Kannada NewsKarnataka NewsPolitics

*ಶಾಸಕ ಸತೀಶ್ ರೆಡ್ಡಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿರುದ್ಧ ಸಲ್ಲಿಕೆಯಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಉಮಾಪತಿ ಶ್ರೀನಿವಾಸ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಚುನಾವಣಾ ಅರ್ಜಿ ಸಲ್ಲಿಸುವ ಮೊದಲು ಪಾಲಿಸಬೇಕಾದ ಕಡ್ಡಾಯ ನಿಯಮಗಳನ್ನು ಅನುಸರಿಸದಿರುವುದು ಹಾಗೂ ಅರ್ಜಿ ಸಲ್ಲಿಕೆಯಲ್ಲಿ ವಿಳಂಬವಾಗಿರುವ ಕಾರಣಕ್ಕೆ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉಮಾಪತಿ ಶ್ರೀನಿವಾಸ್ ಗೌಡ ಸೋಲು ಅನುಭವಿಸಿದ್ದರು.

ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರು ಅರ್ಜಿಯನ್ನು ವಜಾಗೊಳಿಸಿದ್ದು, ಚುನಾವಣಾ ಅರ್ಜಿ ಸಲ್ಲಿಸುವ ಮೊದಲು 2,000 ರೂಪಾಯಿ ಭದ್ರತಾ ಠೇವಣಿ ಪಾವತಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 117ರ ಅಡಿಯಲ್ಲಿ ಚುನಾವಣಾ ಅರ್ಜಿ ಸಲ್ಲಿಸುವ ಮೊದಲು 2,000 ರೂಪಾಯಿ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿದೆ. ಈ ಠೇವಣಿಯನ್ನು ಮನ್ನಾ ಮಾಡಲು, ಮೊತ್ತವನ್ನು ಕಡಿಮೆ ಮಾಡಲು ಅಥವಾ ಠೇವಣಿ ಪಾವತಿಸದಿರುವುದನ್ನು ಕ್ಷಮಿಸಲು ಹೈಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

2023ರ ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಜೂನ್ 27ರಂದು ಸಂಜೆ 3.55ಕ್ಕೆ, ಅಂದರೆ ಫಲಿತಾಂಶ ಪ್ರಕಟವಾದ 45 ದಿನಗಳ ಬಳಿಕ ಉಮಾಪತಿ ಶ್ರೀನಿವಾಸ್ ಗೌಡ ಚುನಾವಣಾ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಕೌಂಟರ್ ಮುಚ್ಚಲು ಕೇವಲ ಐದು ನಿಮಿಷ ಬಾಕಿ ಇರುವಾಗ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕಡ್ಡಾಯವಾಗಿ ಪಾವತಿಸಬೇಕಿದ್ದ 2,000 ರೂಪಾಯಿ ಭದ್ರತಾ ಠೇವಣಿಯನ್ನು ಮರುದಿನ ಅಂದರೆ ಜೂನ್ 28ರಂದು ಪಾವತಿಸಲಾಗಿತ್ತು.

ಚುನಾವಣಾ ಅರ್ಜಿ ಸಲ್ಲಿಸುವ ಮೊದಲು ವೆಚ್ಚದ ಭದ್ರತಾ ಠೇವಣಿ ಪಾವತಿಸದಿರುವುದನ್ನು ಅರ್ಜಿದಾರರು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಮರುದಿನ ಠೇವಣಿ ಪಾವತಿಸಿದ್ದಾರೆ. ಅಂದು ಚುನಾವಣಾ ಫಲಿತಾಂಶ ಪ್ರಕಟವಾಗಿ 46ನೇ ದಿನವಾಗಿತ್ತು. ಹೀಗಾಗಿ, ಸಿವಿಲ್ ಪ್ರಕ್ರಿಯಾ ಸಂಹಿತೆಯ ಆದೇಶ XII ನಿಯಮ 6ರ ಅಡಿಯಲ್ಲಿ ಅರ್ಜಿಯನ್ನು ಆರಂಭಿಕ ಹಂತದಲ್ಲೇ ವಜಾಗೊಳಿಸಲು ಅಗತ್ಯವಾದ ಷರತ್ತುಗಳು ಪೂರೈಸಲ್ಪಟ್ಟಿವೆ ಎಂದು ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದ್ದಾರೆ.

Related Articles

Back to top button