
ಪ್ರಗತಿವಾಹಿನಿ ಸುದ್ದಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದ ದೈಹಿಕ ಶಿಕ್ಷಕ ಕಚೇರಿಯ 3ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್ ಪಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ವಿಜಯನಗರ ಮೂಲದ ಶಶಿಧರ್ (49) ಮೃತ ದೈಹಿಕ ಶಿಕ್ಷಕ. ಶಶಿಧರ್ ಕಳೆದ 15 ವರ್ಷಗಳಿಂದ ಚನ್ನಪಟ್ಟಣ ತಾಲೂಕಿನ ಅನುದಾನಿತ ಪ್ರೌಢಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಶಶಿಧರ್ ವಿರುದ್ಧ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಶನಿವಾರ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಶುಕ್ರವಾರವೇ ಪೊಲೀಸರು ಇವರನ್ನು ಬಂಧಿಸಿದ್ದರು.
ರಾಮನಗರ ಮಹಿಳಾ ಠಾಣೆಯ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದರು. ಇಂದು ಬೆಳಿಗ್ಗೆ ಆರೋಪಿಗೆ ವೈದ್ಯಕೀಯ ತಪಾಸಣೆ ಮಾಡಿಸಿದ ಬಳಿಕ, ಮುಂದಿನ ಕಾನೂನು ಪ್ರಕ್ರಿಯೆಯಾಗಿ ಬೆರಳಚ್ಚು ನೋಂದಣಿ ಮಾಡಿಸಲು ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್‌ಪಿ ಕಚೇರಿಗೆ ಕರೆದುಕೊಂಡು ಬಂದಿದ್ದರು.
ಈ ವೇಳೆ ಶಶಿಧರ್ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದಾರಿಮಧ್ಯದಲ್ಲೇ ಶಶಿಧರ್ ಮೃತಪಟ್ಟಿದ್ದಾರೆ.
ಶಶಿಧರ್ ಸಾವಿಗೆ ಶಾಲಾ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಕಾರಣ. ಅವರ ವಿರುದ್ಧ ಸುಳ್ಳು ಹಾರೋಪ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಶಿದ್ದಾರೆ.


