ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಸ್ರೇಲ್ ಕೃಷಿ ಮಾದರಿಯನ್ನು ಯಶಸ್ವಿಯಾಗಿ ಅಳವಡಿಸಲು ಯೋಜನೆಯಡಿ ರೈತರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಸೋಮವಾರ ಬೆಳಗಾವಿ ಸುವರ್ಣ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಸ್ರೇಲ್ ಕೃಷಿ ತಂತ್ರಜ್ಞಾನ ಅಳವಡಿಸುವ ಕುರಿತು ಕ್ರಿಯಾ ಯೋಜನೆ ಮಂಡಿಸುವ ಕುರಿತಂತೆ ಚರ್ಚಿಸಲು ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ಈ ಯೋಜನೆಯ ಯಶಸ್ಸಿಗೆ ಸಂಬಂಧಪಟ್ಟ ವಿವಿಧ ಇಲಾಖೆಗಳು ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಅರಣ್ಯ, ವಾರ್ತಾ ಇಲಾಖೆ ಸಮನ್ವಯದಿಂದ ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಕಲಿತು ಹೊರಬರುವ ವಿದ್ಯಾರ್ಥಿಗಳಿಂದ ರೈತರಿಗೆ ನೀರಿನ ಸದ್ಬಳಕೆ, ತಂತ್ರಜ್ಞಾನ ಅಳವಡಿಕೆ ಕುರಿತು ಮಾಹಿತಿ ನೀಡುವುದರಿಂದಲೂ ರೈತರಿಗೆ ನೆರವಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳ ಮೂಲಕ ತಾಂತ್ರಿಕ ಮಾಹಿತಿ ವರ್ಗಾವಣೆ ರಾಜ್ಯದಲ್ಲಿ ಕೃಷಿಗೆ ಪೂರಕವಾಗಲಿದೆ ಎಂದರು.
ಕೃಷಿಗೆ ರೋಗ ತಗುಲಿದಾಗ ಮನಸ್ಸಿಗೆ ಬಂದ ಹಾಗೆ ಔಷಧಿ ಸಿಂಪರಣೆ ಮಾಡದೆ ವಿಶ್ವವಿದ್ಯಾಲಯಗಳ ಮೂಲಕ ಅವರು ಹೇಳಿದ ಔಷಧಿಗಳ ಸಿಂಪರಣೆಯಿಂದ ರೈತರಿಗೂ ಗ್ರಾಹಕರಿಗೂ ಅನುಕೂಲವಾಗಲಿದೆ ಎಂದರು.
ಎಂಬಿಎ ಪದವೀಧರರಾದ ಕೋಲಾರದ ಚೌಡರೆಡ್ಡಿ ಇಸ್ರೇಲ್ ಪ್ರವಾಸದ ಸಂದರ್ಭದಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಕುರಿತು ಕಂಡುಕೊಂಡ ವಿಷಯಗಳನ್ನು ಮುಖ್ಯಮಂತ್ರಿಗಳೊಂದಿಗೆ ಹಂಚಿಕೊಂಡರು.
ಬಿದಿರು ಬೆಳೆಯ ಕ್ಷೇತ್ರದ ಖ್ಯಾತ ಸಂಶೋಧಕರಾದ ಡಾ ಭಾರತಿ ಅವರು ಬಿದಿರು ಬೆಳೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಬಿದಿರು ಬೆಳೆ ಅತ್ಯಂತ ಸುಲಭ ಹಾಗೂ ಲಾಭದಾಯಕವಾಗಿದ್ದು, ಬೆಳೆ ಮತ್ತು ಬೆಲೆಯಿಂದ ರೈತಸ್ನೇಹಿಯನ್ನಾಗಿಸಲು ಸಾಧ್ಯವಿರುವ ಮಾದರಿಯನ್ನು ಸಭೆಗೆ ಪರಿಚಯಿಸಿದರು.
ಅತ್ಯಂತ ಕಡಿಮೆ ಶ್ರಮ ಬೇಡುವ ಈ ಬೆಳೆ ಇತರೆಲ್ಲ ಬೆಳೆಗಳಿಗಿಂತ ಬೇಗ ಬೆಳೆಯಬಹುದಾಗಿದ್ದು, ಲಾಭವೂ ಅಧಿಕ ಎಂದು ವಿವರಿಸಿದರು.
ಇಸ್ರೇಲ್ ಮಾದರಿ ಕೃಷಿ ಕುರಿತು ರಚಿಸಲಾದ ಉನ್ನತ ಮಟ್ಟದ ಅಧ್ಯಯನ ಸಮಿತಿಯು ತನ್ನ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ, ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿ ಯವರ ಆರ್ಥಿಕ ಸಲಹೆಗಾರ ಡಾ. ಸುಬ್ರಹ್ಮಣ್ಯ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಸಮಿತಿ ಅಧ್ಯಕ್ಷರಾದ ಮನೋಜ್ ರಾಜನ್ ಮತ್ತಿತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ