*ಲಂಚ್ ಬ್ರೇಕ್ ಟೈಮ್ನಲ್ಲಿ ಕೆಲ್ಸ ಮಾಡಿದ್ದಕ್ಕೆ ಉದ್ಯೋಗಿ ವಜಾ*: *ಕಂಪನಿ ಕೊಟ್ಟ ಕಾರಣಕ್ಕೆ ನೆಟ್ಟಿಗರು ಶಾಕ್*

ಪ್ರಗತಿವಾಹಿನಿ ಸುದ್ದಿ: ಕಚೇರಿಯಲ್ಲಿ ಕೆಲಸವನ್ನು ಬೇಗ ಮುಗಿಸಿದರೆ ಮನೆಗೆ ಬೇಗ ಹೋಗಬಹುದು ಎಂದುಕೊಂಡಿದ್ದೀರಾ? ಆದರೆ ಕಂಪನಿಯೊಂದರಲ್ಲಿ ಉದ್ಯೋಗಿಯೊಬ್ಬನಿಗೆ ಇದೇ ನಿರ್ಧಾರ ಮುಳುವಾಗಿದೆ. ಮಧ್ಯಾಹ್ನದ ಊಟದ ವಿರಾಮವನ್ನೇ ಬಿಟ್ಟು ಕೆಲಸ ಮುಗಿಸಿ, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮನೆಗೆ ತೆರಳಿದ್ದಕ್ಕೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರತೀಕ್ ಶೆಟ್ಟಿ ಎಂಬುವವರು ಲಿಂಕ್ಡ್ಇನ್ನಲ್ಲಿ ಈ ಘಟನೆಗೆ ಸಂಬಂಧಿಸಿದ ಪೋಸ್ಟ್ ಹಂಚಿಕೊಂಡಿದ್ದಾರೆ. ‘ತಕ್ಷಣದ ವಜಾ – ಕಚೇರಿ ನೀತಿಯ ಉಲ್ಲಂಘನೆ’ ಎಂಬ ಶೀರ್ಷಿಕೆಯಡಿ ಉದ್ಯೋಗಿಯನ್ನು ವಜಾಗೊಳಿಸಲು ಕಂಪನಿ ನೀಡಿದ ಕಾರಣವನ್ನು ವಿವರಿಸಿದ್ದಾರೆ.
ಪೋಸ್ಟ್ನಲ್ಲಿರುವ ಮಾಹಿತಿಯ ಪ್ರಕಾರ, ಉದ್ಯೋಗಿಯೊಬ್ಬ ಮಧ್ಯಾಹ್ನದ ಊಟದ ವಿರಾಮ ತೆಗೆದುಕೊಳ್ಳದೆ ಕೆಲಸ ಮುಗಿಸಿದ್ದಾನೆ. ಬಳಿಕ ನಿಗದಿತ ಸಂಜೆ 6 ಗಂಟೆಯ ಬದಲು 5 ಗಂಟೆಗೇ ಕಚೇರಿಯಿಂದ ಮನೆಗೆ ತೆರಳಿದ್ದಾನೆ. ಆದರೆ ಕಂಪನಿಯ ನಿಯಮದ ಪ್ರಕಾರ ಕೆಲಸದ ಸಮಯ ಮುಗಿಯುವವರೆಗೂ ಉದ್ಯೋಗಿಗಳು ಕಚೇರಿಯಲ್ಲಿ ಇರಬೇಕು. ಊಟದ ವಿರಾಮ ಬಿಟ್ಟಿದ್ದೇನೆ ಎಂಬ ಕಾರಣಕ್ಕೆ ಬೇಗ ಮನೆಗೆ ಹೋಗಲು ಅವಕಾಶವಿಲ್ಲ ಎಂಬುದು ಆಡಳಿತ ಮಂಡಳಿಯ ನಿಲುವಾಗಿತ್ತು.
ಉದ್ಯೋಗಿಗಳಿಗೆ ಕೆಲಸದ ಸಮಯ ಮತ್ತು ವಿರಾಮದ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಒಬ್ಬರಿಗೆ ಇಂತಹ ವಿನಾಯಿತಿ ನೀಡಿದರೆ ಉಳಿದ ಉದ್ಯೋಗಿಗಳೂ ಇದೇ ರೀತಿ ನಡೆದುಕೊಳ್ಳಬಹುದು. ಇದರಿಂದ ಕಚೇರಿಯ ಶಿಸ್ತು ಹಾಳಾಗುತ್ತದೆ. ಇದು ಉದ್ಯೋಗಿಯ ವೈಯಕ್ತಿಕ ಕಂಪನಿಯಲ್ಲ, ಸಂಸ್ಥೆ ರೂಪಿಸಿರುವ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂಬ ಸಂದೇಶವನ್ನೂ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಉದ್ಯೋಗಿ ಹೀಗೆ ನಡೆದುಕೊಳ್ಳಲು ಕಾರಣವೇನು ಎಂಬುದನ್ನು ಕಂಪನಿ ಮೊದಲು ಕೇಳಬೇಕಿತ್ತು ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಕಂಪನಿಯ ನಿಯಮಗಳು ಎಲ್ಲ ಉದ್ಯೋಗಿಗಳಿಗೂ ಒಂದೇ ಆಗಿರಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನು ಕೆಲವರು, ಯಾವುದೇ ಮುನ್ಸೂಚನೆ ಅಥವಾ ವಿವರಣೆ ಕೇಳದೆ ಏಕಾಏಕಿ ಕೆಲಸದಿಂದ ವಜಾಗೊಳಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.




