Kannada NewsKarnataka NewsLatest

*ಗ್ರಾಹಕರಿಗೆ ಗುಡ್ ನ್ಯೂಸ್*: *ಇಂದಿನಿಂದ ನಂದಿನಿ ಮೊಸರಿನ ದರ ಇಳಿಕೆ*

ಪ್ರಗತಿವಾಹಿನಿ ಸುದ್ದಿ: ನಂದಿನಿ ಹಾಲು-ಮೊಸರಿನ ದರ ಏರಿಕೆ ಬೆನ್ನಲ್ಲೇ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಇಂದಿನಿಂದ ನಂದಿನಿ ಮೊಸರಿನ ದರ ಇಳಿಕೆಯಾಗಲಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ನಂದಿನಿ ಬ್ರ್ಯಾಂಡ್ ಮೊಸರುನ ದರ ಇಳಿಸಲು ನಿರ್ಧರಿಸಲಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಇದರಿಂದ ಜನರು ಕೊಂಚ ನಿರಾಳರಾಗಿದ್ದಾರೆ.

ಇಂದಿನಿಂದ ರಾಜ್ಯಾದ್ಯಂತ ನಂದಿನಿ ಬ್ರ್ಯಾಂಡ್​​​​ ಮೊಸರು ದರದಲ್ಲಿ ಇಳಿಕೆಯಾಗಿದ್ದು, ಲೀಟರ್​​ ಮೊಸರಿಗೆ 2 ರೂ. ಮತ್ತು ಅರ್ಧ ಲೀಟರ್​ ಮೊಸರಿಗೆ 1 ರೂ. ಇಳಿಕೆಯಾಗಿದೆ. ಆ ಮೂಲಕ 1 ಲೀಟರ್ ಮೊಸರಿನ ದರ 68 ರಿಂದ 66ಕ್ಕೆ ಬಂದಿದ್ದರೆ, ಅರ್ಧ ಲೀಟರ್​​ ಮೊಸರಿನ ದರ 34 ರಿಂದ 33ಕ್ಕೆ ಇಳಿಕೆಯಾಗಿದೆ.

ನವೆಂಬರ್ 1, 2026ರಂದು ನಂದಿನಿ ಮೊಸರಿನ ದರವನ್ನು ಲೀಟರ್‌ಗೆ ₹14 ಮತ್ತು ಅರ್ಧ ಲೀಟರ್‌ಗೆ ₹6 ಹೆಚ್ಚಿಸಲಾಗಿತ್ತು. ಹೀಗಾಗಿ ಭಾರಿ ದರ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಈಗ ಕೊಂಚ ರಿಲೀಫ್​​ ಸಿಕ್ಕಿದೆ.

ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ರಾಜಕೀಯ ಪಕ್ಷಗಳು ಸೇರಿದಂತೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಲೀಟರ್​​ ಮೊಸರಿನ ದರ 14 ರೂಪಾಯಿ ಹೆಚ್ಚಳ ಜಾಸ್ತಿ ಆಯಿತೆಂಬ ಅಸಮಾಧಾನಗಳು ಕೇಳಿಬಂದಿದ್ದವು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿಕೆ ಶಿವಕುಮಾರ್, ಏರಿಕೆ ಮಾಡಲಾಗಿದ್ದ ಮೊಸರಿಮ ಬೆಲೆಯಲ್ಲಿ ಎರಡು ರೂ. ಇಳಿಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಲೀಟರ್ ಮೊಸರಿಗೆ 14 ರೂ. ಬದಲು 12 ರೂ. ಮಾತ್ರ ಹೆಚ್ಚಳಕ್ಕೆ ತಿಳಿಸಿದ್ದರು.

ಜನರು ಪ್ರತಿದಿನ ಹಾಲು ಮತ್ತು ಮೊಸರು ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ ಎಂದು ದೂರಿದ್ದರು. ಆದರೀಗ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆಯಂತೆ ಮೊಸರಿನ ದರದಲ್ಲಿ ಇಳಿಕೆಯಾಗಿದೆ.


Related Articles

Back to top button