Latest

ಬೆಳಗಾವಿಗೆ ಇಂದು ಯಡಿಯೂರಪ್ಪ; ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚರ್ಚೆ

 

 

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಜೆಎನ್ಎಂಸಿ ಆವರಣದಲ್ಲಿರುವ ಕೆಎಲ್ಇ ಅತಿಥಿಗೃಹಕ್ಕೆ ಅವರು ಮಧ್ಯಾಹ್ನ 2 ಗಂಟೆಗೆ ಆಗಮಿಸುವರು. ಜಿಲ್ಲೆಯ ಹಾಲಿ ಹಾಗೂ ಮಾಜಿ ಸಂಸದರು, ಶಾಸಕರೊಂದಿಗೆ ಊಟ ಮಾಡಲಿರುವ ಅವರು, ನಂತರ ಬರಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚರ್ಚೆ ನಡೆಸಲಿದ್ದಾರೆ. 

ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಲೋಕಸಭಾ ಕ್ಷೇತ್ರಗಳನ್ನು ಈ ಬಾರಿ ಬಿಜೆಪಿ ಗೆಲ್ಲುವುದಕ್ಕೆ ಮಾಡಬೇಕಾದ ಕಾರ್ಯತಂತ್ರಗಳ ಕುರಿತು ಅವರು ಸಮಾಲೋಚನೆ ನಡೆಸುವರು. ಹಾಗಾಗಿ ವಿವಿಧ ಜವಾಬ್ದಾರಿಗಳ್ನು ಹಂಚಲಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾವಣೆ ಕುರಿತು ಎದ್ದಿರುವ ಸುದ್ದಿಯ ಹಿನ್ನೆಲೆಯಲ್ಲಿ ಮತ್ತು ಚಿಕ್ಕೋಡಿ ಕ್ಷೇತ್ರಕ್ಕೆ ಯಾರನ್ನು ನಿಲ್ಲಿಸಬೇಕು ಎನ್ನುವ ಕುರಿತೂ ಅವರು ಚರ್ಚಿಸುವರು. ಸಂಸದರಾದ ಪ್ರಭಾಕರ ಕೋರೆ, ಸುರೇಶ ಅಂಗಡಿ, ಜಿಲ್ಲೆಯ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದ-ಶಾಸಕರು ಸಭೆಗೆ ಆಹ್ವಾನಿತರಾಗಿದ್ದಾರೆ.

ಸಂಜೆ ಅವರು ಚಿಕ್ಕೋಡಿಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರನ್ನು ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಯಡಿಯೂರಪ್ಪ ಭೇಟಿ ಮಾಡುವ ಕಾರ್ಯಕ್ರಮವೂ ಇದೆ ಎನ್ನುವ ಸುದ್ದಿ ಹರಡಿದೆ. ಆದರೆ ಬಿಜೆಪಿ ಮೂಲಗಳು ಈ ವಿಷಯವನ್ನು ಖಚಿತಪಡಿಸಿಲ್ಲ.

 

ರಮೇಶ ಜಾರಕಿಹೊಳಿ ಮಂಗಳವಾರ ಬೆಳಗ್ಗೆಯೇ ಗೋಕಾಕಕ್ಕೆ ಆಗಮಿಸಿದ್ದು, ಮನೆಯಲ್ಲಿಯೇ ತಂಗಿದ್ದಾರೆ. ಸಾರ್ವಜನಿಕವಾಗಿ ಯಾರಿಗೂ ಕಾಣಿಸಿಕೊಳ್ಳುತ್ತಿಲ್ಲ. 

ಈ ಮಧ್ಯೆ, ಮಂಗಳವಾರ ಸಂಜೆ ಬೆಂಗಳೂರಿಗೆ ತೆರಳಿದ್ದ ಸಚಿವ ಸತೀಶ್ ಜಾರಕಿಹೊಳಿ ಬುಧವಾರ ಬೆಳಗ್ಗೆ ಹುಬ್ಬಳ್ಳಿ ಮೂಲಕ ವಾಪಸ್ಸಾಗುತ್ತಿದ್ದು, ಬೆಳಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಲಿದ್ದಾರೆ. ಪಾಲಿಕೆಯ ಎಲ್ಲ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದೆ. ಅಲ್ಲಿಯೇ ಸಾರ್ವಜನಿಕರಿಂದ ನಗರದ ಸಮಸ್ಯೆಗಳ ಕುರಿತು ಅಹವಾಲನ್ನೂ ಸ್ವೀಕರಿಸುವರು. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button