ದಂಡ ನೀಡುತ್ತಾರೆ, ನಿಯಮ ಪಾಲಿಸುವುದಿಲ್ಲ, ವಾಹನ ಸವಾರರ ಬಗ್ಗೆ ಪೊಲೀಸ್ ಆಯುಕ್ತ ವಿಷಾದ
೩೦ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೇರೆಯವರು ಕಲಿಸಿದ ಶಿಸ್ತು ಕ್ಷಣಿಕ. ಮನೆಯೆವರು ಕಲಿಸಿದ ಶಿಸ್ತು ಕೊನೆತನಕ. ಎಲ್ಲರೂ ತಮ್ಮ ಮಕ್ಕಳಿಗೆ ಶಿಸ್ತು, ಸುರಕ್ಷತೆ ಕಲಿಸುವುದು ಅಗತ್ಯ ಎಂದು ನಗರ ಪೊಲೀಸ್ ಆಯುಕ್ತ ಡಾ. ಡಿ.ಸಿ ರಾಜಪ್ಪ ಹೇಳಿದರು.
ಸೋಮವಾರ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೩೦ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೧೯೩೨ ರಲ್ಲಿ ಕುವೆಂಪು ಅವರು ಸಹ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಸಾಕಷ್ಟು ಅರಿವು ಮೂಡಿಸಿದ್ದಾರೆ. ಮನೆಯವರು ಮಕ್ಕಳಿಗೆ ಕಾರು, ಸೈಕಲ್, ಬೈಕ್ ನೀಡುತ್ತಾರೆ. ಆದರೆ ಆ ವಾಹನ ಹೇಗೆ ಬಳಕೆ ಮಾಡಬೇಕೆಂಬುದನ್ನು ತಿಳಿಸುವುದಿಲ್ಲ. ಜಿಲ್ಲೆಯಲ್ಲಿ ೩ ಹೆಲ್ಮೆಟ್ ಕಂಪನಿಗಳು ಸಹ ಅಪಘಾತದ ಬಗ್ಗೆ ಅರಿವು ಮೂಡಿಸಿವೆ. ಬೆಳಗಾವಿಯಲ್ಲಿ ಹೆಲ್ಮೆಟ್ ಧರಿಸದೆ ೧.೬ ಲಕ್ಷ ಜನ ಪೊಲೀಸ್ ಇಲಾಖೆಗೆ ೧.೮೬ ಕೋಟಿ ರೂ. ದಂಡ ನೀಡಿದ್ದಾರೆ ಹೊರತು ರಸ್ತೆ ನಿಮಯ ಪಾಲನೆ ಮಾಡುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಎಸ್‌ಪಿ ಎಚ್. ಸುಧೀರ ಕುಮಾರ ರೆಡ್ಡಿ ಮಾತನಾಡಿ, ವಾಹನವನ್ನು ಚಲಿಸುವಾಗ ಎಲ್ಲ ಕಡೆಗೆ ಗಮನವಿಟ್ಟು ನಿಧಾನವಾಗಿ ಚಲಿಸಬೇಕು. ಕುಡಿದು ವಾಹನ ಚಲಿಸಬಾರದು. ಶಾಲಾ ಕಾಲೇಜು, ಆಸ್ಪತ್ರೆ ಇರುವ ಸ್ಥಳಗಳಲ್ಲಿ ನಿಧಾನವಾಗಿ ಚಲಿಸಬೇಕು. ಎಲ್ಲರೂ ಕಡ್ಡಾಯವಾಗಿ ವಾಹನ ಪರವಾನಿಗೆ ಹೊಂದಿರಬೇಕು. ವಾಹನ ವಿಮೆಯನ್ನು ತುಂಬಿಕೊಳ್ಳಬೇಕು. ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪಾಲಕರು ವಾಹನವನ್ನು ಕೊಡಬಾರದು. ಜಿಲ್ಲೆಯಲ್ಲಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಪ್ರೇಯರ್ ಮುಕ್ತಾಯದ ನಂತರ ೫ ನಿಮಿಷ ಸಂಚಾರಿ ನಿಯಮಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಬೇಕು ಎಂದರು.
ರಸ್ತೆ ಬದಿಯಲ್ಲಿ ನಿಂತ ವಾಹನಗಳಿಗೆ ನೇರವಾಗಿ ಗುದ್ದಿ ಬೈಕ್ ಸವಾರರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಆಮೇಲೆ ಕುಟುಂಬಸ್ಥರು ಬಂದು ನ್ಯಾಯ ಕೊಡಿಸಿ ಎಂದು ಪೊಲೀಸ್ ಮೊರೆ ಹೋಗುತ್ತಾರೆ. ಪೊಲೀಸ್ ಇಲಾಖೆ ನ್ಯಾಯ ಕೊಡಿಸಬಹುದೇ ಹೊರತು ಪ್ರಾಣ ಮತ್ತು ಪರಿಹಾರ ನೀಡಲಾಗದು ಎಂದು ಹೇಳಿದರು.
ಜಂಟಿ ಸಾರಿಗೆ ಆಯುಕ್ತ ಬಿ.ಪಿ. ಉಮಾಶಂಕರ ಮಾತನಾಡಿ, ವಿದ್ಯಾರ್ಥಿಗಳು, ಉದ್ಯೋಗಸ್ಥರು ವೇಗವಾಗಿ ವಾಹನ ಚಲಾಯಿಸಿ ಪ್ರಾಣಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ೨೫ ರಿಂದ ೩೦ ವರ್ಷದೊಳಗಿನ ಯುವಕರೇ ಜಾಸ್ತಿ. ಯಾವುದೇ ಕಾಯಿಲೆ ಬಂದರೂ ೧೦ ವರ್ಷಗಳ ಕಾಲ ಬದುಕಿ ಜೀವನ ಸಾಗಿಸಬಹುದು. ಆದರೆ ಅಪಘಾತವಾದರೆ ಕ್ಷಣಾರ್ಧದಲ್ಲಿ ಜೀವ ಕಳೆದುಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಎಚ್ಚರ ವಹಿಸಬೇಕೆಂದು ನುಡಿದರು.
ಪ್ರಸಕ್ತ ವರ್ಷದಲ್ಲಿ ಯಾವುದೇ ಅಪಘಾತ ಮಾಡದೆ ಉತ್ತಮ ರೀತಿ ವಾಹನ ಚಾಲನೆ ಮಾಡಿದ ಚಾಲಕರಿಗೆ ಇಲಾಖೆಯಿಂದ ಸನ್ಮಾನಿಸಲಾಯಿತು. ಡಿಸಿಪಿ ನಂದಗಾವಿ, ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಉಪ ಸಾರಿಗೆ ಆಯುಕ್ತ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ ಹಾಗೂ ಗಣ್ಯರು ಉಪಸ್ಥಿತರಿದ್ದರು. ರಾಜುಹಂಚಿನಮನಿ ನಿರೂಪಿಸಿದರು. ಸಾರಿಗೆ ಸಮನ್ವಯ ಅಧಿಕಾರಿ ರಾಜಶೇಖರ ಚಳಿಗೇರಿ ವಂದಿಸಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ… ಲಿಂಕ್ ಓಪನ್ ಮಾಡಿದಾಗ ಕಾಣುವ ಬೆಲ್ ಐಕಾನ್ ಒತ್ತಿ ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿ, ನಿರಂತರವಾಗಿ ಸುದ್ದಿಗಳನ್ನು ಪಡೆಯಿರಿ. ಸಲಹೆ, ಸೂಚನೆ, ಸಮಸ್ಯೆಗಳಿದ್ದರೆ ಕೆಳಗೆ ಕಾಣುವ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ