*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನವದೆಹಲಿಯಲ್ಲಿರುವ ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಸುರೇಶ ಅಂಗಡಿ ಸರಣಿ ಟ್ವೀಟ್ ಮಾಡಿದ್ದು, ಬೆಳಗಾವಿ ಅಭಿವೃದ್ಧಿ ಕುರಿತು ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಗಮಿಸುವಂತೆ ಮನವಿ ಮಾಡಿರುವುದಾಗಿ ಸಂಸದರು ತಿಳಿಸಿದ್ದಾರೆ. ಆಹ್ವಾನಕ್ಕೆ ನಾಯ್ಡು ಒಪ್ಪಿಗೆ ಸೂಚಿಸಿದ್ದು, ವಿಟಿಯು ಕುಲಪತಿಗಳು ದಿನಾಂಕ ನಿಗದಿಮಾಡಿ ಆಹ್ವಾನಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಧಾರವಾಡ ಸಂಸದ ಪ್ರಹಲ್ಲಾದ ಜೋಶಿ ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವಂದ್ರ ಸಹ ಜೊತೆಗಿದ್ದರು.
ನೂತನ ಸಂಸದ ಬಿ.ವೈ.ರಾಘವೇಂದ್ರ ಜೊತೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿ ಮಾಡಿದ್ದಾಗಿ ಸಂಸದರು ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ಇದೇ 25ರಂದು ರೈಲ್ವೆ ಮೇಲ್ಸೆತುವೆ ಉದ್ಘಾಟನೆಗೆ ಬರುವಂತೆ ಆಹ್ವಾನಿಸಿದ್ದಾಗಿಯೂ, ರೈಲ್ವೆ ಯೋಜನೆಗಳಿಗೆ ಬೆಳಗಾವಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾಗಿಯೂ ಅಂಗಡಿ ತಿಳಿಸಿದ್ದಾರೆ. ಆದರೆ 25ರಂದು ತಮಗೆ ಬರಲು ಸಾಧ್ಯವಾಗುವುದಿಲ್ಲ, ನೀವೇ ಉದ್ಘಾಟನೆ ಮಾಡಿ ಎಂದು ಅವರು ತಳಿಸಿದ್ದಾರೆ ಎಂದು ಅವರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದೆ. ಬೆಳಗಾವಿಯಲ್ಲಿರುವ ಕೋಟೆ ಕೊತ್ತಲುಗಳ ಅಭಿವೃದ್ಧಿಗೆ ಕೇಂದ್ರದ ಅನುಮತಿ ಮತ್ತು ನೆರವು ನೀಡುವಂತೆ ವಿನಂತಿಸಿದ್ದೇನೆ ಎಂದು ಸುರೇಶ ಅಂಗಡಿ ಟ್ವೀಟ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ