Kannada NewsKarnataka NewsLatestPolitics

*ಸಿಲಿಂಡರ್ ಕೊರತೆಯಿಂದ ಸಮಸ್ಯೆ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಇರಾನ್-ಇಸ್ರೇಲ್ ಯುದ್ಧದ ಪರುಣಾಮ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು, ಕರ್ನಾಟಕದಲ್ಲಿ ಅಡುಗೆ ಅನಿಲ ಹಾಗೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಹೆಚ್ಚುತ್ತಿದೆ. ಇದರಿಂದಾಗಿ ಜನ ಸಾಮಾನ್ಯರು ಹಾಗೂ ಹೋಟೆಲ್ ಮಾಲೀಕರು, ಆಟೋ ಚಾಲಕರು ಕೂಡ ಸಂಕಷ್ಟಕ್ಕೆ ಸುಲುಕುತ್ತಿದ್ದಾರೆ.

Home add -Advt

ಸಿಲಿಂಡರ್ ಕೊರತೆಯಿಂದ ಉಂಟಾದ ಸಮಸ್ಯೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಎಲ್‌ಪಿಜಿ ಉತ್ಪಾದನೆಗೆ ಗೃಹ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರಿನ ಹಲವು ಹೋಟೆಲ್ ಮತ್ತು ರೆಸ್ಟೋರೆಂಟ್​​ಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಹಲವಾರು ಹೋಟೆಲ್‌ಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸಾವಿರಾರು ಸಣ್ಣ ಹೋಟೆಲ್‌ಗಳು, ಮೆಸ್ಸುಗಳು ಮತ್ತು ಕೇಟರಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಲಕ್ಷಾಂತರ ಜನರು ಇವುಗಳ ಮೇಲೆ ಅವಲಂಬಿತರಿದ್ದಾರೆ. ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕಾಗಿ ಹೊರನಗರಗಳಿಂದ ಬಂದಿರುವ ಅನೇಕರು ದಿನನಿತ್ಯದ ಆಹಾರಕ್ಕಾಗಿ ಇಂತಹ ಹೋಟೆಲ್ ಮತ್ತು ಮೆಸ್ಸುಗಳನ್ನೇ ನಂಬಿಕೊಂಡಿದ್ದಾರೆ.

ರಾಜ್ಯದ ಕಮರ್ಷಿಯಲ್ ಎಲ್‌ಪಿಜಿ ಬೇಡಿಕೆಯನ್ನು ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್ , ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಮೂಲಕ ಪೂರೈಸಲಾಗುತ್ತದೆ. ಇದರಲ್ಲಿ ಐಒಸಿಎಲ್ ಪ್ರತಿದಿನ ಸುಮಾರು 500–550 ಮೆಟ್ರಿಕ್ ಟನ್, ಎಚ್‌ಪಿಸಿಎಲ್ 300 ಮೆಟ್ರಿಕ್ ಟನ್ ಮತ್ತು ಬಿಪಿಸಿಎಲ್ 230 ಮೆಟ್ರಿಕ್ ಟನ್ ವರೆಗೆ ಪೂರೈಕೆ ಮಾಡುತ್ತಿತ್ತು. ಆದರೆ ಈ ಪೂರೈಕೆಯಲ್ಲಿ ಉಂಟಾದ ಅಚಾನಕ್ ವ್ಯತ್ಯಯದಿಂದ ಈಗ ಬಳಕೆದಾರರಿಗೆ ದೊಡ್ಡ ಸಮಸ್ಯೆ ಎದುರಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್ ಹಾಗೂ ಕೇಟರಿಂಗ್ ಉದ್ಯಮಕ್ಕೆ ಅಗತ್ಯವಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.


Related Articles

Back to top button