*ಒಂದು ವರ್ಷದ ಹುಡುಕಾಟಕ್ಕೆ ಕೊನೆ*: *ಜೈಲಿನಲ್ಲೇ ಸಿಕ್ಕ ಮನೆಕಳ್ಳನ ಹಿನ್ನೆಲೆ ಕೇಳಿದರೆ ಬೆಚ್ಚಿಬೀಳುತ್ತೀರಿ*

ಪ್ರಗತಿವಾಹಿನಿ ಸುದ್ದಿ: ಮನೆಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಾಗಿ ಸತತ ಹುಡುಕಾಟ ನಡೆದಿತ್ತು. ಊರೆಲ್ಲಾ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸರಿಗೆ ಆತ ಸಿಕ್ಕಿದ್ದು ಮಾತ್ರ ಜೈಲಿನಲ್ಲೇ! ಅಷ್ಟೇ ಅಲ್ಲ, ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈತ ಜೈಲಿನಲ್ಲಿದ್ದಾಗಲೇ ವೈದ್ಯೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ ಎಂಬ ಅಚ್ಚರಿಯ ಸಂಗತಿಯೂ ಹೊರಬಂದಿದೆ.
ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿ 2025ರ ನವೆಂಬರ್ನಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಮೂಲದ ಪ್ರಶಾಂತ್ ಮೊಗವೀರ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿಯನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಒಂದು ವರ್ಷದ ಹಿಂದಿನ ಕಳ್ಳತನದ ಪ್ರಕರಣ ಬಯಲಾಗಿದೆ.
ಪ್ರಶಾಂತ್ ಜೈಲಿನಲ್ಲಿದ್ದಾಗ ಪರಿಚಯವಾಗಿದ್ದ ನಿತೀಶ್ ಡೂಪ್ಲೆ, ಭೀಮಾ ಮತ್ತು ಮಲ್ಲಿಕಾರ್ಜುನ ಎಂಬ ಮೂವರೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ. ಈ ಮೂವರು ಜೈಲಿನಿಂದ ಬಿಡುಗಡೆಯಾದ ಬಳಿಕ, ವೈದ್ಯಕೀಯ ಕಾರಣ ನೀಡಿ ಪೆರೋಲ್ ಮೇಲೆ ಹೊರಬಂದಿದ್ದ ಪ್ರಶಾಂತ್ ಅವರೊಂದಿಗೆ ಸೇರಿಕೊಂಡಿದ್ದ. ಬಳಿಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧೆಡೆ ಮನೆಕಳ್ಳತನ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಶಾಂತ್ 2025ರ ಸೆಪ್ಟೆಂಬರ್ನಲ್ಲಿ ಬೆಳಗಾವಿ ಕೇಂದ್ರ ಕಾರಾಗೃಹದಿಂದ 27 ದಿನಗಳ ಪೆರೋಲ್ ಪಡೆದಿದ್ದ. ಆದರೆ ಅಕ್ಟೋಬರ್ 20ರಂದು ನಿಗದಿತ ಸಮಯಕ್ಕೆ ಜೈಲಿಗೆ ಮರಳದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಆತನನ್ನು ಪತ್ತೆಹಚ್ಚಿ ಡಿಸೆಂಬರ್ನಲ್ಲಿ ಬಂಧಿಸಿದ್ದರು.
ಇದಾದ ಬಳಿಕ ಶಿರಾ ಪೊಲೀಸರು ಸುಮಾರು 11 ತಿಂಗಳ ಹಿಂದಿನ ಮನೆಕಳ್ಳತನ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದರು. ಖಚಿತ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದಾಗ ಪ್ರಶಾಂತ್ ಪಾತ್ರ ಬೆಳಕಿಗೆ ಬಂದಿದೆ. ಬಳಿಕ ಬಾಡಿ ವಾರೆಂಟ್ ಮೂಲಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ವಿಚಾರ ಬಯಲಾಗಿದೆ. ಆತ ಕದ್ದಿದ್ದ 50 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಪ್ರಶಾಂತ್ನ ಹಿಂದಿನ ಅಪರಾಧ ಹಿನ್ನೆಲೆ ಕೂಡ ಗಂಭೀರವಾಗಿದೆ. ಕುಂದಾಪುರ ಮೂಲದ ಈತ ಸ್ವಂತ ಬೋಟ್ ಹೊಂದಿದ್ದು, ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದರೆ 24ನೇ ವಯಸ್ಸಿನಲ್ಲೇ ಮಹಿಳೆಯ ಅತ್ಯಾಚಾರ, ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತನಾಗಿದ್ದ.
2015ರಲ್ಲಿ ಕುಂದಾಪುರದಲ್ಲಿ ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಶಾಂತ್ಗೆ ಮರಣದಂಡನೆ ವಿಧಿಸಿತ್ತು. ಬಳಿಕ 2024ರ ಜನವರಿಯಲ್ಲಿ ಹೈಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತ್ತು. 60 ವರ್ಷ ವಯಸ್ಸಾಗುವವರೆಗೂ ಯಾವುದೇ ವಿನಾಯಿತಿ ಇಲ್ಲದೆ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿತ್ತು.
ಇದರ ನಡುವೆ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿದ್ದಾಗ ಅಲ್ಲಿನ ವೈದ್ಯೆಯೊಬ್ಬರ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿ, ವೈದ್ಯಕೀಯ ಕಾರಣಗಳಿಗಾಗಿ ಪೆರೋಲ್ ಮೇಲೆ ಹೊರಬಂದಿದ್ದ ಸಂದರ್ಭದಲ್ಲಿ ಪ್ರಶಾಂತ್ ಆಕೆಯನ್ನು ವಿವಾಹವಾಗಿದ್ದ ಎನ್ನಲಾಗಿದೆ.
ಒಂದು ಕಡೆ ಗಂಭೀರ ಅಪರಾಧ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರೋಪಿ, ಮತ್ತೊಂದೆಡೆ ಪೆರೋಲ್ ಅವಧಿಯಲ್ಲಿ ಗೆಳೆಯರೊಂದಿಗೆ ಸೇರಿ ವಿವಿಧೆಡೆ ಮನೆಕಳ್ಳತನ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಇದೀಗ ಶಿರಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪ್ರಶಾಂತ್ನಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಇತರ ಕಳ್ಳತನ ಪ್ರಕರಣಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.




