ಪ್ರಗತಿವಾಹಿನಿ ಸುದ್ದಿ, ನವದೆಹಲಿ
ರಾಮಮಂದಿರ ನಿರ್ಮಾಣ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಮಂದಿರ ನಿರ್ಮಾಣಕ್ಕೆ ಫೆ. 21ರಂದು ಅಡಿಗಲ್ಲು ಹಾಕುವುದಾಗಿ ಪರಮ ಧರ್ಮ ಸಂಸದ್ ತಿಳಿಸಿದೆ.
ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಪ್ರಯಾಗ್ ರಾಜ್ನಲ್ಲಿ ಸಾಧುಗಳ ಬೃಹತ್ ಸಮ್ಮೇಳನದಲ್ಲಿ ಮಾತನಾಡಿ, ಹೈಕೋರ್ಟ್ನ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿಲ್ಲ, ಅದು ಚಾಲ್ತಿಯಲ್ಲಿದೆ. ಹಾಗಾಗಿ ನಾವು ಸುಪ್ರೀಂಕೋರ್ಟ್ನ ಯಾವುದೇ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುವುದಿಲ್ಲ ಎಂದ ಅವರು, ದೇಶದೆಲ್ಲೆಡೆ ಇರುವ ಹಿಂದೂಗಳು ಈ ಚಳವಳಿಗೆ ಕೈಜೋಡಿಸಲಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಫೆ.21ರಂದು ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಾಗಿಯೂ, ಅದೇ ದಿನ ಬೃಹತ್ ಮೆರವಣಿಗೆ ನಡೆಸುವುದಾಗಿಯೂ ತಿಳಿಸಿದರು.
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಸೋಮವಾರ ಮನವಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ಮುಕ್ತಾಯಗೊಂಡ ಮೂರು ದಿನಗಳ ಧರ್ಮ ಸಂಸದ್ನಲ್ಲಿ ಅಡಿಗಲ್ಲು ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ