ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಿಜೆಪಿಯವರು ಪ್ರತಿಪಕ್ಷವಾಗಿ ಕೆಲಸ ಮಾಡುವ ಬದಲು ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದ್ದಾರೆ.  ಅವರೆಲ್ಲಾ ನಾಚಿಕೆ ಬಿಟ್ಟಿದ್ದಾರೆ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಿಂದ ಆಗಮಿಸಿದ ಅವರು ಗುರುವಾರ ರಾತ್ರಿ  ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ಹಕ್ಕೂ ಇಲ್ಲ. ರಾಜ್ಯದಲ್ಲಿ ಪ್ರತಿಪಕ್ಷ ವಾಗಿ ಕೆಲಸ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಬರಗಾಲ ಉದ್ಬವಿಸಿರುವ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜನರ ಸಮಸ್ಯೆಗಳ ಆಲಿಸುವ ಬದಲು ಬೇರೆ ರಾಜ್ಯದಲ್ಲಿ ಹೋಗಿ ಕುಳಿತುಕೊಂಡಿದ್ದಾರೆ ಎಂದು ಕಿಡಿಕಾರಿದರು.
ರಮೇಶ ಜಾರಕಿಹೊಳಿ ಪಕ್ಷ ಬಿಡುತ್ತೇನೆ ಎಂದು ಹೇಳಿಲ್ಲ.  ರಾಜೀನಾಮೆ ನೀಡುವುದಾದರೆ ಅದು ಅವರ ವೈಯಕ್ತಿಕ ನಿರ್ಧಾರ. ನನಗಂತೂ ರಮೇಶ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ಪ್ರಲ್ಹಾದ ಜೋಶಿಗೇನು ಅಧಿಕಾರವಿದೆ? ಅವರಿಂದ ನಾನು ಸರ್ಟಿಫಿಕೇಟ್ ಪಡೆಯಬೇಕಿಲ್ಲ. ಯಾವ ಸರ್ಕಾರ ಇರಬೇಕೆಂದು  ಜನ  ನಿರ್ಧಾರ  ಮಾಡುತ್ತಾರೆ ಎಂದರು.
				
				
					 
					 
				 
					 
					 
					 
					
 
					


