Latest

ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವೇ?

ಮುಳುಗುತ್ತಿರುವ ಹಡಗಿಗೆ ಕಲ್ಲೆಸೆದ ಅಪವಾದ ಬೇಕೇ?

-ಸುನೀಲ ಎಸ್. ಸಾಣಿಕೊಪ

ಪ್ರತಿಯೊಂದು ಉಗ್ರಗಾಮಿ ದಾಳಿಯ ನಂತರ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಮನಸ್ಸಿನಲ್ಲಿ ಮೂಡುವ ಆಕ್ರೋಶದ ತೀರ್ಮಾನವೆಂದರೆ ಇನ್ನು ಸಾಧ್ಯವಿಲ್ಲ, ಯುದ್ಧವೊಂದೇ ಪರಿಹಾರ ಎಂಬುದು. ಪ್ರತಿನಿತ್ಯ ನಮ್ಮ ಸೈನಿಕರು ದೇಶಕ್ಕಾಗಿ ಹುತಾತ್ಮರಾಗುವುದನ್ನು ನೋಡುತ್ತಾ ಸುಮ್ಮನೇ ಕೂತುಕೊಳ್ಳಲು ಯಾವ ಭಾರತೀಯನೂ ಒಪ್ಪುವುದಿಲ್ಲ. ಆದರೆ ಇಡೀ ದೇಶದ ಜನತೆ ಮತ್ತು ಮಾಧ್ಯಮಗಳು ಒಕ್ಕೊರಲಿನಿಂದ ಕೂಗಿದರೂ ಸರ್ಕಾರ ಅಥವಾ ಸೈನ್ಯ ಆ ತೀರ್ಮಾನಕ್ಕೆ ತಕ್ಷಣಕ್ಕೆ ಬರುವುದಿಲ್ಲ. ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವೇ? ಅಥವಾ ಇಲ್ಲವೇ?
ಯುದ್ಧ ಅನಿವಾರ್ಯವೆಂಬ ತೀರ್ಮಾಣಕ್ಕೆ ಬರುವ ಮೊದಲು ಹಲವಾರು ಅಂಶಗಳನ್ನು ನಾವು ಗಮನಿಸಬೇಕಾಗುತ್ತದೆ. ಪ್ರಾಚೀನ ಕಾಲದಲ್ಲಿ ಎರಡು ರಾಜ್ಯಗಳ ನಡುವೆ ಆಗುತ್ತಿದ್ದ ಯುದ್ಧಗಳಲ್ಲಿ ಬಿಲ್ಲು-ಬಾಣ, ಕತ್ತಿ, ಭರ್ಚಿ ಮುಂತಾದ ಕೆಲವೊಂದು ಆಯುಧಗಳ ಬಳಕೆಯಿಂದ ಹಲವಾರು ಸೈನಿಕರು ಸಾಯುತ್ತಿದ್ದರು, ಕೊನೆಗೆ ಒಂದು ರಾಜ್ಯದ ರಾಜ ಸೋತ ಅಥವಾ ಸತ್ತ ನಂತರ ಗೆದ್ದ ರಾಜ್ಯದ ರಾಜನ ಆಡಳಿತ ಅಲ್ಲಿ ಬರುತ್ತಿತ್ತು. ಸೋತ ರಾಜ್ಯದ ಜನತೆಗೆ ಯುದ್ಧದ ನೇರ ಪರಿಣಾಮ ಹೆಚ್ಚಿಗೆ ಆಗುತ್ತಿರಲಿಲ್ಲ. ಆದರೆ ಗೆದ್ದ ರಾಜ ಅಥವಾ ಅವನ ಸೈನಿಕರು ಕ್ರೂರಿಯಾಗಿದ್ದರೆ, ಸೋತ ರಾಜ್ಯದ, ಜನರ ಸಂಪತ್ತು ಲೂಟಿ, ಹತ್ಯೆ, ಅತ್ಯಾಚಾರ ಇತ್ಯಾದಿಗಳು ನಡೆಯುತ್ತಿದ್ದವು. ಅವರು ಒಳ್ಳೆಯವರಾಗಿದ್ದರೆ, ಸೋತ ರಾಜ್ಯವನ್ನು ತಮ್ಮ ರಾಜ್ಯದ ಭಾಗವಾಗಿ ಪರಿಗಣಿಸಿ, ಅಲ್ಲಿಯ ಜನರನ್ನು ತಮ್ಮ ಪ್ರಜೆಗಳಂತೆ ನೋಡಿಕೊಳ್ಳುತ್ತಿದ್ದರು. ಇದು ಜಗತ್ತು ಆಧುನಿಕತೆಯ ಹಂತ ತಲುಪುವ ಮುಂಚಿನ ಕಥೆ.
ಕೈಗಾರಿಕಾ ಕ್ರಾಂತಿಯ ನಂತರ ಐರೋಪ್ಯ ರಾಷ್ಟ್ರಗಳು ತಮ್ಮ ಶಸ್ತ್ರಾಸ್ತಗಳನ್ನು ಆಧುನಿಕಗೊಳಿಸಿಕೊಂಡವು. ಹಳೆಯ ಆಯುಧಗಳ ಬದಲಿಗೆ ಬಂದೂಕು, ಮದ್ದುಗುಂಡು ಇತ್ಯಾದಿಗಳು ಸ್ಥಾನ ಪಡೆದವು. ನೆಹರೂ ಅವರ ’ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿ ಗುಪ್ತ-ಮೌರ್ಯರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಭಾರತ ದೇಶ ಅವನತಿ ಹಾದಿ ಹಿಡಿಯಲು ಏನು ಕಾರಣ ಎಂಬುದನ್ನು ವಿವರಿಸಲಾಗಿದೆ. ವಿಶ್ವದ ಕೇಂದ್ರವಾಗಿದ್ದ ಭಾರತದ ಜನತೆ ತಮ್ಮ ಜ್ಞಾನ, ಪರಿಣಿತಿಯ ಬಗ್ಗೆ ಅತಿಯಾದ ಅಭಿಮಾನ ಹೊಂದಿದ್ದರು. ಜಗತ್ತು ಏನಾದರೂ ಕಲಿಯುವುದಿದ್ದರೆ ಭಾರತಕ್ಕೆ ಬರಬೇಕು, ಭಾರತೀಯರು ಅನ್ಯರಿಂದ ಕಲಿಯುವುದು ಏನೂ ಇಲ್ಲ ಎಂಬ ತೀರ್ಮಾಣಕ್ಕೆ ಬಂದುಬಿಟ್ಟಿದ್ದರು. ಹೀಗಾಗಿ ಯುರೋಪಿನಲ್ಲಿಯ ಬೆಳವಣಿಗೆಗಳನ್ನು ಭಾರತೀಯರು ಗಮನಿಸಲೇ ಇಲ್ಲ. ವ್ಯಾಪಾರಕ್ಕೆ ಬಂದ ಆಂಗ್ಲರು ತಮ್ಮ ಆಧುನಿಕ ಶಸ್ತ್ರಾಸ್ತ್ರ ಮತ್ತು ತಂತ್ರಗಾರಿಕೆಯಿಂದ ಸುಲಭವಾಗಿ ಭಾರತವನ್ನು ತಮ್ಮ ಕೈವಶ ಮಾಡಿಕೊಂಡರು. ಕೊನೆಗೆ ಇಲ್ಲಿಂದ ಹೋಗುವಾಗ ತಮ್ಮ ಭಾಷೆ, ಸಂಸ್ಕೃತಿಯ ಬೀಜ ಬಿತ್ತಿದ್ದು ಸಾಲದು ಎಂಬಂತೆ ದೇಶವನ್ನು ಎರಡು ತುಂಡು ಮಾಡಿ ಭಾರತ ಎಂದೂ ಮೇಲೇಳದಂತೆ ಮಾಡಿ ಹೋದರು. ನಂತರ ಆದ ಬೆಳವಣಿಗೆಯಲ್ಲಿ ಸಂವಿಧಾನದ ಪರಿಚ್ಛೇದ ೩೭೦ರಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸ್ವಾಯುತ್ತತೆ ದೊರೆತದ್ದು ಇನ್ನೊಂದು ದುರಂತ.
ಇನ್ನೊಂದೆಡೆ ಎರಡು ಜಾಗತಿಕ ಮಹಾಯುದ್ಧಗಳಾದರೂ, ಶಾಂತಿಪ್ರೀಯ ರಾಷ್ಟ್ರವಾದ ಭಾರತವು ತಟಸ್ಥ ನೀತಿಯನ್ನು ಅನುಸರಿಸಿ, ಯುದ್ಧದಿಂದ ದೂರ ಉಳಿಯಿತು. ಆದಾಗಲೇ ಪರಮಾಣು ಬಾಂಬುಗಳು ಸಿಡಿದು, ಜಪಾನಿನ ಹೀರೋಶೀಮಾ ನಾಗಾಸಾಕಿ ನಗರಗಳು ಹಿಂದೆಂದೂ ಕಾಣದ ವಿನಾಶವನ್ನು ಕಂಡಿತು. ವಿಕಿರಣದ ಪರಿಣಾಮದಿಂದ ೭೦ ವರ್ಷಗಳಾದರೂ ಚೇತರಿಸಿಕೊಳ್ಳಲು ಆಗಿಲ್ಲ. ತದನಂತರ ನಿರಂತರವಾಗಿ ಹಲವಾರು ಹೋರಾಟ, ದಾಳಿ, ಸಂಘರ್ಷಗಳು, ಸಣ್ಣ ಪ್ರಮಾಣದ ಯುದ್ಧಗಳು ನಡೆದಿದ್ದರೂ, ಪರಮಾಣು ಬಾಂಬು ಸಿಡಿಸುವ ಮಟ್ಟಕ್ಕೆ ಹೋಗಿಲ್ಲ. ಜಾಗತಿಕ ಯುದ್ಧಗಳು ಆಗಿಲ್ಲ. ಅಂಥ ಸನ್ನಿವೇಶ ನಿರ್ಮಾಣವಾದರೂ, ಎಷ್ಟೇ ರಣೋತ್ಸಾಹ ಇದ್ದರೂ, ಯುದ್ಧವೆಂಬ ದುಸ್ಸಾಹಸಕ್ಕೆ ಕೈ ಹಾಕಲು ಯಾವ ರಾಷ್ಟ್ರವೂ ತಯಾರಿಲ್ಲ. ಅದರ ನಂತರದ ಪರಿಣಾಮಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯ ಯಾವ ದೇಶಕ್ಕೂ ಇಲ್ಲ.
ಇದಕ್ಕೆ ಕಾರಣ ಇಷ್ಟೇ. ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳು ಅತ್ಯಾಧುನಿಕ, ವೈಜ್ಞಾನಿಕ ಮತ್ತು ಸಂಕೀರ್ಣವಾದ ಅಸ್ತ್ರ, ಸೈನ್ಯ, ಯುದ್ಧ ಸಾಮಗ್ರಿ, ತಂತ್ರಗಾರಿಕೆಗಳನ್ನು ಹೊಂದಿವೆ. ಪ್ರತಿಯೊಂದು ರಾಷ್ಟ್ರವೂ ತನ್ನ ಹಣಕಾಸು, ವ್ಯಾಪಾರ, ವಹಿವಾಟುಗಳಿಗಾಗಿ ಹಲವಾರು ದೇಶಗಳೊಂದಿಗೆ ಸ್ನೇಹ-ಸಂಬಂಧಗಳನ್ನು ಹೊಂದಿವೆ. ಇದಕ್ಕೆ ಪೂರಕವಾಗಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ಇತ್ಯಾದಿಗಳು ಇವೆ. ದೇಶ-ದೇಶಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಂಯುಕ್ತ ಸಂಸ್ಥಾನಗಳು, ಅಂತರರಾಷ್ಟ್ರೀಯ ನ್ಯಾಯಾಲಯಗಳು ಇವೆ. ಪರಮಾಣು ಬಳಕೆ ಕೇವಲ ಬಾಂಬ ತಯಾರಿಸಲು ಮಾತ್ರವನ್ನು ದೇಶಕ್ಕೆ ಆವಶ್ಯಕವಿರುವ ವಿದ್ಯುತ್ ಇತ್ಯಾದಿ ಶಕ್ತಿಸಾಧನವಾಗಿ ಬಳಸುತ್ತಾರೆ. ಅದನ್ನು ಬಳಸಲು, ನಿಯಂತ್ರಿಸಲು ಹಲವಾರು ಅಂತರರಾಷ್ಟ್ರೀಯ ಒಪ್ಪಂದಗಳು, ಕಟ್ಟಳೆಗಳು, ನಿರ್ಬಂಧಗಳು ಇವೆ.
ಅಂಕಿಅಂಶಗಳಿಗೆ ಬಂದರೆ, ಪಾಕಿಸ್ತಾನದೊಂದಿಗೆ ೩೩೨೩ ಕಿ.ಮೀ. ಗಡಿಯನ್ನು ಹಂಚಿಕೊಂಡಿರುವ ಭಾರತವು ೧೨ ಲಕ್ಷ ಸೈನ್ಯಬಲ, ೧.೨ ಲಕ್ಷ ವಾಯುದಳ, ೬೭ ಸಾವಿರ ನೌಕಾಪಡೆ ಹೊಂದಿದೆ. ಪಾಕಿಸ್ತಾನ ೫.೬ ಲಕ್ಷ ಸೈನ್ಯಬಲ, ೭೦ ಸಾವಿರ ವಾಯುದಳ, ೨೬ ಸಾವಿರ ನೌಕಾಪಡೆ ಹೊಂದಿದೆ. ಭಾರತ ತನ್ನ ಜಿಡಿಪಿಯ ಶೇ.೨.೧ ಹಣವನ್ನು ರಕ್ಷಣೆಗೆ ಬಳಸಿದರೆ, ಪಾಕಿಸ್ತಾನ ಶೇ.೩.೫ ಹಣವನ್ನು ರಕ್ಷಣೆಗೆ ವ್ಯಯಿಸುತ್ತಿದೆ. ಭಾರತ ೧೩೦-೧೪೦ ಪರಮಾಣು ಅಸ್ತ್ರ ಹೊಂದಿದ್ದರೆ, ಪಾಕಿಸ್ತಾನ ೧೪೦-೧೫೦ ಪರಮಾಣು ಅಸ್ತ್ರ ಹೊಂದಿದೆ. ಭಾರತದ ೭.೧ ಜಿಡಿಪಿಯನ್ನು [೨ಲಕ್ಷ ಕೋಟಿ ರೂಪಾಯಿ] ಅಂದರೆ ಜಗತ್ತಿನ ಶೇ.೨.೭ ಹೊಂದಿ ೬ನೇ ಸ್ಥಾನ ಹೊಂದಿದೆ. ಪಾಕಿಸ್ತಾನ ೫.೪ ಜಿಡಿಪಿಯನ್ನು [೨೭ ಸಾವಿರ ಕೋಟಿ ರೂಪಾಯಿ] ಜಗತ್ತಿನ ಶೇ.೦.೪೪ ಹೊಂದಿ ೧೫೫ನೇ ಸ್ಥಾನದಲ್ಲಿದೆ.
ಭಾರತವು ಐಎಮ್‌ಎಫ್, ಜಿ-೮, ಜಿ-೫, ಐಬಿಎಸ್‌ಎ, ಎಐಐ ಬ್ಯಾಂಕ್, ಸಾರ್ಕ, ಬಿಮ್ಸ್‌ಟೆಕ್ ಮುಂತಾದ ಸಂಸ್ಥೆಗಳ ಪಾಲುದಾರ/ಸದಸ್ಯನಾಗಿದೆ. ಅಲ್ಲದೇ ಯುನೈಟೆಡ್ ನೇಶನ್‌ನ ಹಲವಾರು ಶಾಂತಿಸ್ಥಾಪನೆ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ್ದು, ಯುಎನ್‌ಓದ ಶಾಶ್ವತ ಸದಸ್ಯತ್ವಕ್ಕೆ ಹಕ್ಕೊತ್ತಾಯ ಮಾಡುತ್ತಿದೆ.
ಇವೆಲ್ಲವುಗಳನ್ನು ಗಮನಿಸಿದರೆ, ಭಾರತವು ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು, ಪಾಕಿಸ್ತಾನವು ತನ್ನೆಲ್ಲ ಆರ್ಥಿಕ ಶಕ್ತಿಯನ್ನು ರಕ್ಷಣೆಗೆ, ಸೈನ್ಯಕ್ಕೆ ಬಳಸಿ ದಿವಾಳಿ ಅಂಚಿನಲ್ಲಿದೆ. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ತನ್ನ ಬಳಿಯಿದ್ದ ಬೆಳೆಬಾಳುವ ಕಾರುಗಳನ್ನು ಮಾರಿದ್ದಲ್ಲದೇ, ದೇಶದ ಸಾಲವನ್ನು ನಿಭಾಯಿಸಲಾಗದೇ ಕತ್ತೆಗಳನ್ನು, ಕೋಳಿಗಳನ್ನು ಮಾರಾಟ ಮಾಡಿರುವುದು ಸುದ್ದಿಯಾಗಿದೆ. ಇವೆಲ್ಲ ಕಾರಣಗಳಿಂದ ಪಾಕಿಸ್ತಾನ ಇಂದು ಮುಳುಗುತ್ತಿರುವ ಹಡಗು ಆಗಿದೆ. ಅದನ್ನು ಮುಳಗಿಸಲು ಯುದ್ಧವೆಂಬ ಮಹಾಅಸ್ತ್ರ ಬಳಸುವ ಅವಶ್ಯಕತೆಯಾಗಲೀ ಅನಿವಾರ್ಯತೆಯಾಗಲೀ ಭಾರತಕ್ಕೆ ಇಲ್ಲ. ಎರಡು ಜಾಗತಿಕ ಮಹಾಯುದ್ಧಗಳಾದರೂ ತನ್ನ ತಟಸ್ಥ ನೀತಿಯಿಂದ ಶಾಂತಿಪ್ರೀಯ ದೇಶವೆಂಬ ಹೆಗ್ಗಳಿಕೆ ಹೊಂದಿರುವ ಭಾರತ, ಕಳಪೆ ದೇಶದೊಂದಿಗೆ ಯುದ್ಧಕ್ಕೆ ಸಾರಿದರೆ ಭಾರತದ ಗೌರವಕ್ಕೆ ಕುಂದುಂಟಾಗುವುದಲ್ಲದೇ, ವಿನಾಃಕಾರಣ ಆರ್ಥಿಕ ಮತ್ತಿತರ ದಿಗ್ಬಂಧನಗಳನ್ನು ಎದುರಿಸಬೇಕಾಗುತ್ತದೆ. ರಣೋತ್ಸಾಹದಲ್ಲಿರುವ ಹಲವಾರು ದೇಶಗಳು ಕೈಜೋಡಿಸಿದರೆ, ಎರಡು ದೇಶಗಳ ನಡುವಿನ ಸಮರ ಆ ಎರಡು ದೇಶಗಳಿಗೆ ಸೀಮಿತವಾಗದೇ ಎರಡು ವಿಶ್ವಗಳ ನಡುವಿನ ಯುದ್ಧವಾಗುತ್ತದೆ. ಆಗ ಮಾನವಪ್ರೇರಿತ ವಿಶ್ವವಿನಾಶ ಖಂಡಿತ.
ಹೀಗಾಗಿ ಕೇಂದ್ರ ಸರ್ಕಾರವು ಅತ್ಯಂತ ತಾಳ್ಮೆಯಿಂದ, ಜಾನ್ಮೆಯಿಂದ ವರ್ತಿಸುತ್ತಿದೆ. ಪಾಕ್‌ಪ್ರೇರಿತ ಭಯೋತ್ಪಾದನೆಗೆ ಸಾಕ್ಷಾಧಾರಗಳನ್ನು ಕ್ರೋಢೀಕರಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಯೋಗ್ಯತೆಯನ್ನು ಪ್ರದರ್ಶಿಸಿ, ಎಲ್ಲರ ಸಹಾನುಭೂತಿಯನ್ನು ಹೊಂದುವುದು, ಆ ಮೂಲಕ ಪಾಕಿಸ್ತಾನದ ಮೇಲೆ ಭಯೋತ್ಪಾದನೆಯನ್ನು ನಿಯಂತ್ರಿಸಲು ವಿಶ್ವದ ಒತ್ತಡ ಹೇರುವುದು, ಅದಕ್ಕಾಗಿ ಆರ್ಥಿಕ ದಿಗ್ಭಂದನಗಳನ್ನು ಹೇರುವುದು, ವ್ಯವಹಾರಗಳನ್ನು ಕಡಿದುಕೊಳ್ಳುವುದು, ಅದಕ್ಕೆ ಒದಗಿಸುತ್ತಿರುವ ಸಹಾಯ, ಸಹಕಾರಗಳನ್ನು ನಿಲ್ಲಿಸುವುದು, ಒಟ್ಟಿನಲ್ಲಿ ವಿಶ್ವ ಭೂಪಟದಲ್ಲಿ ಅದನ್ನು ಒಂಟಿಯನ್ನಾಗಿಸುವುದು ಇದೇ ಇಂದು ಭಾರತ ಮಾಡುತ್ತಿದೆ. ಅದೇ ಪಾಕಿಸ್ತಾನವನ್ನು ಮತ್ತು ಅದರ ಭಯೋತ್ಪಾನತೆಯನ್ನು ನಾಶ ಮಾಡುವ ಸೂಕ್ತವಾದ ಕ್ರಮ. ಅದಕ್ಕೆ ಹಲವಾರು ವರ್ಷಗಳು ಬೇಕಾಗಬಹುದು. ಆದರೆ ಅಲ್ಲಿಯವರೆಗೆ ತಾಳ್ಮೆಯಿಂದ ಕಾದು ನೋಡುವ ವ್ಯವಧಾನ ನಮ್ಮದಾಗಬೇಕು. ಏಕೆಂದರೆ ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ಮತ್ತು ತಾಳಿದವನು ಬಾಳಿಯಾನು.

 

Home add -Advt

Related Articles

Back to top button