Latest

ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆ ಪೂರ್ವಸಿದ್ಧತೆ ಸಭೆ ನಡೆಸಿದ ಕೇಂದ್ರ ಚುನಾವಣೆ ಆಯೋಗ

 

 

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಬೆಳಗಾವಿಯಲ್ಲಿ ಭಾನುವಾರ ಪೂರ್ವಸಿದ್ದತೆ ಸಭೆ ನಡೆಸಿತು. ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಅಶೋಕ ಲಾವಾಸಾ ರಾಜ್ಯದಲ್ಲಿ ಚುನಾವಣೆಗೆ ನಡೆದಿರುವ ಸಿದ್ಧತೆಗಳನ್ನು ಪರಿಶೀಲಿಸಿದರು. 

ರಾಜ್ಯ ಮುಖ್ಯ ಚುನಾವಣಾಧಿಕಾರ ಸಂಜೀವ ಕುಮಾರ  ರಾಜ್ಯದ ಪ್ರಗತಿ ಹಾಗೂ ಮುಂಬರುವ ಲೋಕಾಸಭಾ ಚುನಾವಣೆಯ ಸಿದ್ಧತೆ ಕುರಿತಂತೆ ಮಾಹಿತಿ ನೀಡಿದರು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಕುರಿತು ಸಹ ಸಂಜೀವ ಕುಮಾರ ವಿವರಿಸಿದರು.

ಬೆಳಗಾವಿ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಕೂಡ ಲಾವಾಸಾ ಪರಿಶೀಲಿಸಿದರು. ಬೆಳಗಾವಿ ಜಿಲ್ಲೆಯ ಕಾರ್ಯ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿ ಡಾ: ಎಸ್ ಬಿ ಬೊಮ್ಮನಹಳ್ಳಿ ಮಾಹಿತಿ ನೀಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳು ಸಂಜೀವ ಕುಮಾರ ಅವರನ್ನು ಹಾಗೂ ಅವರ ತಂಡವನ್ನು ಅಶೋಕ ಲಾವಾಸಾ ಶ್ಲಾಘಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ  ಅತ್ಯುತ್ತಮ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

18-19 ವಯಸ್ಸಿನ ಯುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ವಿಶೇಷ ಪ್ರಯತ್ನಗಳನ್ನು ಮಾಡುವಂತೆ, ಮತಗಟ್ಟೆವಾರು ಮತಗಟ್ಟೆ ಮಟ್ಟದ ಏಜೆಂಟ್‌ರನ್ನು ನೇಮಿಸಲು ಎಲ್ಲಾ ರಾಜಕೀಯ ಪಕ್ಷಗಳನ್ನು ವಿನಂತಿಸಿ ಮನವೊಲಿಸುವಂತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಏಜಂಟರು ಸಕ್ರಿಯವಾಗಿ ಭಾಗವಹಿಸಲು ಕೋರುವಂತೆ, ಚುನಾವಣಾ ಅಧಿಕಾರಿಗಳಿಗೆ ಮಂತ ಯಂತ್ರಗಳನ್ನು ನಿರ್ವಹಿಸಲು ಅಗತ್ಯ ತರಬೇತಿಯನ್ನು ನೀಡುವಂತೆ, ದೂರುಗಳ ನಿವಾರಣೆ ಕುರಿತಂತೆ ಆಡಳಿತ ಯಂತ್ರವನ್ನು ಸಜ್ಜುಗೊಳಿಸುವಂತೆ ಹಾಗೂ ಸಾರ್ವಜನಿಕರ ಮನವಿಗಳಿಗೆ/ದೂರುಗಳಿಗೆ ಕೂಡಲೇ ಸ್ಪಂಧಿಸುವಂತೆ ಲಾವಾಸಾ ಸೂಚಿಸಿದರು.

ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು. 

ಸನ್ಮಾನ

ವಿಧಾನಸಭಾ ಚುನಾವಣೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ 14 ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉತ್ತರ ಕನ್ನಡ ಜಿಲ್ಲಾಧಿಕಾರಿ ನಕುಲ, ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಹುಬ್ಬಳ್ಳಿ -ಧಾರವಾಡ ಸ್ಮಾರ್ಟ್ ಸಿಟಿ ಎಂಡಿ ಹಬ್‌ಶಿಬಾ ಕೊರ್ಲಾಪಾಟಿ, ಎನ್.ಐ.ಸಿ ಅಧಿಕಾರಿಗಳಾದ ಶ್ರೀಕಾಂತ ಜೋಶಿ, ಚುನಾವಣಾಧಿಕಾರಿಗಳಾದ ಶಿವಪ್ಪಾ ಭಜಂತ್ರಿ, ಸಹಾಯಕ ಚುನಾವಣಾಧಿಕಾರಿಗಳಾದ  ತಳವಾರ, ಸೆಕ್ಟರ್ ಅಧಿಕಾರಿಗಳಾದ ಶ್ರೀಧರ ನಾಯ್ಕಿ ಹಾಗೂ ರಿಜ್ವಾನಅಹ್ಮದ, ಮತಗಟ್ಟೆ ಅಧಿಕಾರಿಗಳಾದ ಕಸ್ತೂರಿ ಮೇಲಗೇರಿ, ಎಮ್.ಎಸ್.ಮಲ್ಲಾಪೂರ, ಎಸ್.ಆರ್.ಮಜಮದಾರ, ಮೈಲಾರ ಕಬ್ಬೂರ ಹಾಗೂ ಲತಾ ನಾಯ್ಕಿ ಇವರನ್ನು ಸನ್ಮಾನಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button