ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜಿಲ್ಲೆಯ ಬೈಲಹೊಂಗಲ ತಾಪಂ ಆಡಳಿತಾವಧಿ ಹಂಚಿಕೆ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ತಾಪಂ ಅಧ್ಯಕ್ಷೆ ಶೈಲಾ ಬಸನಗೌಡ ಸಿದ್ರಾಮನಿ ಗುರುವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ತಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪರೋಕ್ಷವಾಗಿ ಪ್ರಯತ್ನಿಸುತ್ತಿದೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಅವರಿಗೆ ತಾಪಂ ಅಧ್ಯಕ್ಷೆ ಶೈಲಾ ಬಸನಗೌಡ ಸಿದ್ರಾಮನಿ ಅವರು ಕೌಟುಂಬಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈ ಬೆನ್ನಲ್ಲೆ ಕಾಂಗ್ರೆಸ್ ನಾಯಕರು ಪಕ್ಷೇತರರ ಬೆಂಬಲ ಪಡೆದು ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ಆರಂಭಿಸಿದ್ದಾರೆ.
ಬಿಜೆಪಿ-17, ಕಾಂಗ್ರೆಸ್-10, ಜೆಡಿಎಸ್-2 ಹಾಗೂ ಪಕ್ಷೇತರು-2 ಸೇರಿ 31 ಸದಸ್ಯರ ಸಂಖ್ಯೆ ಹೊಂದಿರುವ ಬೈಲಹೊಂಗಲ ತಾಪಂ ಅಧ್ಯಕ್ಷೆಯಾಗಿ ಶೈಲಾ ಬಸನಗೌಡ ಸಿದ್ರಾಮನಿ ಅವರು 2016ರ ಮೇ 16ರಂದು ಅಧಿಕಾರಿ ವಹಿಸಿಕೊಂಡಿದ್ದರು. ಈ ವೇಳೆ 5 ವರ್ಷದ ಅಧಿಕಾರದ ಅವಧಿಯಲ್ಲಿ 2.5 ವರ್ಷ ಕಿತ್ತೂರು ಭಾಗಕ್ಕೆ ಅಧ್ಯಕ್ಷ ಸ್ಥಾನ, ಬೈಲಹೊಂಗಲ ಭಾಗಕ್ಕೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವುದು. ಇನ್ನುಳಿದ 2.5 ವರ್ಷ ಅವಧಿಯಲ್ಲಿ ಬೈಲಹೊಂಗಲಕ್ಕೆ ಅಧ್ಯಕ್ಷ, ಕಿತ್ತೂರು ಭಾಗಕ್ಕೆ ಉಪಾಧ್ಯಕ್ಷ ಸ್ಥಾನ ನೀಡುವ ಅಧಿಕಾರದ ಹಂಚಿಕೆ ಕುರಿತು ಎರಡು ತಾಲೂಕಿನ ತಾಪಂ ಸದಸ್ಯರು ಹಾಗೂ ನಾಯಕರು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಬೈಲಹೊಂಗಲ ತಾಪಂ ಅಧ್ಯಕ್ಷೆ ಶೈಲಾ ಬಸನಗೌಡ ಸಿದ್ರಾಮನಿ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಈಗಾಗಲೇ ಬೈಲಹೊಂಗಲ ತಾಪಂ ಅಧ್ಯಕ್ಷ ಸ್ಥಾನ ಶೈಲಾ ಬಸನಗೌಡ ಸಿದ್ರಾಮನಿ ರಾಜೀನಾಮೆ ಕೊಡುವ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರು ಒಪ್ಪಿಗೆ ಸೂಚಿಸಿದ್ದರು ಎಂದು ಬಿಜೆಪಿ ಜಿಲ್ಲಾ ನಾಯಕರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ತಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದೆ. ತಾಪಂ ನ ಹೊಸ ಅಧ್ಯಕ್ಷರ ಆಯ್ಕೆ ವೇಳೆ ಕಿತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ 7 ಸದಸ್ಯರು ತಟಸ್ಥ ಉಳಿದರೆ ಅಥವಾ ಬೆಂಬಲ ನೀಡಲು ನಿರಾಕರಿಸಿ ಸಮಸ್ಯೆ ಉಂಟಾದರೆ ಮಾತ್ರ ಜೆಡಿಎಸ್, ಪಕ್ಷೇತರ ಬೆಂಬಲ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ