
ಪ್ರಗತಿವಾಹಿನಿ ಸುದ್ದಿ: ಮನೆ ಬಾಡಿಗೆಗೆ ಕೊಡುವ ಮುನ್ನ ಎಷ್ಟೇ ಎಚ್ಚರವಹಿಸಿದರೂ ಕಡಿಮೆಯೇ. ಸರಿಯಾಗಿ ವಿಚಾರಿಸದೇ ಯಾರೆಂದರೆ ಯಾರಿಗೆ ಬಾಡಿಗೆ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲೊಂದು ಮನೆ ಮಾಲಕಿಗೆ ಬಾಡಿಗೆಗೆ ಇದ್ದ ದಂಪತಿಗಳೇ ಮೋಸ ಮಾಡಿರುವ ಘಟನೆ ನಡೆದಿದೆ.
ವಿಚಾರಿಸದೇ ಮನೆಯನ್ನು ದಂಪತಿಗೆ ಬಾಡಿಗೆಗೆ ನೀಡಿದ್ದ ಮಹಿಳಾ ಮಾಲೀಕರೋರ್ವರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ನಡೆದಿದೆ. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಬಂಗಾರ ಮತ್ತು ಹಣವನ್ನು ದೋಚಿ ದಂಪತಿ ಎಸ್ಕೇಪ್ ಆಗಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಉತ್ತರ ತಾಳೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ.
ಚಿಕ್ಕಗೊಲ್ಲರಹಟ್ಟಿಯಲ್ಲಿ ಸ್ವಂತ ಮನೆ ಹೊಂದಿದ್ದ 60 ವರ್ಷದ ಮಹಿಳೆ ಜಯಲಕ್ಷ್ಮೀ ಎಂಬವರು ಒಂಟಿಯಾಗಿ ವಾಸಿಸುತ್ತಿದ್ದರು. ಈ ನಡುವೆ ಎರಡು ತಿಂಗಳ ಹಿಂದೆ ಪೂಜಾ ಮತ್ತು ರಾಜು ಎಂಬ ದಂಪತಿ ಬಾಡಿಗೆಗೆ ಬಂದಿದ್ದರು. ಅವರಿಗೆ ಒಂದು ಹೆಣ್ಣು ಮಗುವೂ ಇತ್ತು. ಮೊನ್ನೆ ಶುಕ್ರವಾರ ಜಯಲಕ್ಷ್ಮೀ ಅವರ ಬಳಿ ಬಂದು ಫಿಶ್ ವರ್ಲ್ಡ್ಗೆ ಹೋಗಿ ಬರೋಣ ಬನ್ನಿ ಆಂಟಿ. ಒಬ್ಬರೇ ಮನೆಯಲ್ಲಿ ಇದ್ದು ಏನು ಮಾಡುತ್ತೀರಾ ಎಂದು ಪೂಜಾ ಪುಸಲಾಯಿಸಿದ್ದಳು. ಗಂಡ ಆಮೇಲೆ ಬರುತ್ತಾನೆ, ನಾವು ಮುಂದೆ ಹೋಗಣ ಎಂದು ನಂಬಿಸಿ ಮಗಳ ಜೊತೆ ಜಯಲಕ್ಷ್ಮೀ ಅವರನ್ನು ಕರೆದೊಯ್ದಿದ್ದಳು.
ಪತ್ನಿ ಜೊತೆ ಮನೆ ಮಾಲಕಿ ಹೊರಡುತ್ತಿದ್ದಂತೆ ಇತ್ತ ರಾಜು ನಕಲಿ ಕೀ ಬಳಸಿ ಮಾಲಕಿಯ ಮನೆಗೆ ನುಗ್ಗಿದ್ದಾನೆ. ಚಿನ್ನ, ಹಣವನ್ನು ದೋಚಿದ್ದಾನೆ. ಮತ್ತೊಂದೆಡೆ ಜಯಲಕ್ಷ್ಮೀ ಅವರನ್ನು ಫಿಶ್ ವರ್ಲ್ಡ್ಗೆ ಕರೆದುಕೊಂಡು ಹೋಗಿದ್ದ ಪೂಜಾ, ಮಗಳಿಗೆ ವಾಶ್ರೂಮ್ಗೆ ಹೋಗಬೇಕಂತೆ. ನೀವು ಇಲ್ಲೇ ಕುಳಿತಿರಿ ಆಂಟಿ ಎಂದು ಹೇಳಿಹೋಗಿದ್ದವಳು ಮರಳಿ ಬರಲೇ ಇಲ್ಲ. ಆಕೆಗಾಗಿ ಕಾದು ಕಾದು ಸುಸ್ತಾತ ಜಯಲಕ್ಷ್ಮಿ ಅವರು ಮನೆಗೆ ಮರಳಿದ್ದಾರೆ. ಈ ವೇಳೆ ಮನೆಯ ಬಾಗಿಲಿಗೆ ಹಾಕಿದ್ದ ಎರಡು ಲಾಕ್ಗಳ ಪೈಕಿ ಒಂದು ಓಪನ್ ಆಗಿಯೇ ಇರುವುದು ಕಂಡುಬಂದಿದೆ. ಅನುಮಾನಗೊಂಡು ಪರಿಶೀಲಿಸಿದಾಗ 40 ಲಕ್ಷ ಬೆಲೆಬಾಳುವ 450 ಗ್ರಾಂ ಚಿನ್ನಾಭರಣ ಮತ್ತು ಎರಡು ಲಕ್ಷ ನಗದು ಕಳ್ಳತನವಾಗಿರುವಿದು ಗೊತ್ತಾಗಿದೆ.
ತಕ್ಷಣ ಜಯಲಕ್ಷ್ಮೀ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ದಂಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.




