Kannada NewsKarnataka NewsLatestPolitics

*ಅನಿಲ ಸಿಲಿಂಡರ್ ವ್ಯತ್ಯಯ; ಬಾಯಿಬಿಡದ ಕೇಂದ್ರ ಸರ್ಕಾರ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: “ಅನಿಲ ಸಿಲಿಂಡರ್ ಗಳು ಸರಿಯಾಗಿ ದೊರೆಯದೆ ಹೋಟೆಲ್ ಉದ್ದಿಮೆ ಮುಚ್ಚುವ ಹಂತಕ್ಕೆ ಬಂದಿದೆ. ದೇಶದಲ್ಲಿ ಸಮಸ್ಯೆ ತಲೆದೋರಿದೆ. ಆದರೂ ಕೇಂದ್ರ ಸರ್ಕಾರ ಬಾಯಿಬಿಡುತ್ತಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

“ದೇಶದ ವಿದೇಶಾಂಗ ನೀತಿ ಹಳ್ಳಹಿಡಿದಿದೆ. ಸರ್ಕಾರ ಇದರ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಬೇಕು. ಸಂಸದರು ಸಹ ಇದರ ಬಗ್ಗೆ ಮಾತನಾಡಬೇಕು. ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಅವರು ಹೋಟೆಲ್ ಗಳನ್ನು ಮುಚ್ಚಲು ತೀರ್ಮಾನ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗಳಿಗೂ ಹೊಡೆತ ಬೀಳಲಿದೆ. ಸರ್ಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು” ಎಂದು ಆಗ್ರಹಿಸಿದರು.

ಪರ್ಯಾಯ ಹಾಗೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಕೇಂದ್ರ

“ಮನೆ ಬಳಕೆಗೆ, ಉದ್ದಿಮೆಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಕಳೆದ 15 ದಿನಗಳಿಂದಲೂ ಈ ವಿಚಾರವಾಗಿ ಯಾವುದೇ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಿಲ್ಲ” ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಪೂರೈಸಿರುವ ಬಗ್ಗೆ ಕೇಳಿದಾಗ, “ಸೋನಿಯಾ ಗಾಂಧಿ ಅವರು ನನ್ನನ್ನು ಅಂದು ಆಯ್ಕೆ ಮಾಡಿದರು. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವಿಧಾನಸಭೆ ಕಲಾಪ ನಡೆಯುತ್ತಿರುವ ಕಾರಣಕ್ಕೆ ದೊಡ್ಡ ಸಮಾರಂಭ ಮಾಡುವುದನ್ನು ಮುಂದೂಡಲಾಯಿತು. ಇಂದು ಸಂಜೆ ಎಲ್ಲಾ ಶಾಸಕರಿಗೆ ಔತಣಕೂಟ ಏರ್ಪಡಿಸಲಾಗಿದೆ” ಎಂದು ಹೇಳಿದರು.

ನೀವು ಮುಖ್ಯಮಂತ್ರಿ ಆಗಬೇಕು ಎನ್ನುವ ಒತ್ತಾಯದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷ ನೀಡಿದ ಕರ್ತವ್ಯ, ಜವಾಬ್ದಾರಿಯನ್ನು ನಾನು ನಿಭಾಯಿಸುತ್ತಿದ್ದೇ‌ನೆ” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button