Latest

ಬೆಳಗಾವಿಯಲ್ಲಿ 17ರಿಂದ ಮೂರು ದಿನಗಳ ಕನ್ನಡ ಚಲನಚಿತ್ರೋತ್ಸವ

*

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಲ್ಲಿ ಸದಭಿರುಚಿಯ ಕನ್ನಡ ಚಲನಚಿತ್ರೋತ್ಸವ ಇದೇ ಡಿಸೆಂಬರ್ 17 ರಿಂದ ಮೂರುದಿನಗಳ ಕಾಲ ನಡೆಯಲಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬೆಳಗಾವಿಯ ಕೆಎಲ್ಇ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ನಡೆಯುತ್ತಿರುವ ಈ ಚಿತ್ರೋತ್ಸವದಲ್ಲಿ ಕನ್ನಡದಲ್ಲಿ ಇತ್ತೀಚೆಗೆ ಬಂದ ಏಳು ಸದಭಿರುಚಿಯ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತವೆ.
ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಿತ್ರಗಳ ಬೆಳವಣಿಗೆಯನ್ನು ನಾಡಿನಾದ್ಯಂತ ಚಿತ್ರರಸಿಕರಿಗೆ ಪರಿಚಯಿಸುವ, ಆ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಯ ಮಜಲುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಚಿತ್ರೋತ್ಸವ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ರೀತಿಯ ಚಿತ್ರೋತ್ಸವ ನಡೆಸುವುದು ಅಕಾಡೆಮಿಯ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಕೆಎಲ್ಇ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸ್ಮಾರಕ ಭವನದಲ್ಲಿ, ಡಾ,ಕೋಡ್ಕಣಿ ಹಾಲ್‌ನಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಕನ್ನಡದ ಸದಭಿರುಚಿಯ ಚಿತ್ರಗಳಾದ ಸಾವಿತ್ರಿಬಾಯಿ ಫುಲೆ, ಒಂದಲ್ಲಾ ಎರಡಲ್ಲಾ, ಶುದ್ಧಿ, ಅಮ್ಮಚ್ಚಿಯೆಂಬ ನೆನಪು, ಒಂದು ಮೊಟ್ಟೆಯ ಕಥೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊದಲಾದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ದಿವಂಗತ ನಾಯಕನಟ ಅಂಬರೀಷ್ ಅವರ ಸ್ಮರಣಾರ್ಥ “ಅಂತ” ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.
ಪ್ರವೇಶ ಉಚಿತ: ಡಿಸೆಂಬರ್ 17 ರಂದು ಸಂಜೆ 6 ಗಂಟೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ, ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ವಿವೇಕ್ ಎ.ಸಾವಜಿ, ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ಬಾಬು ಮುಖ್ಯ ಅತಿಥಿಗಳಾಗಿರುತ್ತಾರೆ. ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಡಾ.ನಾಗತಿಹಳ್ಳಿ ಚಂದ್ರಶೇಖರ ಅವರು ಅಧ್ಯಕ್ಷತೆ ವಹಿಸುತ್ತಾರೆ.
ಚಲನಚಿತ್ರೊತ್ಸವದ ಸಂಚಾಲಕರಾದ ಡಾ.ಡಿ.ಎಸ್ ಚೌಗಲೆ ಹಾಗೂ ಎನ್, ನಟರಾಜ ಹಂಜಗಿಮಠ ಶನಿವಾರ ಪತ್ರಿಕಾಗೋಷ್ಠಿಯ ಚಲನಚಿತ್ರೋತ್ಸವ ಮಾಹಿತಿ ನೀಡಿದರು.

ಪ್ರದರ್ಶನಗೊಳ್ಳುವ ಚಲನಚಿತ್ರಗಳ ಕಥಾಸಾರಾಂಶ:
17ರಂದು ಅಂತ –

ಇತ್ತೀಚೆಗೆ ನಿಧನರಾದ ಚಿತ್ರರಂಗದ ಹಿರಿಯ ನಟ ಅಂಬರೀಷ್ ಅವರ ಸ್ಮರಣಾರ್ಥ ” ಅಂತ” ಚಲನಚಿತ್ರವನ್ನು ಉದ್ಘಾಟನಾ ಚಿತ್ರವನ್ನಾಗಿ ಪ್ರದರ್ಶಿಸಲಾಗುತ್ತಿದೆ. ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ನಿರ್ದೇಶನದ ಈ ಚಿತ್ರ 1981 ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ದಾಖಲೆಯೊಂದನ್ನು ಸೃಷ್ಟಿಸಿತು. ಅಂಬರೀಷ್ ಅವರಿಗೆ ರೆಬೆಲ್ ಇಮೇಜನ್ನು ನೀಡಿದ ಈ ಚಿತ್ರ ಆನಂತರ ಹಿಂದಿ ಸೇರಿದಂತೆ ಬಹುತೇಕ ಇತರ ಭಾಷೆಗಳಲ್ಲೂ ರೀಮೇಕ್ ಆಗಿದೆ.
ಕುಖ್ಯಾತ ಕನ್ವರ್‌ಲಾಲ್‌ನ ರಹಸ್ಯ ಕೋಟೆಯನ್ನು ಮುರಿಯುವ ಸಲುವಾಗಿ ಸಿಬಿಐ ಅಧಿಕಾರಿಗಳು, ಕನ್ವರ್‌ಲಾಲನನ್ನೇ ಹೋಲುವ ಇನ್ಸ್ಪೆಕ್ಟರ್ ಸುಶೀಲ್‌ಕುಮಾರ್‌ನನ್ನು ಅವನ ಕೋಟೆಗೆ ನುಗ್ಗಿಸುವ ತಂತ್ರ ಮಾಡುತ್ತಾರೆ. ಅಲ್ಲಿ ದುಷ್ಟರ ವಿರುದ್ಧ ಹೋರಾಟದಲ್ಲಿ ಸುಶೀಲ್‌ಕುಮಾರ್ ಹೇಗೆ ಪರಿತಪಿಸುತ್ತಾನೆ ಎನ್ನುವ ಈ ಕತೆ, ಎಚ್.ಕೆ.ಅನಂತರಾವ್ ಅವರ ಕಾದಂಬರಿಯನ್ನಾಧರಿಸಿದೆ. ಅಂಬರೀಷ್, ಲಕ್ಷ್ಮೀ, ಜಯಮಾಲಾ, ಪ್ರಭಾಕರ್, ಸುಂದರಕೃಷ್ಣ ಅರಸ್, ವಜ್ರಮುನಿ ಮೊದಲಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

18ರಂದು 3 ಚಿತ್ರ
ಶುದ್ಧಿ-

ನೈಜ ಘಟನೆಯನ್ನಾಧರಿಸಿದ ಚಿತ್ರ. ಆಧ್ಯಾತ್ಮದ ಹಂಬಲದಿಂದ ಭಾರತಕ್ಕೆ ಬರುವ ಅಮೆರಿಕದ ತರುಣಿಯೊಬ್ಬಳ ಹೋರಾಟದ ಕತೆ. ಅಮೆರಿಕದ ಈ ತರುಣಿ, ಬಾಲಾಪರಾಧ ಕಾಯ್ದೆಯ ತೊಡಕುಗಳ ವಿರುದ್ಧ ಹೋರಾಡುತ್ತಿರುವ ಇಬ್ಬರು ಪತ್ರಕರ್ತರ ಜೊತೆ ಕೈಜೋಡಿಸುತ್ತಾಳೆ, ದುಷ್ಟರ ವಿರುದ್ಧ ಹೋರಾಟದಲ್ಲಿ ದೌರ್ಜನ್ಯಕ್ಕೆ ಈಡಾಗುತ್ತಾಳೆ, ಆನಂತರ ನ್ಯಾಯಕ್ಕಾಗಿ ಏಕಾಂಗಿಯಾಗಿ ಹೋರಾಡುವ ಕತೆಯಲ್ಲಿ ಹಾಲಿವುಡ್‌ನ ಲೊರೆನ್ ಸ್ಪಾರ್ಟಾನೋ ನಾಯಕಿಯಾಗಿದ್ದಾರೆ. ಈ ಚಿತ್ರವನ್ನು ಆದರ್ಶ ಎಚ್.ಈಶ್ವರಪ್ಪ ನಿರ್ದೇಶಿಸಿದ್ದಾರೆ. ನಿವೇದಿತಾ, ಅಮೃತಾಕರಗದ, ಶಶಾಂಕ, ಪುರುಷೊತ್ತಮ ಪಾತ್ರವರ್ಗದಲ್ಲಿದ್ದಾರೆ.

ಒಂದಲ್ಲಾ ಎರಡಲ್ಲಾ-

ಪುಟ್ಟ ಬಾಲಕ ಸಮೀರನ ಕತೆ. ಅವನು ಸಾಕಿದ ಹಸುವಿನ ಬಗ್ಗೆ ಅಪಾರ ಮಮತೆ. ಒಂದು ದಿನ ಆ ಹಸು ಕಣ್ಮರೆಯಾಗುತ್ತದೆ. ಕಳವಳಗೊಂಡ ಸಮೀರ ಏಕಾಂಗಿಯಾಗಿ ಅದನ್ನು ಹುಡುಕಲಾರಂಭಿಸುತ್ತಾನೆ. ಹುಡುಕಾಟದಲ್ಲಿ ಎಷ್ಟೋ ಮಂದಿ ಅವನಿಗೆದುರಾಗುತ್ತಾರೆ. ಎಲ್ಲ ಸವಾಲುಗಳನ್ನು ಅವನು ಎದುರಿಸಬೇಕಾಗುತ್ತದೆ. 2018 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ’ರಾಮಾರಾಮಾರೇ’ ಚಿತ್ರದ ಮೂಲಕ ಹೆಸರಾದ ಡಿ ಸತ್ಯಪ್ರಕಾಶ್ ನಿರ್ದೇಶಿಸಿದ್ದಾರೆ. ಮಾತಾ ಕೊಪ್ಪಳ, ರೋಹಿತ್ ಪಾಂಡವಪುರ, ಸಾಯಿಕೃಷ್ಣ ಕುಡ್ಲ, ನಾಗಭೂಷಣ್, ಆನಂದನೀನಾಸಂ ಪಾತ್ರವರ್ಗದಲ್ಲಿದ್ದಾರೆ.

ಒಂದು ಮೊಟ್ಟೆಯ ಕತೆ –

ತಾರುಣ್ಯದಲ್ಲೇ ತಲೆ ಕೂದಲು ಉದುರಿ, ಬೋಳಾಗುವ ಯುವಕನ ಸಂಕಟವನ್ನು ಇಲ್ಲಿ ಹೇಳಲಾಗಿದೆ. ಬಹಳ ಯುವಕರು ಈ ಕಾರಣದಿಂದಲೇ ಸೂಕ್ತ ಜೋಡಿಯನ್ನು ಹುಡುಕಿಕೊಳ್ಳಲಾಗದ ಸಂಕಟದಲ್ಲಿರುವುದನ್ನು ನಿರ್ದೇಶಕ ರಾಜ್ ಬಿ.ಶೆಟ್ಟಿ ಹಾಸ್ಯದ ಹೂರಣವಿಟ್ಟು ಹೇಳಿದ್ದಾರೆ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯ ಎಂಬ ಸಂದೇಶವನ್ನು ಚಿತ್ರ ಜೇಳುತ್ತದೆ. ಚಿತ್ರದ ತಾರಾಗಣದಲ್ಲಿ ರಾಜ್ ಬಿ.ಶೆಟ್ಟಿ, ಉಷಾ ಭಂಡಾರಿ, ಶ್ರೇಯಾ ಅರ್ಚನ್, ಶೈಲಶ್ರೀ ಮುಲ್ಕಿ, ಪ್ರಕಾಶ್ ಮಟಿನಾಡ್ ಮೊದಲಾದವರಿದ್ದಾರೆ.

19ರಂದು 3 ಚಿತ್ರ
ಸಾವಿತ್ರಿಬಾಯಿ ಫುಲೆ-

ಸಮಾಜ ಸುಧಾರಕಿ, ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ. ಡಾ.ಸರಜೂ ಕಾಟ್ಕರ್ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿದ ಚಿತ್ರ. ಬಾಲ್ಯದಲ್ಲೇ ಸತಿಸಹಗಮನದ ವಿರುದ್ಧ ಹೋರಾಟ ರೂಪಿಸಿದ ಸಾವಿತ್ರಿಬಾಯಿ, ಹಿಂದುಳಿದವರು, ಬಡಬಗ್ಗರು, ಮಹಿಳೆಯರಿಗೆ ಶಿಕ್ಷಣ ನೀಡಬೇಕೆಂದು ಹೋರಾಡುತ್ತಾಳೆ. ದಲತರಿಗಾಗಿ ಶಾಲೆಯೊಂದನ್ನು ಆರಂಭಿಸುತ್ತಾಳೆ, ಮಹಿಳೆಯರಿಗೆ ಶಿಕ್ಷಣ ನೀಡುವುದನ್ನೇ ವಿರೋಧಿಸುತ್ತಿದ್ದ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಬೇಕೆಂದು ಪ್ರತಿಪಾದಿಸುತ್ತಾಳೆ, ದಲಿತರಿಗೆ ಶಾಲೆ ತೆರೆಯುತ್ತಾಳೆ. ಇದು ಸಂಪ್ರದಾಯಸ್ಥರನ್ನು ಕೆರಳಿಸುತ್ತದೆ. ವಿಶಾಲ್ ರಾಜ್‌ನಿರ್ದೇಶನದ ಈ ಚಿತ್ರದಲ್ಲಿ ಸಾವಿತ್ರಿಬಾಯಿಯಾಗಿ ತಾರಾ ಅಭಿನಯಿಸಿದ್ದಾರೆ. ಸುಚೀಂದ್ರಪ್ರಸಾದ್ ಅವರು ಜ್ಯೋತಿಬಾ ಪಾತ್ರದಲ್ಲಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು-

ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಶಾಲೆಯೊಂದರ ಸ್ಥಿತಿಗತಿಯನ್ನು ಚಿತ್ರಿಸುವ ’ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮಕ್ಕಳ ಚಿತ್ರವಾಗಿಯೂ ಗಮನಸೆಳೆಯುತ್ತದೆ. ಶಾಲೆಯೊಂದನ್ನು ಉಳಿಸಿಕೊಳ್ಳಲು ಮಕ್ಕಳು ಪಡುವ ಶ್ರಮವನ್ನು ನವಿರಾದ ಹಾಸ್ಯದ ಮೂಲಕ ನಿರ್ದೇಶಕ ರಿಷಬ್‌ಶೆಟ್ಟಿ ನಿರೂಪಿಸಿದ್ದಾರೆ. ಅನಂತನಾಗ್ ಅವರೂ ಕೂಡ ತಾರಾಬಳಗದಲ್ಲಿದ್ದಾರೆ.

ಅಮ್ಮಚ್ಚಿಯೆಂಬ ನೆನಪು-

ವೈದೇಹಿ ಅವರ ಕತೆಗಳನ್ನಾಧರಿಸಿದ “ಅಮ್ಮಚ್ಚಿಯೆಂಬ ನೆನಪು” ಮಹಿಳಾ ಪ್ರಧಾನ ಚಿತ್ರ. ಕುಂದಾಪುರದ ಸಂಪ್ರದಾಯ ಕುಟುಂಬಗಳಲ್ಲಿ ಯಾವುದೇ ಸ್ವಾತಂತ್ರ್ಯವಿಲ್ಲದೆ ಮೌನವೇದನೆ ಅನುಭವಿಸುತ್ತಿರುವ ಮೂವರು ಮಹಿಳೆಯರ ದುರಂತ ಕತೆಗಳನ್ನು ನಿರ್ದೇಶಕಿ ಚಂಪಾಶೆಟ್ಟಿ ಅವರು ನಿರೂಪಿಸಿದ್ದಾರೆ. ಕುಂದಾಪುರದ ಕುಂದಕನ್ನಡದಲ್ಲಿ ಸಂಭಾಷಣೆಗಳಿರುವುದೂ ಕೂಡ ಈ ಚಿತ್ರದ ವಿಶೇಷ. ಮುಖ್ಯಪಾತ್ರದಲ್ಲಿ ವೈಜಯಂತಿ ಅಡಿಗ, ಡಾ.ರಾಧಾಕೃಷ್ಣ ಉಲ್ಲಾಳ, ರಾಜ್ ಬಿ.ಶೆಟ್ಟಿ, ದಿಯಾ ಪಲ್ಲಕ್ಕಿ ಮೊದಲಾದವರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button