*ಇಂದು ಬೆಳಗಾವಿಗೆ ಫಡ್ನವಿಸ್ ಆಗಮನ*: *ಪ್ರಬುದ್ಧರ ಸಂವಾದದಲ್ಲಿ ಯಾವ ವಿಚಾರಗಳಿಗೆ ಸಿಗಲಿದೆ ಆದ್ಯತೆ?*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೆಳಗಾವಿ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಬಿಜೆಪಿ ಆಯೋಜಿಸಿರುವ ವಿಶೇಷ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ. ವೈದ್ಯರು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅದರ ಉಳಿವಿನ ಕುರಿತು ನಡೆಯಲಿರುವ ಈ ಚರ್ಚೆಯಲ್ಲಿ ಫಡ್ನವಿಸ್ ಯಾವ ವಿಚಾರಗಳನ್ನು ಪ್ರಸ್ತಾಪಿಸಲಿದ್ದಾರೆ ಎಂಬುದು ಈಗ ಗಮನ ಸೆಳೆದಿದೆ.
ಇಂದು ಮಧ್ಯಾಹ್ನ 2.30ಕ್ಕೆ ಮುಂಬೈನಿಂದ ಬೆಳಗಾವಿಗೆ ಆಗಮಿಸಲಿರುವ ದೇವೇಂದ್ರ ಫಡ್ನವಿಸ್, ಬಳಿಕ ನಗರದ ಧರ್ಮನಾಥ ಭವನದಲ್ಲಿ ನಡೆಯಲಿರುವ ‘ಪ್ರಜಾಪ್ರಭುತ್ವ ಉಳಿವಿಗಾಗಿ ಪ್ರಬುದ್ಧರ ಸಮಾವೇಶ ಹಾಗೂ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಗಣ್ಯರೊಂದಿಗೆ ಫಡ್ನವಿಸ್ ಸಂವಾದ ನಡೆಸಲಿದ್ದಾರೆ. ವೈದ್ಯರು, ವಕೀಲರು, ಶಿಕ್ಷಣ ತಜ್ಞರು, ಉದ್ಯಮಿಗಳು ಹಾಗೂ ಸಾಮಾಜಿಕ ಕ್ಷೇತ್ರದ ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯಗಳು, ಅದರ ಉಳಿವು ಹಾಗೂ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿಶೇಷವಾಗಿ ಪ್ರಬುದ್ಧರ ಸಮಾವೇಶವನ್ನು ಆಯೋಜಿಸಿದೆ.
ಬೆಳಗಾವಿ ಜಿಲ್ಲೆಯ ಬಿಜೆಪಿ ಸಂಸದರು, ಶಾಸಕರು ಹಾಗೂ ಪಕ್ಷದ ಪ್ರಮುಖ ಮುಖಂಡರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫಡ್ನವಿಸ್ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಉತ್ಸಾಹ ಮನೆಮಾಡಿದೆ.
ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ನಡೆಯಲಿರುವ ಸಂವಾದದಲ್ಲಿ ದೇವೇಂದ್ರ ಫಡ್ನವಿಸ್ ಯಾವ ವಿಚಾರಗಳಿಗೆ ಒತ್ತು ನೀಡಲಿದ್ದಾರೆ ಮತ್ತು ಅವರ ಭಾಷಣದಲ್ಲಿ ಯಾವ ಸಂದೇಶ ಇರಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.




