ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜ.8 ಮತ್ತು 9 ರಂದು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಾರ್ಮಿಕ ಸಂಘಟನೆ ಮತ್ತು ಸಾರಿಗೆ ಒಕ್ಕೂಟ ಬಂದ್ ಕರೆ ನೀಡಿರುವುದರಿಂದ ಶಾಲಾ ಮಕ್ಕಳ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ 2 ದಿನ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ ತಿಳಿಸಿದ್ದಾರೆ.
ಬಂದ್ ಕರೆಗೆ ಸಾರಿಗೆ ಒಕ್ಕೂಟ ಬೆಂಬಲ ನೀಡಿದೆ. ಕೆಲವು ಆಟೋ ರಿಕ್ಷಾ ಸಂಘಟನೆಗಳು ಬಂದ್ ಬೆಂಬಲಿಸಲು ಈಗಾಗಲೆ ನಿರ್ಧರಿಸಿವೆ. ಇತರ ಖಾಸಗಿ ವಾಹನಗಳ ನಿರ್ಧಾರ ಇನ್ನೂ ಅಸ್ಪಷ್ಟವಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಶಾಲೆಗಳಿಗೆ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟ ತಿಳಿಸಿದೆ.
ಸರಕಾರಿ ಶಾಲೆಗಳಿಗೆ ಆಯಾ ಜಿಲ್ಲೆಯ ಪರಿಸ್ಥಿತಿ ನೋಡಿ ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವ ಸಾಧ್ಯತೆ ಇದೆ. ಕೇಂದ್ರ ಸರಕಾರದ ವಿರುದ್ಧ ಈ ಬಂದ್ ಆಗಿರುವುದರಿಂದ ಕರ್ನಾಟಕದಲ್ಲಿ ಬಹುತೇಕ ಸರಕಾರಿ ಪ್ರಾಯೋಜಿತ ಬಂದ್ ಆಗುವ ಸಾಧ್ಯತೆ ಇದೆ. ಹಾಗಾಗಿ ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಬಂದ್ ಆಗಬಹುದು. ಸೋಮವಾರ ಸಂಜೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ