*ಕನ್ನಡ-ಮರಾಠಿ ಭಾಷೆಗಳು ಸಹೋದರಿಯರು*: *ಕರ್ನಾಟಕ- ಮಹಾರಾಷ್ಟ್ರ ಸಹೋದರ ರಾಜ್ಯಗಳು*: *ದೇವೇಂದ್ರ ಫಡ್ನವಿಸ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ಮತ್ತು ಮರಾಠಿ ಭಾಷೆಗಳು ಸಹೋದರಿಯರಿದ್ದಂತೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನೆರೆಯ ಸಹೋದರ ರಾಜ್ಯಗಳಾಗಿದ್ದು, ಎರಡೂ ರಾಜ್ಯಗಳ ಜನರು ಪರಸ್ಪರ ಗೌರವ ಹೊಂದಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
ಬೆಳಗಾವಿಯ ಧರ್ಮನಾಥ ಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ’ ಸಮಾವೇಶದಲ್ಲಿ ಮಾತನಾಡಿದ ಅವರು, ಆರಂಭದಲ್ಲೇ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದರು.
ಬೆಳಗಾವಿಯ ನೆಲದಲ್ಲಿ ನಿಂತು ಮಾತನಾಡುತ್ತಿರುವ ತಾವು ಭಾಷಾ ಸಾಮರಸ್ಯದ ಸಂದೇಶ ನೀಡಲು ಬಯಸುವುದಾಗಿ ಹೇಳಿದ ಫಡ್ನವಿಸ್, ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಯಾವುದೇ ಭೇದಭಾವ ಇರಬಾರದು. ಎರಡೂ ಭಾಷೆಗಳು ಸಹೋದರಿಯರಿದ್ದಂತೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಪರಸ್ಪರ ಗೌರವವಿದೆ ಎಂದು ತಿಳಿಸಿದರು.
ದೇಶದಲ್ಲಿ ಪ್ರಸ್ತುತ ದೊಡ್ಡ ಮಟ್ಟದ ನ್ಯಾರೇಟಿವ್ ಯುದ್ಧ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕೆಲವರು ಸಂಘಟಿತವಾಗಿ ತಪ್ಪು ಸಂದೇಶಗಳನ್ನು ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಜನರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ರಾಹುಲ್ ಗಾಂಧಿ ಪ್ರತಿದಿನ ಸುಳ್ಳು ಹೇಳುವ ಮೂಲಕ ಅದನ್ನೇ ಸತ್ಯವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಸರ್ಕಾರಗಳು ಮತ್ತು ರಾಜಕೀಯ ಅಧಿಕಾರಿಗಳು ಬದಲಾಗುವುದು ಸಹಜ. ಆದರೆ ಬಾಂಗ್ಲಾದೇಶ, ನೇಪಾಳ ಮತ್ತು ಪಾಕಿಸ್ತಾನದ ಮಾದರಿಯಲ್ಲಿ ವ್ಯವಸ್ಥೆ ಬದಲಾಗಬೇಕು ಎಂಬ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಸ್ಥಳೀಯ ರಾಜಕೀಯ ನಾಯಕರು, ಸಂಘಟನೆಗಳು ಹಾಗೂ ವಿವಿಧ ಶಕ್ತಿಗಳನ್ನು ಬಳಸಿಕೊಂಡು ಹೊಸ ವ್ಯವಸ್ಥೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂದು ಫಡ್ನವಿಸ್ ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚಾಗಿದ್ದು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು.
ರಾಹುಲ್ ಗಾಂಧಿ ಕೆಂಪು ಬಣ್ಣದ ಸಂವಿಧಾನದ ಪುಸ್ತಕ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಆದರೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಮೂಲ ಪುಸ್ತಕ ನೀಲಿ ಬಣ್ಣದ್ದಾಗಿದೆ ಎಂದು ಹೇಳಿದ ಅವರು, ಸಂವಿಧಾನಿಕ ಸಂಸ್ಥೆಗಳು ಮತ್ತು ಸಂವಿಧಾನದ ವಿಚಾರದಲ್ಲಿ ರಾಹುಲ್ ಗಾಂಧಿ ನಿರಂತರವಾಗಿ ಅಪಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ ಹಿಂದಕ್ಕೆ ತಳ್ಳಿದ ಘಟನೆಯನ್ನು ಉಲ್ಲೇಖಿಸಿದ ಫಡ್ನವಿಸ್, ಇದು ರಾಹುಲ್ ಗಾಂಧಿ ಸಂವಿಧಾನ ಮತ್ತು ಸಂವಿಧಾನಿಕ ಮೌಲ್ಯಗಳನ್ನು ಹೇಗೆ ಗೌರವಿಸುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಇವಿಎಂ ಮತ್ತು ಎಸ್ಐಆರ್ ವಿಚಾರದಲ್ಲೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಾಗ ಇವಿಎಂ ಹ್ಯಾಕ್ ಆಗಿದೆ ಎಂದು ಆರೋಪಿಸುವ ಕಾಂಗ್ರೆಸ್, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ ಅದೇ ಇವಿಎಂ ಸರಿಯಾಗಿದೆ ಎಂದು ಹೇಳುತ್ತದೆ. ಹರಿಯಾಣದಲ್ಲಿ ಬಿಜೆಪಿ ಗೆದ್ದರೆ ಇವಿಎಂ ಹ್ಯಾಕ್ ಆಗಿದೆ ಎನ್ನುತ್ತಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಇವಿಎಂ ಬಗ್ಗೆ ಏಕೆ ಪ್ರಶ್ನೆ ಮಾಡುವುದಿಲ್ಲ ಎಂದು ಫಡ್ನವಿಸ್ ಪ್ರಶ್ನಿಸಿದರು.
ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಬಗ್ಗೆಯೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ಎಂಟು ಬಾರಿ ಎಸ್ಐಆರ್ ಪ್ರಕ್ರಿಯೆ ನಡೆದಿದೆ. ಈಗ ಚುನಾವಣಾ ಆಯೋಗ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸುವುದಾದರೆ, ಕೇರಳದಲ್ಲಿ ಕಾಂಗ್ರೆಸ್ ಹೇಗೆ ಗೆಲುವು ಸಾಧಿಸಿತು ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




