*13 ದಿನಗಳ ಹೋರಾಟಕ್ಕೆ ಕೊನೆಗೂ ಜಯ*: *ಆಶಾ ಕಾರ್ಯಕರ್ತೆಯರಿಗೆ ₹2 ಸಾವಿರ ಹೆಚ್ಚಳ, ಸರ್ಕಾರದ ಲಿಖಿತ ಆದೇಶ*

ಪ್ರಗತಿವಾಹಿನಿ ಸುದ್ದಿ: ಸರ್ಕಾರದ ವಿರುದ್ಧ 13 ದಿನಗಳಿಂದ ನಡೆದಿದ್ದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಗೌರವಧನ ಹೆಚ್ಚಳದ ಬೇಡಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮಾಸಿಕ ₹2 ಸಾವಿರ ಹೆಚ್ಚಳದ ಕುರಿತು ಅಧಿಕೃತ ಲಿಖಿತ ಆದೇಶ ಹೊರಬಿದ್ದಿದೆ. ಆದೇಶ ಕೈ ಸೇರಿದ ಬೆನ್ನಲ್ಲೇ ಸಾವಿರಾರು ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆದಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎಐಯುಟಿಯುಸಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಆಶಾ ಸಂಘಟನೆಯ ಮುಖಂಡರು ಅಧಿಕೃತವಾಗಿ ಹಿಂಪಡೆದಿದ್ದಾರೆ. ಸರ್ಕಾರದ ಲಿಖಿತ ಆದೇಶ ಪಡೆದ ಬಳಿಕ ಮಾತನಾಡಿದ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿ, ಮೂರ್ನಾಲ್ಕು ಸುತ್ತಿನ ಸಭೆಗಳ ಬಳಿಕ ಇದೀಗ ಅಧಿಕೃತ ಪತ್ರ ಕೈ ಸೇರಿದೆ. ಇದು ಆಶಾ ಸಹೋದರಿಯರ ಅಭೂತಪೂರ್ವ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ ಎಂದು ಸಂತಸ ವ್ಯಕ್ತಪಡಿಸಿದರು.
ಸರ್ಕಾರದ ನಿರ್ಧಾರದಂತೆ ಜನವರಿ ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಒಟ್ಟು ₹11,000ರಿಂದ ₹11,500ರವರೆಗೆ ಗೌರವಧನ ದೊರೆಯಲಿದೆ. ಟೀಮ್ ಬೇಸ್ಡ್ ಇನ್ಸೆಂಟಿವ್ಗೆ ಸಂಬಂಧಿಸಿದಂತೆ ಸರ್ಕಾರ ಮತ್ತೊಂದು ಪ್ರತ್ಯೇಕ ಆದೇಶ ಹೊರಡಿಸಲಿದೆ ಎಂದು ನಾಗಲಕ್ಷ್ಮಿ ತಿಳಿಸಿದ್ದಾರೆ.
ನಿವೃತ್ತಿಯ ನಂತರ ಇಡಿಗಂಟು ನೀಡುವುದು, ಮೊಬೈಲ್ ವಿತರಣೆ ಸೇರಿದಂತೆ ಉಳಿದ ಬೇಡಿಕೆಗಳ ಕುರಿತು ಡಿಸೆಂಬರ್ 10ರೊಳಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ಸರ್ಕಾರ ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ, ಜನವರಿಯಿಂದ ನಿಶ್ಚಿತ ₹10 ಸಾವಿರ ಗೌರವಧನದ ಜೊತೆಗೆ ಕೆಲಸದ ನಿರ್ವಹಣೆಯ ಆಧಾರದ ಮೇಲೆ ಹೆಚ್ಚುವರಿ ಪ್ರೋತ್ಸಾಹಧನ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಾರ್ಯಕರ್ತೆಯರು ಕೆಲಸಕ್ಕೆ ಹಾಜರಾಗದಿದ್ದರೂ ಈ ತಿಂಗಳ ಪೂರ್ಣ ಗೌರವಧನ ಪಾವತಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಆಶಾ ಕಾರ್ಯಕರ್ತೆಯರು ಬರೆಯಬೇಕಿರುವ ಎನ್ಐಒಎಸ್ ಪರೀಕ್ಷೆಯನ್ನು ಮುಂದೂಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಒಂದಾಗಿ ನಡೆಸಿದ ಹೋರಾಟ ಐತಿಹಾಸಿಕವಾಗಿದೆ ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ. ಹೋರಾಟಕ್ಕೆ ಬೆಂಬಲ ನೀಡಿದ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಕಲಾವಿದರು, ಸಾಹಿತಿಗಳು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ರಕ್ಷಣೆ ನೀಡಿದ ಪೊಲೀಸರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಸರ್ಕಾರದ ಲಿಖಿತ ಆದೇಶ ಹೊರಬಿದ್ದ ತಕ್ಷಣ ಫ್ರೀಡಂ ಪಾರ್ಕ್ನಲ್ಲಿ ನೆರೆದಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು. 13 ದಿನಗಳ ಹೋರಾಟದ ಬಳಿಕ ಸದ್ಯಕ್ಕೆ ಪ್ರತಿಭಟನೆ ಅಂತ್ಯಗೊಂಡಿದ್ದು, ಉಳಿದ ಬೇಡಿಕೆಗಳ ಕುರಿತು ಡಿಸೆಂಬರ್ 10ರ ಸಭೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.



