ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹಲಗಾ ಬಳಿ ಈಗಾಗಲೇ ಭೂಸ್ವಾಧೀನಪಡಿಸಿಕೊಳ್ಳಲಾಗಿರುವ ಸ್ಥಳದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್ ಟಿಪಿ) ನಿರ್ಮಾಣ ಯೋಜನೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ರೈತರು, ಶಾಸಕರನ್ನು ಒಳಗೊಂಡಂತೆ ಐದು ಜನರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರ ಪುರಸ್ಕೃತ ಅಮೃತ ಯೋಜನೆಯಡಿ ಎಸ್ ಟಿಪಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು.
ಸಮಿತಿಯು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಎಸ್ ಟಿಪಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಅಮೃತ ಯೋಜನೆಯಡಿ 156 ಕೋಟಿ ರೂ. ಒಳಚರಂಡಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಹಲಗಾ ಬಳಿಯ 19 ಎಕರೆ 8 ಗುಂಟೆ ಜಮೀನು ಸ್ವಾಧೀನಕ್ಕೆ 2013 ರಲ್ಲಿ ಐತೀರ್ಪು ನೀಡಲಾಗಿದೆ. ಅದರ ಪ್ರಕಾರ ಜಮೀನು ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ರೈತರು ಹೈಕೋರ್ಟಿನ ಮೂಲಕ ತಡೆಯಾಜ್ಞೆ ತಂದ ಪರಿಣಾಮ ಕೆಲಸ ವಿಳಂಬವಾಗಿದೆ ಎಂದು ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ವಿವರಿಸಿದರು.
ನ್ಯಾಯಾಲಯವು 2017ರ ಫೆ.17ರಂದು ಭೂಸ್ವಾಧೀನ ಕ್ರಮಬದ್ಧಗೊಳಿಸಿ, ರೈತರ ಅರ್ಜಿ ವಜಾಗೊಳಿಸಿದೆ. ಒಮ್ಮೆ ಕ್ರಮಬದ್ಧವಾಗಿ ಭೂಸ್ವಾಧಿನದ ಬಳಿಕ ಹಿಂದಿರುಗಿಸುವುದಕ್ಕೆ ಅವಕಾಶವಿಲ್ಲ. ಆದರೆ ದರ ನಿಗದಿ ಬಗ್ಗೆ ರೈತರ ಅಹವಾಲು ಸ್ವೀಕರಿಸಿ, ಸಭೆಯ ನಡಾವಳಿ ಕಳಿಸಲು ಸರ್ಕಾರದ ನಿರ್ದೇಶನವಿದೆ ಎಂದು ಅವರು ಹೇಳಿದರು.
ಜಮೀನು ನೀಡಲು ನಾವು ಸಿದ್ಧರಿಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆಗೆ ನಮ್ಮ ಭೂಮಿ ಕೊಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ನೀರಾವರಿ ಜಮೀನು ಇರುವುದರಿಂದ ಇದನ್ನು ಬಿಟ್ಟುಕೊಟ್ಟರೆ ತೀವ್ರ ತೊಂದರೆಯಾಗುತ್ತದೆ. ಸುವರ್ಣ ವಿಧಾನಸೌಧ, ರಾಷ್ಟ್ರೀಯ ಹೆದ್ದಾರಿ ಮತ್ತಿತರ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಜಮೀನು ನೀಡಿರುವುದರಿಂದ ಹಲಗಾ ಹೊರತುಪಡಿಸಿ ಬೇರೆ ಕಡೆ ಸರ್ಕಾರಿ ಭೂಮಿ ಇರುವ ಕಡೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಅಹವಾಲು ಸಲ್ಲಿಸಿದರು.
ಯಾವ ಆಧಾರದ ಮೇಲೆ ಅಲಾರವಾಡ ಬದಲು ಹಲಗಾ ಗ್ರಾಮದ ಬಳಿ ಎಸ್ ಟಿಪಿ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು, ತಾಂತ್ರಿಕ ತಂಡವು ಪರಿಶೀಲನೆ ನಡೆಸಿ ಅಲಾರವಾಡ ಬದಲು ಹಲಗಾ ಸೂಕ್ತ ಎಂದು ಸಲ್ಲಿಸಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯೋಜನೆ ಅನುಷ್ಠಾನ ಮತ್ತು ಭೂಸ್ವಾಧೀನ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಐದು ಜನರ ಸಮಿತಿ ರಚಿಸುವಂತೆ ಸಂಸದ ಪ್ರಕಾಶ್ ಹುಕ್ಕೇರಿ ಸಲಹೆ ನೀಡಿದರು.
ಶಾಸಕರಾದ ಅಭಯ ಪಾಟೀಲ, ಲಕ್ಷ್ಮೀ ಹೆಬ್ಬಾಳಕರ್, ಅನಿಲ್ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಪೊಲೀಸ್ ಆಯುಕ್ತರಾದ ಡಾ.ಡಿ.ಸಿ.ರಾಜಪ್ಪ, ಜಿಪಂ ಸಿಇಒ ರಾಮಚಂದ್ರನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ