*ಗ್ರಾಮೀಣ, ಪಟ್ಟಣಗಳ ಜನರಿಗೂ ಸೂಪರ್ ಸ್ಪೆಶಾಲಿಟಿ ವೈದ್ಯರು ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ದೊರೆಯವಂತಾಗಬೇಕು*: *ಡಾ.ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುತ್ತಿವೆ. ಸಿಟಿ ಮತ್ತು ಎಂಐಆರ್ ಸ್ಕ್ಯಾನಿಂಗ್ನಂತಹ ವೈದ್ಯಕೀಯ ಪರೀಕ್ಷೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ಭವಿಷ್ಯದಲ್ಲಿ ಈ ತಂತ್ರಜ್ಞಾನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವ ಸಂಕಲ್ಪ ಮಾಡಲಾಗಿದೆ. ಕೇವಲ ಮೆಟ್ರೋ ನಗರಗಳಲ್ಲಿ ಸೇವೆ ಸಲ್ಲಿಸದೇ ಗ್ರಾಮೀಣ, ಪಟ್ಟಣಗಳ ಜನರಿಗೆ ಸೂಪರ್ ಸ್ಪೆಶಾಲಿಟಿ ವೈದ್ಯರು ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ದೊರೆಯವಂತಾಗಬೇಕು ಎಂದು ಕೆಎಲ್ಇ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ಕೆಎಲ್ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿಯಲ್ಲಿ ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ರೆಡಿಯಾಲಾಜಿ ವಿಭಾಗವು ಆಯೋಜಿಸಿದ್ದ ಇಂಡಿಯನ್ ರೇಡಿಯಾಲಜಿಕಲ್ ಆ್ಯಂಡ್ ಇಮೇಜಿಂಗ್ ಅಸೋಸಿಯೇಷನ್ (IRIA) ಕರ್ನಾಟಕ ರಾಜ್ಯ ಘಟಕದ 31ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಆರೋಗ್ಯ ಕ್ಷೇತ್ರಕ್ಕೂ ಆದ್ಯತೆ ನೀಡುತ್ತಾ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. 1996ರಲ್ಲಿ ಸುಮಾರು 100 ಹಾಸಿಗೆಗಳ ಮೂಲಕ ಆರಂಭವಾದ ಆರೋಗ್ಯ ಸೇವೆ ಇಂದು 5000 ಹಾಸಿಗೆಗಳ ಆಸ್ಪತ್ರೆಗಳ ನಡೆಸುತ್ತಿದೆ. ಪ್ರಸ್ತುತ ವಿವಿಧ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳನ್ನೂ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ 1,000 ಹಾಸಿಗೆಗಳ ಆಸ್ಪತ್ರೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಪ್ರತಿ ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಆರಂಭಿಸುವ ಯೋಜನೆಯಿದ್ದು, ಬೆಂಗಳೂರಿನಲ್ಲಿ 1,000 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಕೆಎಲ್ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಂದೀಪ ಶ್ರವಾತ್ಸವ ಅವರು ಮಾತನಾಡಿ, ನವೆಂಬರ್ 8, 1895ರಂದು ಭೌತಶಾಸ್ತ್ರಜ್ಞ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಅವರು ಎಕ್ಸ್ರೇ ಕಿರಣಗಳನ್ನು ಕಂಡುಹಿಡಿದ ಐತಿಹಾಸಿಕ ಘಟನೆಗೆ ಇದೀಗ 130 ವರ್ಷಗಳು ಪೂರ್ಣಗೊಂಡಿವೆ. ಅಂದಿನಿಂದ ವೈದ್ಯಕೀಯ ಚಿತ್ರಣ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಬೆಳವಣಿಗೆಗಳು ಸಂಭವಿಸಿವೆ. ಎಕ್ಸ್ರೇಯಿಂದ ಆರಂಭವಾದ ಈ ಪಯಣ ಇಂದು ಸಿಟಿ ಸ್ಕ್ಯಾನ್, ಎಂಆರ್ಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳವರೆಗೆ ವಿಸ್ತರಿಸಿದೆ. ಒಂದು ಕಾಲದಲ್ಲಿ ರೇಡಿಯಾಲಜಿಸ್ಟ್ಗಳ ಕೆಲಸ ವೈದ್ಯಕೀಯ ಚಿತ್ರಗಳನ್ನು ವಿಶ್ಲೇಷಿಸುವುದಕ್ಕೆ ಸೀಮಿತವಾಗಿತ್ತು. ಆದರೆ ಇಂದು ಅವರು ವೈದ್ಯಕೀಯ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಇಂಟರವೆನ್ಶನಲ್ ನ್ಯೂರೊ ಪ್ರಕ್ರಿಯೆ, ಬಾಡಿ ಇಮೇಜಿಂಗ್ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ನೆರವೇರಿಸುತ್ತಿದ್ದಾರೆ ಎಂದು ತಿಳಿಸಿದರು.
ಐಆರ್ ಐಎ ನಿಕಟಪೂರ್ವ ಅಧ್ಯಕ್ಷರಾದ ಡಾ. ಸಿ ಅಮರನಾಥ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ (AI) ರೇಡಿಯಾಲಜಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ. ಎಐ ಅತ್ಯಂತ ಶಕ್ತಿಶಾಲಿ ಸಾಧನವಾಗಿದ್ದರೂ ವೈದ್ಯರ ವೈದ್ಯಕೀಯ ನಿರ್ಧಾರ ಸಾಮರ್ಥ್ಯ, ಅನುಭವ ಮತ್ತು ವೃತ್ತಿಪರ ನೈತಿಕ ಮೌಲ್ಯಗಳಿಗೆ ಯಾವಾಗಲೂ ಮಹತ್ವವಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ರೇಡಿಯಾಲಜಿಸ್ಟ್ ಎಐ ತಂತ್ರಜ್ಞಾನದ ಬಗ್ಗೆ ಅಗತ್ಯ ಜ್ಞಾನ ಮತ್ತು ಅರಿವು ಬೆಳೆಸಿಕೊಳ್ಳಬೇಕು ಎಂದ ಅವರು ಮಹಿಳೆಯರ ಮತ್ತು ಭ್ರೂಣದ ಆರೋಗ್ಯ ರಕ್ಷಣೆಯಲ್ಲಿ ರೇಡಿಯಾಲಜಿಸ್ಟ್ಗಳ ಪಾತ್ರ ಮಹತ್ವದ್ದಾಗಿದೆ. ಭಾರತೀಯ ರೇಡಿಯಾಲಜಿಸ್ಟ್ಗಳು ಜಾಗತಿಕ ವೇದಿಕೆಯಲ್ಲಿ ಹೆಚ್ಚಿನ ನಾಯಕತ್ವದ ಪಾತ್ರ ವಹಿಸುವ ಸಮಯ ಬಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಡಾ. ಎಸ್.ಕೆ. ಜೋಶಿ ಹಾಗೂ ಡಾ. ವೆಂಕಟೇಶ್ ಕಾರಂತ ಅವರನ್ನು ಗೌರವಿಸಲಾಯಿತು. ವೇದಿಕೆ ಮೇಲೆ ಡಾ. ಸುಧೀರ್, ಕಾಹೆರನ ಕುಲಸಚಿವ ಡಾ. ವಿ ಎಂ ಪಟ್ಟಣಶೆಟ್ಟಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಡಾ. ಕರ್ನಲ್ ಎಂ ದಯಾನಂದ, ಡಾ. ರಾಜೇಂದ್ರ ಮಾಳಿ, ಡಾ. ಸಂತೋಷ ಪಾಟೀಲ, ಡಾ. ಪ್ರದೀಪ ಪಾಟೀಲ, ಡಾ. ವಿರುಪಾಕ್ಷ ಹಟ್ಟಿಹೊಳಿ, ಡಾ. ಪೂಜಾ ಕವಟಗಿಮಠ, ಡಾ. ಪ್ರದೀಪ ಗೌಡರ, ಐಆರ್ ಐ ಎ ಅಧ್ಯಕ್ಷರಾದ ಡಾ. ಸಂದೀಪ ಕವಟಾಳೆ, ಡಾ. ಉಮೇಶ ಕೃಷ್ಣಮೂರ್ತಿ, ಡಾ. ವಿಜಯಸರದಿ, ಡಾ. ಅಶ್ವಿನ ಪಾಟೀಲ,ಡಾ. ಈರಣ್ಣ ಪಲ್ಲೇದ,ಡಾ. ಅಭಿನಂದನ ರೂಗೆ, ಡಾ. ಸುಷ್ಮಿತಾ ಕವಟಗಿಮಠ,ಡಾ. ನವೀನ ಮೂಲಿಮನಿ, ಡಾ. ಬಸವರಾಜ ಬಿರಾದಾರ, ಒವೆಸ್ ತೆಂಗಿನಕೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



