*ಡಿಎಂಕೆ ಬೆಂಬಲ ಹಿಂಪಡೆಯುವಂತೆ ರಾಹುಲ್ ಮನವಿ*: *ತಿಗುಗೇಟು ಕೊಟ್ಟ ಸ್ಟಾಲಿನ್*

ಪ್ರಗತಿವಾಹಿನಿ ಸುದ್ದಿ: ಕ್ಷೇತ್ರ ಮರುವಿಂಗಡಣೆ ವಿಚಾರ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ. ಮಸೂದೆಯನ್ನು ವಿರೋಧಿಸುವಂತೆ ಡಿಎಂಕೆಯನ್ನು ಮನವೊಲಿಸಲು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಚೆನ್ನೈಗೆ ತೆರಳಿದ್ದಾರೆ. ಆದರೆ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಈಗಾಗಲೇ ಮಸೂದೆಗೆ ಬೆಂಬಲ ಘೋಷಿಸಿದ್ದಾರೆ.
ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಕೊನೆಯ ಕ್ಷಣದ ಪ್ರಯತ್ನಕ್ಕೆ ಮುಂದಾಗಿದೆ. ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಸ್ಟಾಲಿನ್ ಅವರನ್ನು ಭೇಟಿ ಮಾಡಿ ಕ್ಷೇತ್ರ ಮರುವಿಂಗಡಣೆ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ವಿರೋಧಿಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಸ್ಥಾನಗಳನ್ನು 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಯಿಂದ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ತಮ್ಮ ರಾಜಕೀಯ ಲಾಭಕ್ಕಾಗಿ ದೇಶದ ಚುನಾವಣಾ ನಕ್ಷೆಯನ್ನು ಮರುರೂಪಿಸಲು ಈ ಮಸೂದೆ ಅವಕಾಶ ಮಾಡಿಕೊಡಲಿದೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ಹಿತಾಸಕ್ತಿ, ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ರಕ್ಷಣೆಗಾಗಿ ಎಲ್ಲರೂ ಒಟ್ಟಾಗಿ ಈ ಮಸೂದೆಯನ್ನು ಸೋಲಿಸಬೇಕು ಎಂದು ಕರೆ ನೀಡಿದ್ದಾರೆ. ತಮಿಳುನಾಡಿನ ಹಕ್ಕುಗಳ ವಿಚಾರದಲ್ಲಿ ಸ್ಟಾಲಿನ್ ಯಾವಾಗಲೂ ದೃಢವಾಗಿ ನಿಂತಿದ್ದಾರೆ. ಈಗಲೂ ಅದೇ ನಿಲುವು ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಮನವಿಗೆ ಪ್ರತಿಕ್ರಿಯಿಸಿರುವ ಎಂ.ಕೆ. ಸ್ಟಾಲಿನ್, ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಡಿಎಂಕೆ ವಹಿಸಿರುವ ಐತಿಹಾಸಿಕ ಪಾತ್ರವನ್ನು ಗುರುತಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಆದರೆ, ಮಸೂದೆಗೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. “ನಾವು ಯಾವಾಗಲೂ ತಮಿಳುನಾಡು ಮತ್ತು ನಮ್ಮ ತಮಿಳು ಜನರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿಟ್ಟುಕೊಂಡೇ ಪ್ರತಿಯೊಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಈ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇತಿಹಾಸ ನಮ್ಮನ್ನು ಕಟ್ಟಬೊಮ್ಮನ್ ಎಂದು ಗುರುತಿಸಬೇಕೇ ಹೊರತು, ಎಟ್ಟಪ್ಪನ್ ಎಂದು ತೀರ್ಪು ನೀಡುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಕಟ್ಟಬೊಮ್ಮನ್ ಮತ್ತು ದ್ರೋಹದ ಸಂಕೇತವಾಗಿ ಗುರುತಿಸಲ್ಪಡುವ ಎಟ್ಟಪ್ಪನ್ ಅವರ ಹೆಸರುಗಳನ್ನು ಉಲ್ಲೇಖಿಸುವ ಮೂಲಕ ಸ್ಟಾಲಿನ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಡಿಎಂಕೆ ಮಸೂದೆಗೆ ಬೆಂಬಲ ನೀಡಿದ್ದೇಕೆ?
ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಗೆ ಬೆಂಬಲ ನೀಡುವುದಾಗಿ ಡಿಎಂಕೆ ನವೆಂಬರ್ 28ರಂದು ಘೋಷಿಸಿತ್ತು. ಪಕ್ಷದ ಅಧ್ಯಕ್ಷ ಸ್ಟಾಲಿನ್ ನೇತೃತ್ವದಲ್ಲಿ ನಡೆದ ಸಂಸದರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಪಾಲು ಈಗಿರುವ ಶೇ. 7.18ರಷ್ಟೇ ಮುಂದುವರಿಯಬೇಕು. 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಅನುಪಾತವನ್ನು ಮುಂದಿನ 25 ವರ್ಷಗಳವರೆಗೆ ಬದಲಾಯಿಸಬಾರದು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಡಿಎಂಕೆ ತಿಳಿಸಿದೆ.
ಪರಿಷ್ಕೃತ ಪ್ರಸ್ತಾವನೆಯ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆಗಳ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಉದ್ದೇಶವಿದೆ. ಜೊತೆಗೆ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸುವ ಪ್ರಸ್ತಾವನೆಯೂ ಇದರಲ್ಲಿದೆ.
ಇಂಡಿಯಾ ಒಕ್ಕೂಟದಲ್ಲೂ ಬಿರುಕು?
ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಈಗಾಗಲೇ ಹಳಸಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋತ ಬಳಿಕ ಕಾಂಗ್ರೆಸ್ ಟಿವಿಕೆ ಜೊತೆ ಮೈತ್ರಿ ಮಾಡಿಕೊಂಡಿರುವುದು ಡಿಎಂಕೆಯ ಅಸಮಾಧಾನಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಲೋಕಸಭೆಯಲ್ಲೂ ಕಾಂಗ್ರೆಸ್ ಜೊತೆ ಕುಳಿತುಕೊಳ್ಳಲು ಇಚ್ಛಿಸದ ಡಿಎಂಕೆ ಸಂಸದರು, ತಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದ್ದರು.
ಇದೀಗ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿಯೂ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಎಂ.ಕೆ. ಸ್ಟಾಲಿನ್ ನಡುವಿನ ಮಾತುಕತೆ ಮಹತ್ವ ಪಡೆದುಕೊಂಡಿದೆ. ಡಿಎಂಕೆ ತನ್ನ ನಿಲುವನ್ನು ಬದಲಿಸುತ್ತದೆಯೇ ಅಥವಾ ಬೆಂಬಲಕ್ಕೆ ಬದ್ಧವಾಗಿರುತ್ತದೆಯೇ ಎಂಬುದು ಈಗ ರಾಜಕೀಯ ವಲಯದ ಕುತೂಹಲ ಮೂಡಿಸಿದೆ.



