
ಪ್ರಗತಿವಾಹಿನಿ ಸುದ್ದಿ: ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ವಾಹನ ಭೀಕರ ಅಪಘಾತಕ್ಕೀಡಾಗಿ 13 ಮಂದಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ನಡೆದಿದೆ.
ಮೃತರಲ್ಲಿ ನಾಲ್ವರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯರಾತ್ರಿ 2 ಗಂಟೆಗೆ ಸಂಭವಿಸಿದ ದುರಂತ
ರಾಮಗಢ ಜಿಲ್ಲೆಯ ರಾಂಚಿ-ಪಾಟ್ನಾ ರಾಷ್ಟ್ರೀಯ ಹೆದ್ದಾರಿ 33ರಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ. ಬಿಹಾರದ ನಳಂದ ಜಿಲ್ಲೆಯ ಜಂಘಾರೋ ಗ್ರಾಮದ 14 ಮಂದಿ ಸ್ಕಾರ್ಪಿಯೋ ವಾಹನದಲ್ಲಿ ಜಾರ್ಖಂಡ್‌ನ ಪ್ರಸಿದ್ಧ ರಾಜ್ರಪ್ಪ ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಭೀಕರ ಅಪಘಾತಕ್ಕೀಡಾಗಿದೆ.
ಅಪಘಾತದ ತೀವ್ರತೆಗೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ವಾಹನದಲ್ಲಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಗೆ ತರುವಷ್ಟರಲ್ಲೇ 13 ಮಂದಿ ಮೃತಪಟ್ಟಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಓರ್ವ ವ್ಯಕ್ತಿಗೆ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಒಂದು ತಿಂಗಳಲ್ಲೇ ಎರಡನೇ ದೊಡ್ಡ ದುರಂತ
ಜಾರ್ಖಂಡ್‌ನಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ದೊಡ್ಡ ರಸ್ತೆ ಅಪಘಾತ ಇದಾಗಿದೆ. ಕಳೆದ ನವೆಂಬರ್ 5ರಂದು ಖುಂಟಿ ಜಿಲ್ಲೆಯ ಕರ್ರಾ-ತೋರ್ಪಾ ಮುಖ್ಯರಸ್ತೆಯ ಜೋನೆ-ಲಡ್ರು ಮೋರ್ ಬಳಿ ಸಂಭವಿಸಿದ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದರು.
ಸ್ಕೂಟರ್ ಸವಾರನೊಬ್ಬ ರಸ್ತೆ ಬದಿಯ ಪೊದೆಯೊಳಗೆ ಬಿದ್ದಿದ್ದ ವೇಳೆ ಆತನನ್ನು ರಕ್ಷಿಸಲು ನಾಲ್ವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸ್ಥಳದಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ 18 ಚಕ್ರಗಳ ಟ್ರೈಲರ್ ಟ್ರಕ್ ಗುಂಪಿನ ಮೇಲೆ ಹರಿದ ಪರಿಣಾಮ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.
ಇದೀಗ ಮತ್ತೊಂದು ಭೀಕರ ಅಪಘಾತ ಸಂಭವಿಸಿರುವುದು ಜಾರ್ಖಂಡ್‌ನಲ್ಲಿ ರಸ್ತೆ ಸುರಕ್ಷತೆ ಕುರಿತು ಆತಂಕ ಮೂಡಿಸಿದೆ.



