*ಕಸ್ತೂರಿ ರಂಗನ್ ವರದಿ: ಸರ್ವಪಕ್ಷ ನಿಯೋಗದ ಮೂಲಕ ಕೇಂದ್ರ ಸರ್ಕಾರಕ್ಕೆ ರೈತರ ಅಭಿಪ್ರಾಯ ಮುಟ್ಟಿಸುತ್ತೇವೆ: ಸಿಎಂ ಡಿ.ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕಸ್ತೂರಿ ರಂಗನ್ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡಿದ ಬಳಿಕ ಶಾಸಕರು, ಸಂಸದರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರ ಬಳಿಗೆ ಕರೆದೋಯ್ದು ನಿಮ್ಮ ಅಭಿಪ್ರಾಯವನ್ನು ಮುಟ್ಟಿಸುತ್ತೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎಪಿಎಂಸಿ ಯಾರ್ಡ್ ಅವರಣದಲ್ಲಿ ಭಾನುವಾರ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಅಧಿಸೂಚನೆ ಹೊರಡಿಸಿ ಸೆ.27ರ ಒಳಗೆ ಉತ್ತರ ನೀಡುವಂತೆ ನಮಗೆ ಸೂಚಿಸಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲಿ ವರದಿ ತಿರಸ್ಕರಿಸಿದ್ದೆವು. ಈ ಮಧ್ಯೆ ಅಕ್ಕ ಪಕ್ಕ ರಾಜ್ಯಗಳು ಕೆಲವು ಕ್ರಮಗಳ ಮೂಲಕ ತಿದ್ದುಪಡಿ ಮಾಡಿ ಬದಲಾವಣೆ ತಂದಿವೆ. ನಿಮ್ಮ ಪರವಾಗಿ, ನಿಮ್ಮ ಧ್ವನಿಯಾಗಿ ನಿಲ್ಲಲು ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ” ಎಂದು ಹೇಳಿದರು.
ರೈತರಿಗೆ ನೋಟೀಸ್ ಕೊಟ್ಟು ಕಿರುಕುಳ ನೀಡಬಾರದು
“ಅರಣ್ಯ ಅಧಿಕಾರಿಗಳು ರೈತರಿಗೆ ನೋಟೀಸ್ ಕೊಟ್ಟು ಕಿರುಕುಳ ನೀಡಬಾರದು. ಜನ ಭಯದ ವಾತಾವರಣದಲ್ಲಿ ಬದುಕಬಾರದು ಎಂದು ಮಾರ್ಗದರ್ಶನ ನೀಡಿರುವೆ. ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡಲಾಗುವುದು. ಅರಣ್ಯ ಹಕ್ಕು ಕಾಯ್ದೆಯಲ್ಲಿ ಬುಡಕಟ್ಟು ಜನರಿಗೆ 25 ಹಾಗೂ ಇತರರಿಗೆ 75 ವರ್ಷಗಳ ಮಿತಿ ಇದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ 25 ವರ್ಷಗಳ ಮಿತಿ ನಿಗದಿಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಆಗ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ನಾಯಕರು ಯಾವ ರೀತಿ ಸಹಕಾರ ನೀಡುತ್ತಾರೆ ನೋಡೋಣ” ಎಂದು ಹೇಳಿದರು.
“ರೈತನಿಗೆ ವೇತನ, ಬಡ್ತಿ, ನಿವೃತ್ತಿ, ಪಿಂಚಣಿ, ಲಂಚ ಯಾವುದೂ ಇಲ್ಲ. ರೈತರ ಹಿತ ಕಾಪಾಲು ಕಸ್ತೂರಿ ರಂಗನ್ ವಿಚಾರವಾಗಿ ನಿಮ್ಮ ಅಭಿಪ್ರಾಯ ಕೇಳಲು ಬಂದಿರುವೆ. ಭೌತಿಕ ಸಮೀಕ್ಷೆ ಮಾಡಬೇಕು ಎಂದು ಸಲಹೆ ನೀಡಿದ್ದೀರಿ. ನಿಮ್ಮ ಭಾವನೆಯನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಬೇರೆ ಶಾಸಕರ ಅಭಿಪ್ರಾಯ ಕೇಳುವೆ. ಮತ್ತೆ ಕೆಲವರು ಸಾರಾಸಗಟಾಗಿ ತಿರಸ್ಕರಿಸಿ ಎಂದಿದ್ದಾರೆ. ಆ ರೀತಿ ಮಾಡಿದರೆ ಏನಾಗುತ್ತದೆ ಆಲೋಚನೆ ಮಾಡಬೇಕು. ಗ್ರಾಮ ಸಭೆ, ಸೂಕ್ಷ್ಮ ಪರಿಸರ ವಲಯ, ವಲಯ ನಿರ್ವಹಣೆ ಯೋಜನೆ ಬಗ್ಗೆ ಸಲಹೆ ನೀಡಿದ್ದಾರೆ. ಭೂಮಿ ವಿಚಾರ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಕೇಂದ್ರ ಸರ್ಕಾರ ಈ ಹಕ್ಕನ್ನು ರಾಜ್ಯಕ್ಕೆ ನೀಡಬೇಕು ಎಂದು ಪ್ರಸ್ತಾಪಿಸಿ ಎಂದು ಸಲಹೆ ನೀಡಿದ್ದಾರೆ” ಎಂದು ಹೇಳಿದರು.
“ಇದರ ಜೊತೆಗೆ ಅಕ್ರಮ ಸಕ್ರಮ, ಬಗರ್ ಹುಕ್ಕುಂ, ಅರಣ್ಯ ಹಕ್ಕು ಅರ್ಜಿ ವಿಲೇವಾರಿ ಮಾಡಿ, ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ನಮ್ಮ ಸರ್ಕಾರ ಆದ್ಯತೆ ನೀಡಲಾಗುವುದು. ನಾವು ತೇಗದ ಸಿರಿ ಕಾರ್ಯಕ್ರಮ ತಂದಿದ್ದೇವೆ. ರಸ್ತೆ ಬದಿಯಲ್ಲಿ ಸರ್ಕಾರ ತೇಗದ ಮರ ನೀಡಿ ಅದನ್ನು ಬೆಳೆಸಲು ರೈತರಿಗೆ ಜವಾಬ್ದಾರಿ ನೀಡಲಾಗುವುದು. ಕಟಾವು ಬಂದಾಗ ಆದಾಯದಲ್ಲಿ 70% ರೈತರಿಗೆ 30% ಸರ್ಕಾರಕ್ಕೆ ಬರಲಿದೆ. ರೈತರ ಬದುಕಿನಲ್ಲಿ ಶಕ್ತಿ ತುಂಬಲು ಇಂತಹ ಯೋಜನೆ ರೂಪಿಸಲಾಗಿದೆ” ಎಂದರು.
ಬಿಜೆಪಿಯವರಿಗೆ ರಾಜಕೀಯ ಮುಖ್ಯ, ನಮಗೆ ಜನರ ಅಭಿಪ್ರಾಯ ಮುಖ್ಯ
“ಬಿಜೆಪಿಯವರು ಅಧಿವೇಶನದಲ್ಲಿ ಬರ, ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡದೇ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಾಲಹರಣ ಮಾಡಿದರು. ನಾನು ಅಧಿವೇಶನ ಮೋಟಕುಗೊಳಿಸಿ ರಾಜ್ಯದ ನಮ್ಮ ಶಾಸಕರು ಹಾಗೂ ಸಂಸದರ ಸಭೆ ಮಾಡಿದೆ. ಆಗ ಜನಪ್ರತಿನಿಧಿಗಳು ಇದರ ಮಹತ್ವದ ವಿವರಿಸಿದರು. ನಾನು ರಾಜೀನಾಮೆ ಪಡೆದ ಬಳಿಕ ಪಾದಯಾತ್ರೆ ಮಾಡಿದರು. ಆ ಮೂಲಕ ರಾಜಕೀಯ ಹೆಚ್ಚು ಎಂದು ತೋರಿಸಿದ್ದಾರೆ. ನಾನು ಇದಕ್ಕಾಗಿ ವಿಶೇಷ ಅಧಿವೇಶನ ಕರೆದಿದ್ದೇನೆ. ಅವರು ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾನು ಬದುಕಿನ ಮೇಲೆ ರಾಜಕಾರಣ ಮಾಡಲು ಜನರ ಬಳಿ ಬಂದಿದ್ದೇನೆ. ನಿಮ್ಮ ನೋವು, ಸಮಸ್ಯೆ ಆಲಿಸಲು ಬಂದಿದ್ದೇನೆ. ವಿಧಾನ ಸೌಧದಲ್ಲಿ ಚರ್ಚೆ ಮಾಡುವ ಮುನ್ನ ನಮ್ಮ ಶಾಸಕರು ಇಲ್ಲದ ಕ್ಷೇತ್ರಗಳ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ” ಎಂದು ತಿಳಿಸಿದರು.
“ಎಲ್ಲಾ ಶಾಸಕರು ಉತ್ತಮ ಸಲಹೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಜನರ ನೋವು ಅರಿತು ಪರಿಹಾರ ನೀಡಲು ಪ್ರಜಾಸೇವೆ ಇಲಾಖೆ ಆರಂಭಿಸಿರುವೆ. ಶಾಸಕರು ಸಭೆಯಲ್ಲಿ ಭಾಗವಹಿಸದೆ ಇದ್ದರೂ ಜಿಲ್ಲಾ ಮಂತ್ರಿಗಳು ತಿಂಗಳಿಗೆ 2 ದಿನ 2 ತಾಲ್ಲೂಕಿಗೆ ಹೋಗಬೇಕು. ಶಾಸಕರು ಜನರ ಬಳಿ ಹೋಗದೆ ಇದ್ದರೆ ಅಧಿಕಾರಿಗಳು ಹೋಗಬೇಕು. ನಂತರ ಹೋಬಳಿ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು” ಎಂದರು.
“ರಾಹುಲ್ ಗಾಂಧಿ ಅವರು ಬೆಲೆ ಏರಿಕೆ, ಕೋಮು ದ್ವೇಷ ಶಮನಕ್ಕೆ ಭಾರತ ಜೋಡೋ ಯಾತ್ರೆ ಮಾಡಿದರು. ದೇಶದ ಎಲ್ಲೆಡೆ ಹೆಜ್ಜೆ ಹಾಕಿ ಜನರ ನೋವು ಆಲಿಸಿದ ನಾಯಕರು ರಾಹುಲ್ ಗಾಂಧಿ ಮಾತ್ರ. ರಾಜ್ಯದಲ್ಲಿ ಈ ಯಾತ್ರೆ ಹೋದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಜನರ ಬಳಿಗೆ ಹೋದಾಗ ಜನ ಸ್ಪಂದಿಸುತ್ತಾರೆ, ಆಶೀರ್ವಾದ ಮಾಡುತ್ತಾರೆ” ಎಂದರು.
ಲಂಚ ಮುಕ್ತ ರಾಜ್ಯ ಮಾಡುವುದು, ನಮ್ಮ ದೃಢ ಕರ್ನಾಟಕದ ಸಂಕಲ್ಪ
“ಅನೇಕರು ಉತ್ತಮ ಸಲಹೆ ನೀಡಿದ್ದಾರೆ. ನಮ್ಮ ಹಿಂದಿನ ಸರ್ಕಾರಗಳು ಉಳುವವನಿಗೆ ಭೂಮಿ, ಬಗರ್ ಹುಕ್ಕುಂ ಸಾಗುವಳಿ ಭೂಮಿ ನೀಡಿದೆ. ರೈತರಿಗೆ ಸಹಾಯ ಮಾಡಲು ಅನೇಕ ಅಡಚಣೆ ಇದೆ. 94c ಸೇರಿದಂತೆ ಅನೇಕ ಸಮಸ್ಯೆ ಇದೆ. ರೈತರ ಭೂಮಿಗೆ ಖಾತಾ ಸೇರಿದಂತೆ ಸೂಕ್ತ ದಾಖಲೆ ನೀಡಲು ನಿಮ್ಮ ಸರ್ಕಾರ ಕೈಗೊಂಡಿದೆ. ಇದಕ್ಕೆ ಯಾರೂ ಲಂಚ ನೀಡಬಾರದು. ಲಂಚ ಮುಕ್ತ ರಾಜ್ಯ ಮಾಡುವುದು, ನಮ್ಮ ದೃಢ ಕರ್ನಾಟಕದ ಸಂಕಲ್ಪ. ಕೆಲವರು ನಾನು ಏನೇ ಮಾಡಿದರೂ ಟೀಕೆ ಮಾಡುತ್ತಾರೆ. ನಾನು ಸಚಿವ ಸಂಪುಟ ಮಾಡಿದರೂ ಟೀಕೆ, ನಡೆದರೂ ಟೀಕಿಸುತ್ತಾರೆ. ಅವರು ಮಾಡಲಿ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂದು ಹೇಳಿದರು.
ಉದ್ಯೋಗ ಸೃಷ್ಟಿಸಿ, ವಲಸೆ ತಪ್ಪಿಸಲು ಪ್ರವಾಸೋದ್ಯಮ ನೀತಿ
“ಕಳೆದ ಐದು ದಿನಗಳಲ್ಲಿ ಕಲಬುರ್ಗಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಪ್ರವಾಸ ಮಾಡುತ್ತಿರುವೆ. ಮಂಗಳೂರಿನಲ್ಲಿ ಯುವಕರು ವಲಸೆ ತಪ್ಪಿಸಿ ಅಲ್ಲೇ ಉದ್ಯೋಗ ಸೃಷ್ಟಿಸಲು ಪ್ರವಾಸೋದ್ಯಮ ನೀತಿ ರೂಪಿಸಿದೆ. ಮಲೆನಾಡಿನಲ್ಲೂ ಇದೇ ಪರಿಸ್ಥಿತಿ ಇರುವುದರಿಂದ ಕರಾವಳಿ ಜೊತೆಗೆ ಮಲೆನಾಡು ಭಾಗಕ್ಕೆ ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ ನೀಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.
ಅಕ್ರಮ ಬಂದೂಕು ಸರ್ಕಾರಕ್ಕೆ ಒಪ್ಪಿಸಿ
“ತಲೆಮಾರುಗಳಿಂದ ನಿಮ್ಮ ಭೂಮಿ ಕಾಪಾಡುತ್ತಿದ್ದೀರಿ. ನೀವು ಹೊಸದಾಗಿ ಒತ್ತುವರಿ ಮಾಡಬೇಡಿ. ಪರವಾನಗಿ ಇಲ್ಲದೆ ಬಂದೂಕು ಇಟ್ಟುಕೊಂಡಿರುವವರು ನ. 01ರ ಒಳಗೆ ಸರ್ಕಾರಕ್ಕೆ ಒಪ್ಪಿಸಿ. ಅಕ್ರಮವಾಗಿ ಬಂದೂಕು ಇಟ್ಟುಕೊಂಡವರಿಂದ ಇತ್ತೀಚಿಗೆ ಏನಾಗಿದೆ ಎಂದು ನಿಮಗೆ ಗೊತ್ತಿದೆ. ನಿಮಗೆ ಅಗತ್ಯ ಇದ್ದರೆ ಸರ್ಕಾರ ಪರವಾನಗಿ ನೀಡಲಿದೆ. ಅಕ್ರಮವಾಗಿ ಬಂದೂಕು ಇಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ನಿಮ್ಮ ವಿಶ್ವಾಸ ಇರುವಷ್ಟು ದಿನ ನಿಮ್ಮ ಸೇವೆ ಮಾಡುವೆ
“ಸಂಜಯ್ ಕುಮಾರ್ ಎಂಬ ಐಪಿಎಸ್ ಅಧಿಕಾರಿಗೆ ಅಧ್ಯಯನ ಮಾಡಲು ಸೂಚನೆ ನೀಡಲಾಗಿದ್ದು, 2027ರವರೆಗೆ ಕಾಲಾವಕಾಶ ನೀಡಲಾಗಿದೆ. ಇದರ ಬಗ್ಗೆ ಪರಿಶೀಲನೆ ಮಾಡುವೆ. ಗ್ಯಾರಂಟಿ ಯೋಜನೆ ನೀಡಿ ಜನರಿಗೆ ಆರ್ಥಿಕ ಶಕ್ತಿ ತುಂಬಲಾಗಿದೆ. ಬಿಜೆಪಿ ಸ್ನೇಹಿತರು ತಮ್ಮ ಅವಧಿಯಲ್ಲಿ ಮಾಡಿರುವ ಸಾಧನೆ ಹೇಳಲಿ. ದೇವರು ವರ, ಶಾಪ ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ನನಗೆ ಸಿಕ್ಕ ಅವಕಾಶದಲ್ಲಿ ನಾನು ಸೇವೆ ಮಾಡುವೆ. ಮಾನವ ಪ್ರಾಣಿ ಸಂಘರ್ಷ, ಅಡಿಕೆ ಬೆಲೆ ಕುಸಿತ, ತೆರಿಗೆ ವಿಚಾರವಾಗಿ ಬಗ್ಗೆ ಗಮನ ಹರಿಸಿದ್ದು, ಮುಂದಿನ ದಿನಗಳಲ್ಲಿ ಪರಿಹಾರ ನೀಡಲಾಗುವುದು. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ನನಗೆ ಎಷ್ಟು ದಿನ ಸಮಯ ಇದೆಯೋ, ನಿಮ್ಮ ವಿಶ್ವಾಸ ಇರುವಷ್ಟು ದಿನ ನಿಮ್ಮ ಸೇವೆ ಮಾಡುವೆ” ಎಂದು ಹೇಳಿದರು.
ಅಧಿವೇಶನದಲ್ಲಿ ಈ ವರದಿಯನ್ನು ತಿರಸ್ಕರಿಸಿ ನಿರ್ಣಯ ಹೊರಡಿಸಿ:
ಕಾರ್ಯಕ್ರಮದಲ್ಲಿ ಉಚ್ಚಂಗಿ ಗ್ರಾಮ ಪಂಚಾಯಿತಿಯ ಕೃಷಿಕರಾದ ಹೆಚ್ ಉದಯ್, ದೇವಾಲದಕೆರೆಯ ಕೃಷಿಕರಾದ ಡಿ ಎಸ್ ಲೋಕೇಶ್, ಬ್ಯಾಕರವಳ್ಳಿಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಮೇಘರಾಜು, ಮಾಜಿ ಶಾಸಕರಾದ ಎಚ್ ಎಂ ವಿಶ್ವನಾಥ್, ಸಚಿವರಾದ ಶಿವಲಿಂಗೆಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಸೀಮೆಂಟ್ ಮಂಜು ಅವರು ಸೇರಿದಂತೆ ಅನೇಕರು ಕಸ್ತೂರಿ ರಂಗನ್ ವರದಿಯಿಂದ ತಮ್ಮ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಅವರ ಮಾತಿನ ಸಾರಾಂಶ ಹೀಗಿದೆ:
ಇದೊಂದು ಅವೈಜ್ಞಾನಿಕ ವರದಿ. ಈ ಭಾಗದಲ್ಲಿ ಪ್ರವಾಸೋದ್ಯಮ ಪ್ರಗತಿಗೆ ಈ ವರದಿಗೆ ಪೆಟ್ಟು ಬೀಳಲಿದೆ. ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಂದರೆಗೆ ಒಳಗಾದ ತಾಲ್ಲೂಕು ಸಕಲೇಶಪುರ. ಈ ತಾಲ್ಲೂಕಿನ 8 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 30 ಹಳ್ಳಿಗಳಿಗೆ ಈ ವರದಿಗೆ ಒಳಪಡುತ್ತಿವೆ. ನಮ್ಮ ಪ್ರತಿ ಗ್ರಾಮದ ಪ್ರತಿ ಮನೆ ಹಾಗೂ ಜಮೀನು ಸಮೀಕ್ಷೆ ಮಾಡಬೇಕು.
6 ರಾಜ್ಯಗಳ ಪೈಕಿ ಹೆಚ್ಚು ತಿಂದರೆ ಕರ್ನಾಟಕಕ್ಕೆ ಆಗುತ್ತಿದೆ. ರಾಜ್ಯದ ಸುಮಾರು 20 ಸಾವಿರ ಚ.ಕಿ.ಮೀ ಪ್ರದೇಶ ಇದರ ವ್ಯಾಪ್ತಿಗೆ ಸೇರಿದೆ. ಕಸ್ತೂರಿ ರಂಗನ್ ಹಾಗೂ ಅವರ ಸಮಿತಿಯ 10 ಜನ ಸದಸ್ಯರು ಈ ಭಾಗದ ಜನರನ್ನು ಭೇಟಿ ಮಾಡಿಲ್ಲ, ಜನರ ಜೀವನ ನೋಡಿಲ್ಲ. ಉಪಗ್ರಹ ಸಮೀಕ್ಷೆ ಮಾಡಿದ್ದಾರೆ.
ಈ ಭಾಗದ ಜನ ಈಗಾಗಲೇ ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ, ಅರಣ್ಯ ರಕ್ಷಣೆ ಕಾಯ್ದೆ, ಸೆಕ್ಷನ್ 4 ಸೇರಿದಂತೆ ಅನೇಕ ಕಾಯ್ದೆಗಳಿಂದ ಹಾಗೂ ಮಾನವ ಮತ್ತು ಪ್ರಾಣಿ ಸಂಘರ್ಷದಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಇದರ ಮಧ್ಯೆ ಈ ವರದಿ ಜಾರಿ ಆದರೆ, ಇದು ರೈತರ ಪಾಲಿನ ಮರಣ ಶಾಸನ. ಇದನ್ನು ಅನುಷ್ಠಾನ ಮಾಡಬಾರದು. ಇದನ್ನು ಅಧಿವೇಶನದಲ್ಲಿ ಈ ವರದಿಯನ್ನು ತಿರಸ್ಕರಿಸಿ ನಿರ್ಣಯ ಹೊರಡಿಸಬೇಕು.




