*ಖಾಸಗಿ ವಿಡಿಯೋ ಅಳಿಸುವುದಾಗಿ ಮಾತು ಕೊಟ್ಟಿದ್ದ ಪ್ರಿಯಕರ*: *ಬ್ರೇಕಪ್ ಬಳಿಕ ಮಾಜಿ ಪ್ರಿಯತಮೆಗೆ ಕಾದಿತ್ತು ಬಿಗ್ ಶಾಕ್*

ಪ್ರಗತಿವಾಹಿನಿ ಸುದ್ದಿ: ಪ್ರೀತಿ ಇರುವಾಗ ಎಲ್ಲವೂ ಸರಿಯಾಗಿತ್ತು. ಆದರೆ ಸಂಬಂಧ ಮುರಿದುಬಿದ್ದ ಬಳಿಕ ಪರಿಸ್ಥಿತಿಯೇ ಬದಲಾಗಿದೆ. ತನ್ನ ಖಾಸಗಿ ವಿಡಿಯೋಗಳನ್ನು ಅಳಿಸಿಹಾಕುವಂತೆ ಯುವತಿ ಮಾಜಿ ಪ್ರಿಯಕರನಿಗೆ ಮನವಿ ಮಾಡಿದ್ದಳು. ಆತ ಕೂಡ ವಿಡಿಯೋ ಅಳಿಸುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಆದರೆ ಕೆಲವೇ ದಿನಗಳಲ್ಲಿ ಸ್ನೇಹಿತರಿಂದ ಬಂದ ಒಂದು ಮಾಹಿತಿ ಯುವತಿಯನ್ನು ಆತಂಕಕ್ಕೆ ದೂಡಿದೆ.
26 ವರ್ಷದ ಯುವತಿ ಮತ್ತು ಯುವಕ 2023ರಿಂದ 2024ರವರೆಗೆ ಪ್ರೀತಿಯಲ್ಲಿದ್ದರು. ಈ ಅವಧಿಯಲ್ಲಿ ಇಬ್ಬರೂ ಲಿವ್ಇನ್ ಸಂಬಂಧದಲ್ಲಿದ್ದು, ಒಟ್ಟಿಗೆ ವಾಸವಾಗಿದ್ದರು. ಆಗ ಇಬ್ಬರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಸಂಬಂಧ ಮುರಿದುಬಿದ್ದಿತ್ತು. ದೂರವಾದ ಬಳಿಕ ತನ್ನ ಖಾಸಗಿ ವಿಡಿಯೋಗಳ ಸುರಕ್ಷತೆಯ ಬಗ್ಗೆ ಆತಂಕಗೊಂಡ ಯುವತಿ, ಅವುಗಳನ್ನು ಅಳಿಸಿಹಾಕುವಂತೆ ಮಾಜಿ ಪ್ರಿಯಕರನಿಗೆ ಮನವಿ ಮಾಡಿದ್ದಳು. ಅದಕ್ಕೆ ಒಪ್ಪಿದ್ದ ಯುವಕ ವಿಡಿಯೋಗಳನ್ನು ಅಳಿಸುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ.
ಆದರೆ, ಕೆಲವು ದಿನಗಳ ಬಳಿಕ ಅಶ್ಲೀಲ ಜಾಲತಾಣವೊಂದರಲ್ಲಿ ತನ್ನ ಖಾಸಗಿ ವಿಡಿಯೋಗಳು ಅಪ್ಲೋಡ್ ಆಗಿರುವುದನ್ನು ಸ್ನೇಹಿತರು ಯುವತಿಯ ಗಮನಕ್ಕೆ ತಂದಿದ್ದಾರೆ. ಇದರಿಂದ ಆತಂಕಗೊಂಡ ಯುವತಿ ಮಾಜಿ ಪ್ರಿಯಕರನನ್ನು ಪ್ರಶ್ನಿಸಿದ್ದಾಳೆ. ಈ ವೇಳೆ ಹಳೆಯ ವಿಡಿಯೋಗಳು ತನ್ನ ಬಳಿ ಇರುವುದು ನಿಜ ಎಂದು ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ತನ್ನ ಅನುಮತಿಯಿಲ್ಲದೆ ಖಾಸಗಿ ವಿಡಿಯೋಗಳನ್ನು ಜಾಲತಾಣಕ್ಕೆ ಅಪ್ಲೋಡ್ ಮಾಡಿರುವ ಆರೋಪದಡಿ ಯುವತಿ ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ವಿಡಿಯೋಗಳ ಮೂಲ ಪತ್ತೆಗೆ ಪೊಲೀಸರ ತನಿಖೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಡಿಯೋಗಳನ್ನು ಯಾವಾಗ ಚಿತ್ರೀಕರಿಸಲಾಗಿತ್ತು, ಯಾವ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿದೆ ಮತ್ತು ಅದರಲ್ಲಿ ಆರೋಪಿಯ ಪಾತ್ರವೇನು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಅಲ್ಲದೆ, ವಿಡಿಯೋಗಳು ಮತ್ತಷ್ಟು ಹರಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಬಂಧ ಮುರಿದ ಬಳಿಕ ಖಾಸಗಿ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪ ಇದೀಗ ತನಿಖೆಯಲ್ಲಿದೆ.




