Latest

ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ್ದು -ಕಂಬಾರ

  ಪ್ರಗತಿವಾಹಿನಿ ಸುದ್ದಿ, ಧಾರವಾಡ
ಸರ್ಕಾರವಾಗಲಿ, ಶಿಕ್ಷಣ ಮತ್ತು ಸಂಸ್ಕೃತಿ ಸಂಸ್ಥೆಗಳಾಗಲಿ, ವ್ಯಾಪಾರ, ವಾಣಿಜ್ಯ ವ್ಯವಹಾರಗಳಲ್ಲೂ ಕೂಡ ಕನ್ನಡ ಭಾಷೆಗೆ ಮೊದಲ ಆದ್ಯತೆ ಕೊಡಬೇಕು. ಒಂದು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ್ದು.  ತನ್ನ ರಾಜ್ಯದ ಪ್ರಜೆಗಳಿಗೆ ಎಂತಹ ಶಿಕ್ಷಣ ಕೊಡಬೇಕೆಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರ ಸರ್ಕಾರದ್ದು. ಕನ್ನಡವೇ ನಮ್ಮೆಲ್ಲ ದೈನಿಕ ವ್ಯವಹಾರಕ್ಕೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ಬೇಕಾದದ್ದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹೇಳಿದ್ದಾರೆ.
ಸಾಂಸ್ಕೃತಿಕ ನಗರ ಧಾರವಾಡದಲ್ಲಿ ಶುಕ್ರವಾರ ಆರಂಭವಾದ  84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ, ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಕನ್ನಡ ಭಾಷಿಕರು ಮತ್ತು ಅವರ ಸಂಸ್ಕೃತಿ ಕಾವೇರಿ, ಗೋದಾವರಿಗಳ ಸೀಮೆ ದಾಟಿ ಇಡೀ ಭಾರತವನ್ನು ವ್ಯಾಪಿಸಿ ಕಡಲುಗಳಾಚೆಯೂ ಹರಡಿ ಕನ್ನಡವನ್ನು ವಿಶ್ವಭಾಷೆ, ವಿಶ್ವ ಸಂಸ್ಕೃತಿಗಳಾಗಿಸುತ್ತಿವೆ. ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ, ಜೀವನ, ಪರಂಪರೆ ಮತ್ತು ಸಂಸ್ಕೃತಿ ಎಂದು ಪ್ರತಿಪಾದಿಸಿದರು. 
1 ರಿಂದ 7ನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು  ರಾಷ್ಟ್ರೀಕರಣ ಮಾಡಬೇಕು. ಸರ್ಕಾರಿ ಶಾಲೆಗಳ ಸುಧಾರೀಕರಣ ನಡೆಯಬೇಕು.  8ನೇ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು. ಇದಾಗದಿದ್ದಲ್ಲಿ ರಾಜ್ಯ ಭಾಷೆಗಳಿಗೆ  ಖಂಡಿತಾ ಭವಿಷ್ಯವಿಲ್ಲ ಎಂದರು.
ಪ್ರತಿವರ್ಷ ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ, ಇಂಗ್ಲಿಷ್ ಮಾಧ್ಯಮದ  ಸ್ಕೂಲುಗಳು ಹಳ್ಳಿಹಳ್ಳಿಗಳಲ್ಲಿ ಆರಂಭವಾದವು. ಈ  ಸ್ಕೂಲುಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳೇ ಇದ್ದಾರೆ. ಈ ಎಲ್ಲಾ ಸಂಸ್ಥೆಗಳಲ್ಲಿ ಶಿಕ್ಷಣದ ವ್ಯಾಪಾರಿಕರಣವಾಗಿ ಶಿಕ್ಷಣವೊಂದು ವ್ಯಾಪಾರವಾಗಿ ಪರಿವರ್ತನೆ ಹೊಂದಿದೆ. ನ್ಯಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಸೌಕರ್ಯಗಳು ಹೆಚ್ಚಿ ಮಕ್ಕಳಿಗೆ ಬೆಂಚ್‍ಗಳು, ಕಂಪ್ಯೂಟರ್ ಗಳು ಬರಬೇಕಿತ್ತು. ಹೆಣ್ಣುಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯಗಳಿರಬೇಕಿತ್ತು. ಆದರೆ ಅಲ್ಲಿಯ ಮಕ್ಕಳನ್ನು ನೋಡಿದರೆ ನಿರ್ಗತಿಕರ ಮಕ್ಕಳಂತೆ ಕಾಣುತ್ತಾರೆ ಎಂದು ವಿಷಾದಿಸಿದರು.
ಕಳೆದ 4 ವರ್ಷಗಳ ಅವಧಿಯಲ್ಲಿ ಸುಮಾರು 13 ಲಕ್ಷ ಮಕ್ಕಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಡಿಮೆ ಆಗಿ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಸುಮಾರು 15 ಲಕ್ಷ ಮಕ್ಕಳು ಹೆಚ್ಚಾಗಿದ್ದಾರೆ. 2018-19ರ ಅವಧಿಯಲ್ಲಂತೂ ಸುಮಾರು 3.5 ಲಕ್ಷ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಯಾದ ಭಯಾನಕ ಸುದ್ದಿ ನಿಜವಾಗಿ ಈಗಿಂದೀಗ ಇಂಗ್ಲಿಷ್‍ನಿಂದ ರಾಜ್ಯ ಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ, ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಅಧಿಕೃತವಾಗಿ ಆಂಗ್ಲ ಮಾಧ್ಯಮವಾಗಿ ಪರಿವರ್ತನೆ ಹೊಂದಿವೆ. ಇದ್ಯಾವುದೂ ತನ್ನ ಗಮನಕ್ಕೆ ಬಂದಿಲ್ಲವೆಂಬಂತೆ ಸರ್ಕಾರ ಜಾಣ ಮರೆವನ್ನು ಅಭಿನಯಿಸುತ್ತಿದೆ. ಕೊನೆಗೆ ತಪ್ಪಿತಸ್ಥರನ್ನು ಶಿಕ್ಷಿಸಲು ಕಿಂಚಿತ್ತೂ ಅಧಿಕಾರವಿಲ್ಲದ ಒಂದು ಸಂಸ್ಥೆಯನ್ನು ಸ್ಥಾಪಿಸಿ ಪಾರಾಗುತ್ತಿದೆ. ಹೀಗಾದಾಗ ಕನ್ನಡದ ಬಗ್ಗೆ ಯಾವುದಾದರೂ ಆಸೆ ಉಳಿಯುವುದು ಸಾಧ್ಯವೆ ಎಂದು ಕಂಬಾರ ಪ್ರಶ್ನಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮೇಳನ ಉದ್ಘಾಟಿಸಿದರು. ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ ಬಸವರಾಜ ಹೊರಟ್ಟಿ, ಸಚಿವ ಆರ್.ವಿ.ದೇಶಪಾಂಡೆ, ಸಂಸದ ಪ್ರಹಲ್ಲಾದ ಜೋಶಿ, ಮನುಬಳಿಗಾರ ಮೊದಲಾವರು ಇದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button