Kannada NewsKarnataka NewsLatestPolitics

‘40 ವರ್ಷಗಳ ರಾಜಕಾರಣದಲ್ಲಿ ಯಾರನ್ನೂ ಜಾತಿ ಕೇಳಿಲ್ಲ’: ಚರ್ಚೆ ಹುಟ್ಟುಹಾಕಿದ ಡಿಕೆಶಿ ಹೇಳಿಕೆ

ಪ್ರಗತಿವಾಹಿನಿ ಸುದ್ದಿ: ರಾಜಕೀಯದಲ್ಲಿ ಜಾತಿಗಿಂತ ಮನುಷ್ಯತ್ವವೇ ದೊಡ್ಡದು. ಸೂರ್ಯ ಮತ್ತು ಚಂದ್ರನಿಗೂ ಜಾತಿಯಿಲ್ಲ, ಸೂರ್ಯ ಬೆಳಕು ನೀಡುವಾಗ ಯಾರ ಜಾತಿಯನ್ನೂ ಕೇಳುವುದಿಲ್ಲ. ಹೀಗಿರುವಾಗ ಮನುಷ್ಯರು ಜಾತಿಯ ಹೆಸರಿನಲ್ಲಿ ಏಕೆ ಭೇದಭಾವ ಮಾಡಬೇಕು? ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ಮಾಡಿದ ಈ ಭಾಷಣದ ಮಾತುಗಳು ಗಮನ ಸೆಳೆದಿವೆ. ಇದೇ ವೇಳೆ ತಮ್ಮ 40 ವರ್ಷಗಳ ರಾಜಕೀಯ ಪಯಣ, ಕ್ಷೇತ್ರದ ಜನರ ಬೆಂಬಲ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.

ಕನಕಪುರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪರಿಶಿಷ್ಟ ಜಾತಿ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೃತಜ್ಞತಾ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಡಿಕೆಶಿ ಮಾತನಾಡಿದ್ದಾರೆ.

ನನಗೆ ಜಾತಿಯ ಮೇಲೆ ನಂಬಿಕೆ ಇಲ್ಲ. ಮನುಷ್ಯತ್ವ ಬಹಳ ಮುಖ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಮತ್ತು ಬಸವಣ್ಣನವರ ಆಶಯಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದೇನೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾರನ್ನೂ ಅವರ ಜಾತಿ ಯಾವುದು ಎಂದು ಕೇಳಿಲ್ಲ. ಮಾನವೀಯತೆಯೇ ಬಹುದೊಡ್ಡ ಧರ್ಮ ಎಂದು ನಂಬಿದ್ದೇನೆ ಎಂದು ಹೇಳಿದರು.

10 ಬಾರಿ ಗೆಲ್ಲಿಸಿದ ಜನರಿಗೆ ಕೃತಜ್ಞತೆ

ನನಗೆ ಸಿಕ್ಕಿರುವ ಅಧಿಕಾರ ನನ್ನದಲ್ಲ, ಅದು ನಿಮ್ಮದು. ಸಾತನೂರು ಮತ್ತು ಕನಕಪುರದ ಜನರು 10 ಬಾರಿ ನನ್ನನ್ನು ಆಯ್ಕೆ ಮಾಡಿ ಆಶೀರ್ವದಿಸಿದ್ದಾರೆ. ಇಂದು ನನಗೆ ಸಿಕ್ಕಿರುವ ಸನ್ಮಾನದ ಶ್ರೇಯಸ್ಸು ನಿಮಗೇ ಸಲ್ಲಬೇಕು. ನೀವು ಸೇವೆ ಮಾಡುವ ಅವಕಾಶ ಕೊಟ್ಟಿದ್ದೀರಿ. ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಕ್ಷೇತ್ರದ ಗೌರವ ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಾನು ಈವರೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಮುಂದೆಯೂ ಹಾಗೆಯೇ ನಡೆದುಕೊಳ್ಳುತ್ತೇನೆ. ಕನಕಪುರದ ರಸ್ತೆ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುತ್ತೇನೆ. ಕನಕಪುರ ಎಂದರೆ ಇಡೀ ದೇಶವೇ ತಿರುಗಿ ನೋಡುವಂತೆ ಮಾಡುವುದು ನನ್ನ ಗುರಿ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ವೈರಮುಡಿ ಅವರನ್ನು ಆಯ್ಕೆ ಮಾಡಿದ್ದನ್ನು ಸ್ಮರಿಸಿದ ಅವರು, ತಮ್ಮ ನಿರ್ಧಾರಕ್ಕೆ ವಿರೋಧ ವ್ಯಕ್ತವಾದರೂ ಹಿಂದೆ ಸರಿಯಲಿಲ್ಲ. ಜಾತಿಗಿಂತ ವ್ಯಕ್ತಿ ಮತ್ತು ನಂಬಿಕೆ ಮುಖ್ಯ ಎಂಬುದನ್ನು ಅಂದು ತೋರಿಸಿದ್ದೇನೆ ಎಂದು ಹೇಳಿದರು.

5 ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ವೆಚ್ಚ

ಈ ಬಾರಿಯ ಚುನಾವಣೆಯಲ್ಲಿ ಮತ ಕೇಳಲು ಪ್ರತಿಯೊಂದು ಮನೆಗೂ ಹೋಗಿರಲಿಲ್ಲ. ಆದರೆ ಸಿದ್ದರಾಮಯ್ಯ ಮತ್ತು ತಾವು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆವು. ಜನರು 136 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜನರಿಗೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2 ಸಾವಿರ ಮತ್ತು ಉಚಿತ ಬಸ್ ಪ್ರಯಾಣದ ಅವಕಾಶ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ₹52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಹಿಂದೆ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಿದವರು 2 ಸಾವಿರ ಲಂಚ ನೀಡಬೇಕಾದ ಪರಿಸ್ಥಿತಿ ಇತ್ತು. ಅದನ್ನು ತಪ್ಪಿಸಲು ಸಮಿತಿ ರಚಿಸಿ, ವೃದ್ಧಾಪ್ಯ ಸೇರಿದಂತೆ ವಿವಿಧ ಪಿಂಚಣಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳಿದರು.

ಬಡವರಿಗಾಗಿ 15 ಸಾವಿರ ನಿವೇಶನಗಳನ್ನು ನೀಡಲು ಸಿದ್ಧತೆ ನಡೆಸಲಾಗಿದೆ. ಕನಕಪುರದಲ್ಲಿ ಈಗಾಗಲೇ 80 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಬಡವರಿಗೆ 20×30 ಅಳತೆಯ ಬದಲಿಗೆ 30×40 ಅಳತೆಯ ನಿವೇಶನ ನೀಡುವಂತೆ ಮಾರ್ಗದರ್ಶನ ಮಾಡಿದ್ದೇನೆ. ಪ್ರತಿಯೊಬ್ಬ ಬಡವರೂ ಕಾರು ಖರೀದಿಸಬೇಕು, ಮನೆಯಲ್ಲಿ ಹಸು ಕಟ್ಟಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು.

ಮೇಕೆದಾಟು ಯೋಜನೆ ಪೂರ್ಣಗೊಳಿಸುವ ಭರವಸೆ

ಕ್ಷೇತ್ರದ ಜನರು ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗಬಾರದು ಎಂಬ ಉದ್ದೇಶದಿಂದ ಚನ್ನಪಟ್ಟಣ ಮತ್ತು ರಾಮನಗರದ ಮಧ್ಯೆ ಬೃಹತ್ ಡೈರಿ ಸ್ಥಾಪಿಸಲಾಗಿದೆ. ಹಾಲಿನ ಬೆಲೆಯನ್ನು ₹7 ಹೆಚ್ಚಿಸುವ ಮೂಲಕ ರೈತರ ಬದುಕು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನೂ ರೂಪಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಪ್ರತಿ ಹಳ್ಳಿಗೂ ಕಾವೇರಿ ನೀರು ಹರಿಸುವ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸುವಂತೆ ಕ್ಷೇತ್ರದ ಜನರು ಸೂಚಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಈ ಯೋಜನೆಯನ್ನು ತಮ್ಮ ಅವಧಿಯಲ್ಲೇ ಪೂರ್ಣಗೊಳಿಸುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ನಾಲ್ಕು ವೈದ್ಯಕೀಯ ಕಾಲೇಜುಗಳ ಹೆಗ್ಗಳಿಕೆ

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳಿವೆ. ಚನ್ನಪಟ್ಟಣದ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು, ರಾಮನಗರದ ವಿಶ್ವವಿದ್ಯಾಲಯ, ಹಾರೋಹಳ್ಳಿ ಮತ್ತು ಕನಕಪುರ ನಡುವಿನ ದಯಾನಂದ ಸಾಗರ ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಸಾತನೂರು, ಕೆಂಬಾಳ, ಕಲ್ಲಹಳ್ಳಿ, ಮರಿಯ್ಯನದೊಡ್ಡಿ ಸೇರಿದಂತೆ 10 ಕಡೆ ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಅವರು ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಬೇಕು ಎಂಬುದು ನನ್ನ ಆಶಯ ಎಂದರು.

ಜನರ ಭೇಟಿಗೆ ಹೆಚ್ಚು ಸಮಯ ನೀಡುವೆ

ಕ್ಷೇತ್ರದ ಜನರಿಗೆ ತಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಗೊತ್ತಿದೆ. ಅಧಿವೇಶನ ಮುಗಿದ ಬಳಿಕ ಜನರ ಭೇಟಿಗೆ ಹೆಚ್ಚಿನ ಸಮಯ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇನೆ. ಟೀಕೆ ಮಾಡುವವರು ಮಾಡಲಿ. ಆದರೆ ನಾನು ಏನು ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಹೇಳಿದರು.

ನೇಗಿಲಯೋಗಿ ಯೋಜನೆಯಡಿ ರೈತರಿಗೆ ಉಚಿತವಾಗಿ ಹೊಲ ಉಳುವ ವ್ಯವಸ್ಥೆ, ತೇಗದಸಿರಿ ಯೋಜನೆಯಡಿ ರಸ್ತೆ ಬದಿಯಲ್ಲಿ ತೇಗದ ಮರಗಳನ್ನು ಬೆಳೆಸುವ ಯೋಜನೆ ಹಾಗೂ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆ ಆಲಿಸುವ ಪ್ರಜಾಸೇವೆ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಕೊನೆಯಲ್ಲಿ ಸಂವಿಧಾನದ ಮಹತ್ವವನ್ನು ವಿವರಿಸಿದ ಅವರು, ಜಾತಿ, ಧರ್ಮ ಮತ್ತು ಸಮಾನತೆಯ ವಿಚಾರದಲ್ಲಿ ಸಂವಿಧಾನವೇ ಮುಖ್ಯ. ಮುಸ್ಲಿಮರು, ಕ್ರೈಸ್ತರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರೆಲ್ಲರೂ ಸಮಾನರು. ಎಲ್ಲಾ ಧರ್ಮಗಳಿಗೂ ಗೌರವ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

Related Articles

Back to top button