Kannada NewsKarnataka NewsLatest

*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಡಿಒ*

ತಪ್ಪಿಸಿಕೊಳ್ಳಲು ಕೈ ಕುಯ್ದುಕೊಂಡು ಹೈಡ್ರಾಮಾ


ಪ್ರಗತಿವಾಹಿನಿ ಸುದ್ದಿ: ಲಂಚಕ್ಕೆ ಕೈಯೊಡ್ದಿದಾಗಲೇ ಮಹಿಳಾ ಪಿಡಿಒ ಓರ್ವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿದ ಪ್ರಸಂಗವೂ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾ.ಪಂ. ಕಚೇರಿಯಲ್ಲಿ ಈ ಘಟನೆ ನಡೆದಿದೆ. ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿದ್ದ ಸ್ವಾಮಿ ಎಂಬುವವರು ನಿಧನರಾದ ಬಳಿಕ, ಅವರ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು. ಮೃತ ಸ್ವಾಮಿ ಅವರ ಎರಡು ವರ್ಷದ ಬಾಕಿ ಸಂಬಳ ಸುಮಾರು 4 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಹದೇವ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಖಚಿತ ಮಾಹಿತಿ ಮೇರೆಗೆ ಕಚೇರಿಯಲ್ಲಿ ಮುಂಗಡವಾಗಿ 25 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಕಂಗಾಲಾದ ಮಂಜುಳಾ, ಕಚೇರಿಯಲ್ಲೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಹೈಡ್ರಾಮಾ ಮಾಡಿದ್ದಾಳೆ. ತಕ್ಷಣ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಯ ನಂತರ ಲೋಕಾಯುಕ್ತ ಪೊಲೀಸರು ವಿಚಾರಣೆ ಮುಂದುವರಿಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button