ಪ್ರಗತಿವಾಹಿನಿ ಸುದ್ದಿ, ಪಾಟ್ನಾ:
ಪ್ರಧಾನಿ ನರೇಂದ್ರ ಮೋದಿ ಕುರಿತು ಚೌಕಿದಾರ್ ಚೋರ್ ಹೈ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅದೇ ಹೇಳಿಕೆಯನ್ನು ಪುನರುಚ್ಚರಿಸಿ ಮತ್ತೆ ಕಾನೂನಿನ ಕಟಕಟೆ ಹತ್ತುವಂತಾಗಿದೆ.
ಬಿಹಾರದ ಸಮಷ್ಟಿಪುರದಲ್ಲಿ ಶನಿವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಚೌಕಿದಾರ್ ಚೋರ್ ಹೈ ಎಂದು ಪದೇಪದೆ ಹೇಳುವಂತೆ ಜನರಿಗೆ ಹುರಿದುಂಬಿಸಿದ ರಾಹುಲ್ ಗಾಂಧಿ ವಿರುದ್ಧ ವಕೀಲರೊಬ್ಬರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜತೆಯಲ್ಲಿದ್ದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧವೂ ಕೇಸು ದಾಖಲಿಸಲಾಗಿದೆ.
ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಸೋರಿಕೆಯಾದ ದಾಖಲೆಗಳನ್ನು ಪರಿಶೀಲನೆ ನಡೆಸುವುದಾಗಿ ಸುಪ್ರೀಂಕೋರ್ಟ್ ಏ.10ರಂದು ಹೇಳಿತ್ತು. ಸುಪ್ರೀಂಕೋರ್ಟ್ನ ಈ ನಿರ್ಧಾರ ನೈತಿಕ ಗೆಲುವು ಎಂದು ಹೇಳಿದ್ದ ರಾಹುಲ್ ಗಾಂಧಿ, ಕಾವಲುಗಾರ ಕಳ್ಳತನ ಮಾಡಿದ್ದಾರೆಂದು ನ್ಯಾಯಾಲಯವೇ ಸ್ಪಷ್ಟಪಡಿಸಿದೆ ಎಂದು ಹೇಳಿದ್ದರು.
ಸುಪ್ರೀಂಕೋರ್ಟ್ ದಾಖಲೆಗಳನ್ನು ಪರಿಶೀಲನೆ ಮಾಡುವುದಾಗಿ ಮಾತ್ರ ಹೇಳಿದೆ. ಆದರೆ, ರಾಹುಲ್ ಗಾಂಧಿಯವರ ಹೇಳಿಕೆ ನ್ಯಾಯಾಲಯದ ಹೇಳಿಕೆಗೆ ವಿರುದ್ಧವಾಗಿದೆ. ಇದು ನ್ಯಾಯಾಂಗ ನಿಂದನೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಅವರ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂಕೋರ್ಟ್ ನಿರ್ಧಾರವೆಂದು ಹೋದ ಕಡೆಯಲ್ಲೆಲ್ಲ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅರ್ಜಿ ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್, ರಾಹುಲ್ ಗಾಂಧಿಯವರು ಏ.22ರೊಳಗೆ ಸ್ಪಷ್ಟನೆ ನೀಡುವಂತೆ ಆದೇಶಿಸಿ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರಿಸಿದ್ದ ರಾಹುಲ್ ಗಾಂಧಿ ಅವರು ರಾಜಕೀಯ ಪ್ರಚಾರದ ಭರಾಟೆಯಲ್ಲಿ ಹೀಗೆ ಹೇಳಿದ್ದಾಗಿ ಸುಪ್ರೀಂಕೋರ್ಟ್ಗೆ ತಿಳಿಸಿ ಕ್ಷಮೆ ಯಾಚಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ