*ಹರಿದ್ವಾರದಲ್ಲಿ ಅರ್ಧ ಕುಂಭಮೇಳಕ್ಕೆ ಸಿದ್ಧತೆ*: *ಇಲ್ಲಿದೆ ಶಾಹಿ ಸ್ನಾನಗಳ ದಿನಾಂಕ ಹಾಗೂ ಸಂಪೂರ್ಣ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಹರಿದ್ವಾರದಲ್ಲಿ 2027ರ ಜನವರಿ 14ರಿಂದ ಅರ್ಧ ಕುಂಭಮೇಳ ಪ್ರಾರಂಭವಾಗಲಿದೆ. ಮಕರ ಸಂಕ್ರಾಂತಿಯಿಂದ ಚೈತ್ರ ಪೌರ್ಣಮಿಯವರೆಗೆ ನಡೆಯುವ ಈ ಸುದೀರ್ಘ ಉತ್ಸವದಲ್ಲಿ ಹಲವಾರು ಪವಿತ್ರ ಸ್ನಾನ ಪರ್ವಗಳು ಜರುಗಲಿವೆ. ಸಾವಿರಾರು ಸಂತರು, ನಾಗಾಸಾಧುಗಳು, ಅಖಾಡಗಳು, ಕೋಟ್ಯಂತರ ಭಕ್ತರು ಗಂಗಾನದಿ ತೀರಕ್ಕೆ ಆಗಮಿಸಲಿದ್ದು, ಪವಿತ್ರ ಶಾಹಿಸ್ನಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಆರಂಭವಾಗಿವೆ.
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ 2025 ರಲ್ಲಿ ನಡೆದ ಮಹಾ ಕುಂಭಮೇಳ ಇಡೀ ವಿಶ್ವದ ಗಮನ ಸೆಳೆದಿತ್ತು. ಜನವರಿ 13 ರಿಂದ ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆದ ಈ ಭವ್ಯ ಉತ್ಸವದಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಇದೀಗ ಮತ್ತೊಂದು ಬೃಹತ್ ಆಧ್ಯಾತ್ಮಿಕ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
2027 ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ‘ಅರ್ಧ ಕುಂಭಮೇಳ’ ನಡೆಯಲಿದ್ದು, ಅಮೃತ ಸ್ನಾನದ ದಿನಗಳಲ್ಲಿ ಹರ್ ಕಿ ಪೌರಿ ಸೇರಿದಂತೆ ಪ್ರಮುಖ ಘಾಟ್ಗಳಲ್ಲಿ ಭಕ್ತರ ಸಾಗರವೇ ಹರಿದುಬರಲಿದೆ.
2027 ರ ಜನವರಿ 14ರಿಂದ ಅರ್ಧ ಕುಂಭಮೇಳ ಆರಂಭವಾಗಲಿದ್ದು, ಏಪ್ರಿಲ್ 20, 2027 ರವರೆಗೆ ನಡೆಯಲಿದೆ. ಮಕರ ಸಂಕ್ರಾಂತಿಯಿಂದ ಚೈತ್ರ ಪೌರ್ಣಮಿಯವರೆಗೆ ನಡೆಯುವ ಈ ಸುದೀರ್ಘ ಉತ್ಸವದಲ್ಲಿ ಹಲವಾರು ಪವಿತ್ರ ಸ್ನಾನ ಪರ್ವಗಳು ಜರುಗಲಿವೆ. ಈ ಬಾರಿ ಒಟ್ಟು 11 ಪ್ರಮುಖ ಸ್ನಾನ ದಿನಾಂಕಗಳನ್ನು ಘೋಷಿಸಲಾಗಿದ್ದು, ಇವುಗಳಲ್ಲಿ ನಾಲ್ಕು ಅಮೃತ ಸ್ನಾನ ಅಥವಾ ಶಾಹಿ ಸ್ನಾನ ಅತ್ಯಂತ ಮಹತ್ವದ್ದಾಗಿದೆ.
ಅರ್ಧ ಕುಂಭಮೇಳದ ಮೊದಲ ಪವಿತ್ರ ಸ್ನಾನವು ಜನವರಿ 14 ರಂದು ಮಕರ ಸಂಕ್ರಾಂತಿಯ ಶುಭ ದಿನದಂದು ನಡೆಯಲಿದೆ. ಇದಾದ ಬಳಿಕ ಫೆಬ್ರವರಿ 6 ರಂದು ಮೌನಿ ಅಮಾವಾಸ್ಯೆ, ಫೆಬ್ರವರಿ 11 ರಂದು ವಸಂತ ಪಂಚಮಿ ಹಾಗೂ ಫೆಬ್ರವರಿ 20 ರಂದು ಮಾಘ ಪೂರ್ಣಿಮೆಯ ಪವಿತ್ರ ಸ್ನಾನಗಳು ಜರುಗಲಿವೆ. ಮಾರ್ಚ್ ತಿಂಗಳಿನಲ್ಲಿ ಅತ್ಯಂತ ಪ್ರಮುಖ ಸ್ನಾನ ಪರ್ವಗಳಿದ್ದು, ಮಾರ್ಚ್ 6 ರಂದು ಮಹಾಶಿವರಾತ್ರಿ (ಮಕರಂದ ಸ್ನಾನ), ಮಾರ್ಚ್ 8 ರಂದು ಫಾಲ್ಗುಣ ಅಮಾವಾಸ್ಯೆ (ಅಮೃತ ಸ್ನಾನ) ಮತ್ತು ಮಾರ್ಚ್ 15 ರಂದು ದೇವ್ ಡೋಲಿ ಸ್ನಾನ (ಅಮೃತ ಸ್ನಾನ) ನಡೆಯಲಿವೆ. ಮುಂದುವರಿದು ಏಪ್ರಿಲ್ 7 ರಂದು ಹೊಸ ವರ್ಷದ ಸ್ನಾನ, ಏಪ್ರಿಲ್ 14 ರಂದು ಮೇಷ ಸಂಕ್ರಾಂತಿ (ಮುಖ್ಯ ಅಮೃತ ಸ್ನಾನ), ಏಪ್ರಿಲ್ 15 ರಂದು ಶ್ರೀ ರಾಮ ನವಮಿ ಹಾಗೂ ಏಪ್ರಿಲ್ 20 ರಂದು ಚೈತ್ರ ಪೌರ್ಣಮಿಯ ಅಂತಿಮ ಪವಿತ್ರ ಸ್ನಾನದೊಂದಿಗೆ ಈ ಮಹಾ ಉತ್ಸವ ಸಂಪನ್ನಗೊಳ್ಳಲಿದೆ.
ಹರಿದ್ವಾರ ಮತ್ತು ಪ್ರಯಾಗರಾಜ್ನಂತಹ ಪುಣ್ಯಕ್ಷೇತ್ರಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ‘ಪೂರ್ಣ ಕುಂಭಮೇಳ’ ಹಾಗೂ ಪ್ರತಿ 6 ವರ್ಷಗಳಿಗೊಮ್ಮೆ ‘ಅರ್ಧ ಕುಂಭಮೇಳ’ವನ್ನು ಆಯೋಜಿಸಲಾಗುತ್ತದೆ. ಹರಿದ್ವಾರದಲ್ಲಿ ಈ ಹಿಂದೆ 2021 ರಲ್ಲಿ ಪೂರ್ಣ ಕುಂಭಮೇಳ ನಡೆದಿತ್ತು. ಆ ಲೆಕ್ಕಾಚಾರದಂತೆ 6 ವರ್ಷಗಳ ಬಳಿಕ ಅಂದರೆ 2027 ರಲ್ಲಿ ನಡೆಯುತ್ತಿರುವ ಈ ಉತ್ಸವವನ್ನು ಅರ್ಧ ಕುಂಭಮೇಳ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಈ ಬಾರಿ ಉತ್ತರಾಖಂಡ ಸರ್ಕಾರವು ಇದನ್ನು ಪೂರ್ಣ ಕುಂಭಮೇಳದ ಮಾದರಿಯಲ್ಲೇ ಅತ್ಯಂತ ಭವ್ಯವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.




