Kannada NewsKarnataka NewsLatest

*ಇನ್ಮುಂದೆ ಪೊಲೀಸರ ಕಣ್ಣು ತಪ್ಪಿಸಿ ವಾಹನ ಓಡಿಸುವುದು ಸುಲಭವಲ್ಲ*: *ನಗರದಲ್ಲಿ ಬಂತು ಹೊಸ ತಂತ್ರಜ್ಞಾನ*

ಪ್ರಗತಿವಾಹಿನಿ ಸುದ್ದಿ: ರಸ್ತೆಯಲ್ಲಿ ವಾಹನಗಳ ಸಂಚಾರದ ಮೇಲೆ ನಿಗಾ ಇಡಲು ಇನ್ನು ಮುಂದೆ ಪೊಲೀಸರು ದಿನವಿಡೀ ನಿಂತು ಪರಿಶೀಲನೆ ನಡೆಸಬೇಕಿಲ್ಲ. ಕ್ಯಾಮೆರಾಗಳೇ ವಾಹನಗಳ ನಂಬರ್ ಪ್ಲೇಟ್ ಗುರುತಿಸುತ್ತವೆ. ಚಾಲಕನ ಮುಖವನ್ನೂ ಪತ್ತೆಹಚ್ಚುತ್ತವೆ. ಕಳ್ಳತನವಾದ ವಾಹನ ಅಥವಾ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ವಾಹನ ರಸ್ತೆಯಲ್ಲಿ ಸಂಚರಿಸಿದರೂ ಪತ್ತೆಹಚ್ಚಲು ನೆರವಾಗುತ್ತವೆ. ಇಂತಹ ಅತ್ಯಾಧುನಿಕ ಡಿಜಿಟಲ್ ಚೆಕ್‌ಪೋಸ್ಟ್ ಇದೀಗ ದಾವಣಗೆರೆಯಲ್ಲಿ ಕಾರ್ಯಾರಂಭ ಮಾಡಿದೆ.

ಸಾಂಪ್ರದಾಯಿಕ ಮಾನವ ಚಾಲಿತ ಚೆಕ್‌ಪೋಸ್ಟ್ ವ್ಯವಸ್ಥೆಗೆ ಪರ್ಯಾಯವಾಗಿ ಜಿಲ್ಲಾ ಪೊಲೀಸ್ ಇಲಾಖೆ ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಿದೆ. ನಗರದ ಬಿಐಇಟಿ ಕಾಲೇಜಿನಿಂದ ರಾಷ್ಟ್ರೀಯ ಹೆದ್ದಾರಿಗೆ ತೆರಳುವ ಮಾರ್ಗ ಮಧ್ಯೆ ಶಾಮನೂರು ರಸ್ತೆಯ ಎಡಭಾಗದಲ್ಲಿ ಡಿಜಿಟಲ್ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.

ಬೆಂಗಳೂರು ಬಳಿಕ ದಾವಣಗೆರೆಯಲ್ಲಿ ಈ ವ್ಯವಸ್ಥೆ ಆರಂಭವಾಗಿದ್ದು, ರಾಜ್ಯದ ಎರಡನೇ ಡಿಜಿಟಲ್ ಚೆಕ್‌ಪೋಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಸಂಚಾರ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ವಾಹನಗಳ ಚಲನವಲನದ ಮೇಲೆ ನಿರಂತರ ನಿಗಾ ಇಡುವುದರ ಜೊತೆಗೆ ಸಂಚಾರ ಮಾದರಿಗಳ ಮಾಹಿತಿಯನ್ನೂ ಸಂಗ್ರಹಿಸಿ ವಿಶ್ಲೇಷಿಸಲು ಇದು ನೆರವಾಗಲಿದೆ.

ವಿಶೇಷವಾಗಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳ ಮೂಲಕ ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ಗುರುತಿಸಿ, ಲಭ್ಯವಿರುವ ಅಧಿಕೃತ ಡೇಟಾಬೇಸ್‌ಗಳೊಂದಿಗೆ ಹೋಲಿಕೆ ಮಾಡಬಹುದು.

ಇದರ ಜೊತೆಗೆ ನಾಲ್ಕು ಫೇಸ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾಹನ ಚಾಲಕನ ಮುಖವನ್ನು ಗುರುತಿಸುವ ಮೂಲಕ ಅಗತ್ಯ ಸಂದರ್ಭದಲ್ಲಿ ಕಮಾಂಡ್ ಕಂಟ್ರೋಲ್ ರೂಂನಿಂದ ಪರಿಶೀಲನೆ ನಡೆಸಲು ಅವಕಾಶವಿದೆ.

ನಂಬರ್ ಪ್ಲೇಟ್ ಬದಲಿಸಿದರೂ ಸಿಗುತ್ತಾ ಪತ್ತೆ?

ಈ ವ್ಯವಸ್ಥೆಯ ವಿಶೇಷತೆ ಕುರಿತು ಮಾತನಾಡಿರುವ ದಾವಣಗೆರೆ ಎಸ್‌ಪಿ ಶೇಖರ್ ಹೆಚ್.ಟಿ., ಕಳ್ಳತನವಾದ ವಾಹನಗಳು ಹಾಗೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ವಾಹನಗಳನ್ನು ಗುರುತಿಸುವ ಉದ್ದೇಶದಿಂದ ಡಿಜಿಟಲ್ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆಲವರು ದ್ವಿಚಕ್ರ ವಾಹನದ ನಂಬರ್ ಪ್ಲೇಟ್‌ಗಳನ್ನು ನಾಲ್ಕು ಚಕ್ರದ ವಾಹನಗಳಿಗೆ ಅಳವಡಿಸಿಕೊಂಡು ಸಂಚರಿಸುವ ಸಾಧ್ಯತೆಯಿದೆ. ಇಂತಹ ವಾಹನಗಳನ್ನು ಗುರುತಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ. ಅಲ್ಲದೆ, ಕ್ಯಾಮೆರಾಗಳ ಮೂಲಕ ವಾಹನ ಚಾಲಕನ ಮುಖವನ್ನು ಗುರುತಿಸಿ ಕಮಾಂಡ್ ಕಂಟ್ರೋಲ್ ರೂಂನಲ್ಲಿ ಪರಿಶೀಲಿಸಬಹುದು ಎಂದು ವಿವರಿಸಿದ್ದಾರೆ.

ಅಪಘಾತ ಅಥವಾ ಅಪರಾಧ ಪ್ರಕರಣಗಳು ನಡೆದಾಗ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಲು ಸಹ ಈ ವ್ಯವಸ್ಥೆ ನೆರವಾಗಲಿದೆ.

ನಗರದ ಬೆಳವಣಿಗೆಯೊಂದಿಗೆ ಭದ್ರತೆಯ ಸವಾಲುಗಳೂ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನದ ನೆರವಿನಿಂದ ವಾಹನಗಳ ಮೇಲೆ ನಿಗಾ ಇಡುವ ದಾವಣಗೆರೆ ಪೊಲೀಸರ ಈ ಪ್ರಯೋಗ ಅಪರಾಧ ನಿಯಂತ್ರಣ ಮತ್ತು ಸಂಚಾರ ಭದ್ರತೆಗೆ ಹೊಸ ಶಕ್ತಿ ನೀಡುವ ನಿರೀಕ್ಷೆಯಿದೆ.

Related Articles

Back to top button