Latest

ಭಾಜಿ ಮಾರ್ಕೆಟ್ ಸ್ಥಳಾಂತರಕ್ಕೆ ಕೊನೆಗೂ ಕೂಡಿ ಬಂದ ಮುಹೂರ್ತ

ಮೇ ೧೪ ರಿಂದ ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ ನಡೆಯಲಿದೆ ಸಗಟು ವ್ಯವಹಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ, 
ನಗರದ ದಂಡು ಮಂಡಳಿ ಪ್ರದೇಶದಲ್ಲಿ ನಡೆಯುತ್ತಿರುವ ಹೋಲಸೇಲ್ ಭಾಜಿ ಮಾರ್ಕೆಟ್ ಸ್ಥಳಾಂತರಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಈ ತರಕಾರಿ ಮಾರುಕಟ್ಟೆಯನ್ನು ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರ ಮಾಡುವ ಕುರಿತು ಎಪಿಎಂಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ಮೇ ೧೪ ರಿಂದ ಸಿಬಿಟಿ ಬಳಿಯ ಹೋಲಸೇಲ್ ಭಾಜಿ ಮಾರ್ಕೆಟ್ ವ್ಯವಹಾರ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರವಾಗಲಿದೆ.
ದಂಡು ಮಂಡಳಿ ಪ್ರದೇಶದಲ್ಲಿನ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಬೇಕೆಂದು ಬಹುದಿನಗಳಿಂದ ರೈತಾಪಿ ಜನರ ಹಾಗೂ ಸಾರ್ವಜನಿಕರ ಬೇಡಿಕೆಯಾಗಿದೆ. ಈ ಕುರಿತಾಗಿ ಕ್ರಮ ಕೈಗೊಂಡು ಈಗಾಗಲೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಆಧುನಿಕ ಸಗಟು ತರಕಾರಿ ಮಾರುಕಟ್ಟೆಯನ್ನು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿದೆ. ಈ ಮಾರುಕಟ್ಟೆ ಸಂಕೀರ್ಣದಲ್ಲಿ ೧೩೨ ಸುಸಜ್ಜಿತ ಅಂಗಡಿಗಳನ್ನು ವಿಶಾಲವಾದ ಹರಾಜು ಕಟ್ಟೆಗಳೊಂದಿಗೆ ನಿರ್ಮಿಸಲಾಗಿದೆ. ತರಕಾರಿ ವ್ಯಾಪಾರಸ್ಥರಿಗೆ ಈ ಅಂಗಡಿಗಳನ್ನು ಹಂಚಿಕೆ ಮಾಡಲಾಗಿದೆ. ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿನ ಸಗಟು ತರಕಾರಿ ಮಾರುಕಟ್ಟೆಯಲ್ಲಿ ವಿದ್ಯುತ್, ನೀರು, ವಿಶಾಲವಾದ ರಸ್ತೆಗಳು, ಶೌಚಾಲಯ ಹಾಗೂ ಬೀದಿ ದೀಪ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಎಪಿಎಂಸಿ ತಿಳಿಸಿದೆ.
ಮುಖ್ಯ ಮಂತ್ರಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣಕ್ಕೆ ಸಗಟು ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲು ಈ ಕೂಡಲೆ ಕ್ರಮ ವಹಿಸಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಗರ ಪೋಲಿಸ ಆಯುಕ್ತರು ಹಾಗೂ ಇತರೆ ಹಿರಿಯ ಅಧಿಕಾರಿಗಳೊಡನೆ ಸಗಟು ತರಕಾರಿ ವ್ಯಾಪಾರಸ್ಥರ ಸಭೆಯನ್ನು ನಡೆಸಲಾಗಿದೆ. ಮೇ ೧೪ರ ಮಂಗಳವಾರದಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಳಗಾವಿಯಲ್ಲಿ ಸಗಟು ತರಕಾರಿ ಮಾರುಕಟ್ಟೆಯನ್ನು ಆರಂಭಗೊಳಿಸಲಾಗುತ್ತಿದೆ. ಕರ್ನಾಟಕ ಕೃಷಿ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ದಿ) ಅಧಿನಿಯಮ, ೧೯೬೬ ರ ರನ್ವಯ ಈ ಮುಂದೆ ನಗರದ ಇತರೆ ಯಾವುದೇ ಪ್ರದೇಶದಲ್ಲಿ ಸಗಟು ತರಕಾರಿ ವ್ಯಾಪಾರ ವ್ಯವಹಾರವನ್ನು ಕೈಗೊಳ್ಳುವುದು ಕಾನೂನಿನನ್ವಯ ಅಪರಾಧವಾಗುತ್ತದೆ. 
ಆದ್ದರಿಂದ ಎಲ್ಲಾ ರೈತಾಪಿ ಜನರು ಮೇ ೧೪ರ ಮಂಗಳವಾರದಿಂದ ಎಲ್ಲಾ ತರಕಾರಿ ಉತ್ಪನ್ನಗಳನ್ನು ಕಡ್ಡಾಯವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಮಾರಾಟಕ್ಕಾಗಿ ತರಬೇಕಾಗುತ್ತದೆ. ಹಾಗೆಯೇ ಎಲ್ಲ ಸಾಗಾಣಿಕೆದಾರರು ಸಹ ತರಕಾರಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸಾಗಿಸಬೇಕೆಂದು ಎಪಿಎಂಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button