿ ಈ ಪರಿಹಾರ ಹಣ ಜಮಾ ಆಗಲಿದೆ. ಅಲ್ಲದೇ ಅತಿವೃಷ್ಟಿಯಿಂದ ಜೀವಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರದ ಪರಿಹಾರ ಸೇರಿ ತಲಾ ೭ ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.
ಮುಂಗಾರಿನಲ್ಲಿ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಮೀಕ್ಷೆಗೆ ಕೇಂದ್ರ ಸರ್ಕಾರದ ತಂಡ ಆಗಮಿಸಿ ಸುಮಾರು ೧೩ ಜಿಲ್ಲೆಗಳಲ್ಲಿ ಪ್ರವಾಸ ಮಾಡಿತ್ತು. ಈ ಸಂದರ್ಭದಲ್ಲಿ ಅತಿವೃಷ್ಟಿ ನಿರ್ವಹಣೆಯಲ್ಲಿ ರಾಜ್ಯಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಂಡ ಪ್ರಶಂಸೆ ವ್ಯಕ್ತಪಡಿಸಿದೆ. ಆದರೂ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜಸ್ಥಾನಗಳಿಗೆ ಹೋಲಿಸಿದರೆ ರಾಜ್ಯಸರ್ಕಾರಕ್ಕೆ ಬಿಡುಗಡೆಯಾಗಿರುವ ಮೊತ್ತ ಅತ್ಯಂತ ಕಡಿಮೆ ಇದೆ. ಈ ಸಂಬಂಧ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಉತ್ತರ ದೊರೆತಿದೆ. ಹೆಚ್ಚುವರಿ ಅನುದಾನ ಬಿಡುಗಡೆಯಾಗುವ ವಿಶ್ವಾಸ ಇದೆ ಎಂದು ಸಚಿವರು ತಿಳಿಸಿದರು.

ನಗರಾಸ್ತಿ ಮಾಲೀಕತ್ವದ ಹಕ್ಕುದಾಖಲೆಗಳ ಯೋಜನೆ

ನಗರ ಪ್ರದೇಶದ ಪ್ರತಿಯೊಂದು ಆಸ್ತಿಯನ್ನು ಅಳತೆ ಮಾಡಿ ಮಾಲೀಕತ್ವದ ಹಕ್ಕುದಾಖಲೆಗಳಾದ ಪ್ರಾಪರ್ಟಿ ರೆಜಿಸ್ಟ್ರೇಷನ್ ಕಾರ್ಡ್‌ಗಳನ್ನು ಸಿದ್ಧಪಡಿಸುವಂತಹ ನಗರಾಸ್ತಿ ಮಾಲೀಕತ್ವದ ಹಕ್ಕುದಾಖಲೆಗಳ ಯೋಜನೆಯಡಿಯಲ್ಲಿ ಪ್ರಸ್ತುತ ರಾಜ್ಯದ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರು ನಗರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಆರ್.ವಿ. ದೇಶಪಾಂಡೆ ಅವರು ರಾಜ್ಯ ವಿಧಾನ ಸಭೆಯಲ್ಲಿ ಹೇಳಿದರು.

ಪ್ರಶ್ನೋತ್ತರ ಕಲಾಪ ವೇಳೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಅವರ ಪರವಾಗಿ ಶರಣಪ್ಪ ಮಟ್ಟೂರ ಅವರು ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ವಿ. ದೇಶಪಾಂಡೆ ಅವರು ಈಗಾಗಲೇ ಪ್ರಥಮ ಹಂತದಲ್ಲಿ ಬೆಂಗಳೂರು ನಗರದ ೬೦ ವಾರ್ಡ್‌ಗಳಲ್ಲಿ ಸರ್ವೆ ಆಫ್ ಇಂಡಿಯಾದವರ ಸಹಯೋಗದಲ್ಲಿ ಡ್ರೋನ್/ಯುಎವಿ ಆಧಾರಿತ ಸರ್ವೆ ಕಾರ್ಯಕ್ಕಾಗಿ ಇಲಾಖೆಯಿಂದ ತಂಡಗಳನ್ನು ರಚಿಸಿ ಫ್ಲೈಯಿಂಗ್ ಪ್ರಾರಂಭಿಸಲಾಗಿರುತ್ತದೆ. ಸರ್ವೆ ಆಫ್ ಇಂಡಿಯಾದವರು ಡಾಟಾ ಪ್ರೊಸೆಸಿಂಗ್ ಮಾಡಿ ಇಲಾಖೆಗೆ ಒದಗಿಸಿದ ತಕ್ಷಣ ಇಲಾಖಾ ಸಿಬ್ಬಂದಿಯ ಮೂಲಕ ಪರಿಶೀಲನಾ ಕಾರ್ಯ ಮತ್ತು ಆಸ್ತಿ ದಾಖಲೆಗಳ ಸೃಜನಾ ಕಾರ್ಯವನ್ನು ಕೈಗೊಳ್ಳಲಾಗುವುದು. ಇದೇ ರೀತಿ ಇನ್ನುಳಿದ ವಾರ್ಡ್‌ಗಳಲ್ಲಿಯೂ ಸಹ ಹಂತ ಹಂತವಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಸದನದಲ್ಲಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button