ಪ್ರಗತಿವಾಹಿನಿ ಸುದ್ದಿ, ಹಳಿಯಾಳ
ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಆಶ್ರಯದಲ್ಲಿ ರಾಜ್ಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಆವಿಷ್ಕಾರ್-೧೯ ವಿದ್ಯುಕ್ತವಾಗಿ ಚಾಲನೆಗೊಂಡಿತು.
ಬೆಳಿಗ್ಗೆ ೧೦ಗಂಟೆಗೆ ಉದ್ಘಾಟನೆಗೊಂಡ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಸಲ್ಟ ಸಿಸ್ಟಮ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹೇಮಂತ ಗಾಡಗೀಳ್ ಅವರು ಕೈಗಾರಿಕಾ ಕ್ಷೇತ್ರ ವಿಕಸನದ ಸ್ಥೂಲ ಚಿತ್ರಣವನ್ನು ನೀಡಿದರು. ನೂತನ ತಂತ್ರಜ್ಞಾನವು ಕೈಗಾರಿಕಾ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ತರಬಹುದಾದ ಬದಲಾವಣೆಗಳನ್ನು ವಿವರಿಸಿದರು.
ಭವಿಷ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶವನ್ನು ಹೊಂದಲು ಆಧುನಿಕ ತಂತ್ರಜ್ಞಾನಗಳಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ, ಮಶಿನ ಲರ್ನಿಂಗ್, ಐ.ಒ.ಟಿ, ಕ್ಲೌಡ್ ಕಂಪ್ಯೂಟಿಂಗ್, ರೋಬೋಟಿಕ್ ಅಟೋಮೇಶನ್, ತ್ರಿ ಡಿ ಪ್ರಿಂಟಿಂಗ್ಗಳ ಕುರಿತು ಜ್ಞಾನ ಹೊಂದುವುದು ಅತ್ಯವಶ್ಯವಾಗಿದೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದೊಂದಿಗೆ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಪುಣೆಯ ೫ ಎ.ಎಮ್ ವೆಂಚರ್ಸ್ ಸಂಸ್ಥೆಯ ಸಿ ಐ ಒ ಪಂಕಜ ಮಿತ್ತಲ್ ಅವರು ಕಾರ್ಯಕ್ರಮದ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಎಸ್ ಸಂಸ್ಥೆಯ ಮತ್ತು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಆರ್ ಕೆ ಬೆಳಗಾಂಕರ್ ಮಾತನಾಡುತ್ತ ಆವಿಷ್ಕಾರದಂಥಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ನುಡಿದರು.
ಸ್ವಾಗತ ಭಾಷಣ ಮಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿ ವಿ ಕಟ್ಟಿಯವರು ೧೨ ವರ್ಷಗಳಿಂದ ಆವಿಷ್ಕಾರ ಉತ್ಸವ ಸಾಗಿ ಬಂದ ಪರಿಯನ್ನು ವಿವರಿಸಿದರು. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳಾದ ಇ-ಯಂತ್ರ ಪ್ರಯೋಗಾಲಯ, ವೆಲ್ಡಿಂಗ್ ರಿಸರ್ಚ ಸೆಂಟರ್, ನೈನ್ ಸೆಂಟರ್, ಸ್ಪೋಕನ್ ಟ್ಯುಟೋರಿಯಲ್ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ಆವಿಷ್ಕಾರ ಸಂಚಾಲಕರಾದ ಪ್ರೊ. ಆರ್ ಎನ್ ಪಾಟೀಲ ಆವಿಷ್ಕಾರ-೧೯ರ ಕಿರು ಚಿತ್ರಣವನ್ನು ನೀಡಿದರು. ಪ್ರೊ.ಮಂಜುನಾಥ ಡಿ ವಂದಿಸಿದರು. ವಿದ್ಯಾರ್ಥಿಗಳಾದ ಸುಷ್ಮಾ ಕೆ ಮತ್ತು ಮನನ್ ಡಿ ನಿರೂಪಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಈ ತಾಂತ್ರಿಕ ಉತ್ಸವದಲ್ಲಿ ತಾಂತ್ರಿಕ ಪ್ರಬಂಧ ಮಂಡನೆ, ರೋಬೋಟ್ ರೇಸ್, ಕಟ್ಟಡ ಮಾದರಿ ನಿರ್ಮಾಣ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧs ಇಂಜನಿಯರಿಂಗ್ ಕಾಲೇಜುಗಳ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ