
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಮೈತ್ರಿಗೆ ಯೋಗ್ಯವಾದ ಪಕ್ಷವಲ್ಲ. ರಾಜ್ಯದಲ್ಲಿ ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಿದ, ರಾಜಸ್ಥಾನದಲ್ಲಿ ಬೆಂಬಲ ನೀಡಿದ್ದ ಬಿಎಸ್ ಪಿ ಶಾಸಕರನ್ನೇ ಸೆಳೆದ, ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ದಿನವೂ ಅಲುಗಾಡಿಸುತ್ತಿರುವ ಅದರ ವರ್ತನೆ ಮೈತ್ರಿಗೆ ತಾನು ಯೋಗ್ಯವಲ್ಲ ಎಂಬುದರ ಸಂದೇಶ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, ಜೆಡಿಎಸ್ ಜೊತೆ ಮೈತ್ರಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದನ್ನು ಗಮನಿಸಿದ್ದೇನೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವವನ್ನು ಜೆಡಿಎಸ್ ನಿಂದ ಮುಂದಿಟ್ಟಿರುವುದಾದರೂ ಯಾರು? 2018ರ ಫಲಿತಾಂಶದ ಬಳಿಕ ದೇವೇಗೌಡರ ಮನೆ ಬಾಗಿಲಿಗೆ ಕಾಂಗ್ರೆಸ್ ಬಂದಂತೆ ನಾವ್ಯಾರೂ ಕಾಂಗ್ರೆಸ್ ಬಾಗಿಲಿಗೆ ಹೋಗಿಲ್ಲ ಎಂದಿದ್ದಾರೆ.
ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ. ಮೈತ್ರಿ ವಿಷಯವಾಗಿ ಕಾಂಗ್ರೆಸ್ ಎದುರು ಜೆಡಿಎಸ್ ಅವಕಾಶವನ್ನು ಯಾರೂ ಮುಂದಿಡುವುದೂ ಬೇಡ. ರಾಜ್ಯದಲ್ಲಿ ಮೈತ್ರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಎಂಬ ಭಾವನೆಯೂ ಬೇಡ. ಹಾಗೇ, ಜೆಡಿಎಸ್ ಹಾಗೂ ದೇವೇಗೌಡರ ಹೆಸರು ಬಳಸಿ ಆ ಪಕ್ಷದ ನಾಯಕರು ಲಾಭ ಮಾಡಿಕೊಳ್ಳುವುದೂ ಬೇಡ ಎಂದು ಹೇಳಿದ್ದಾರೆ.
ಶಿರಾ ಆಪರೇಷನ್ ಕಮಲವನ್ನು ಮೆಟ್ಟಿ ಉಳಿಸಿಕೊಂಡ ಕ್ಷೇತ್ರ. ಸತ್ಯಣ್ಣ ಇಲ್ಲಿ ಗೆದ್ದಿದ್ದರು. ಬಿಜೆಪಿಯವರ ಆಮಿಷಕ್ಕೆ ಆಕರ್ಷಿತರಾಗದೇ ಕ್ಷೇತ್ರವನ್ನು ಜೆಡಿಎಸ್ ಗೇ ಉಳಿಸಿಕೊಟ್ಟಿದ್ದರು. ಸತ್ಯಣ್ಣ ಇದ್ದಿದ್ದರೆ ಈ ಕ್ಷೇತ್ರ ನಮ್ಮಲ್ಲೇ ಇರುತ್ತಿತ್ತು. ನ್ಯಾಯಬದ್ಧವಾಗಿ ಶಿರಾ ನಾವೇ ಗೆಲ್ಲಬೇಕಾದ ಕ್ಷೇತ್ರ. ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಶೀಘ್ರವೇ ಅಭ್ಯರ್ಥಿಗಳನ್ನು ಘೋಷಿಸಲಾಗುವುದು. ಶಿರಾ ನಮ್ಮದೇ ಕ್ಷೇತ್ರ. ರಾಜರಾಜೇಶ್ವರಿ ನಗರವೂ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರ ಹಾಗಾಗಿ ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.