Latest

ಲೋಕಾಯುಕ್ತ ಬಲೆಗೆ ಬಿದ್ದಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳಿಬ್ಬರಿಗೆ ಶಿಕ್ಷೆ

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಾಣಿಜ್ಯ ತೆರಿಗೆ ವಿನಾಯ್ತಿ ನೀಡಲು ಹೊಟೆಲ್ ಮಾಲಿಕರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ತಲಾ ಒಂದೂವರೆ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ.

ವಾಣಿಜ್ಯ ತೆರಿಗೆ ಇಲಾಖೆ ಉಪಆಯುಕ್ತ ಎಸ್.ಎನ್.ಸೋಮನಾಳ ಮತ್ತು ತೆರಿಗೆ ನಿರೀಕ್ಷಕ ಯಲ್ಲರೆಡ್ಡಿ ಭೀಮರೆಡ್ಡಿ ರಡ್ಡೇರ 2012ರಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ದುರ್ಗಾಬಾರ್ ನ ನಿತೀಶ್ ಕುಮಾರ ಬಾಲಿಸಾಹು ಎನ್ನುವವರು ದೂರು ನೀಡಿದ್ದರು.

ಶಿವಾಜಿನಗರದ ನಿತೀಶಕುಮಾರ ಬಾಲಿಸಾಹು ದುರ್ಗಾಬಾರ್‌ನಲ್ಲಿ ಆಹಾರ ವಿಭಾಗವನ್ನು ಲೀಸ್ ಪಡೆದು ನಡೆಸುತ್ತಿದ್ದು, ವಾಣಿಜ್ಯ ತೆರಿಗೆ ಅಧಿಕಾರಿಗಳು 2012ರ ಏಪ್ರಿಲ್ 10ರಂದು ಪರಿಶೀಲಿಸಿ ಟ್ಯಾಕ್ಸ್ ಕಟ್ಟದೇ ಇದ್ದುದ್ದಕ್ಕೆ 1.52 ಲಕ್ಷ ರೂ. ತೆರಿಗೆ ತುಂಬಬೇಕಾಗುತ್ತದೆ. 50 ಸಾವಿರ ರೂ. ಲಂಚ ಕೊಟ್ಟರೆ ಕೋರ್ಟ್ ಗೆ ಕೇಸ್ ಮಾಡುವುದಿಲ್ಲವೆಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು.

ಪ್ರಕರಣದ ವಿಚಾರಣೆಯನ್ನು4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶ ಶಶಿಧರ ಶೆಟ್ಟಿ ನಡೆಸಿದ್ದರು. ನ್ಯಾಯಾಲಯವು ಇಬ್ಬರನ್ನೂ ತಪ್ಪಿತಸ್ಥರೆಂದು ತೀರ್ಪು ನೀಡಿ ತಲಾ ಒಂದು ವರ್ಷ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಲೋಕಾಯುಕ್ತ ಠಾಣೆಯ ಅಂದಿನ ನಿರೀಕ್ಷಕ ಆರ್.ಬಿ.ಹವಲ್ದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು. ವಿಶೇಷ ಸರಕಾರಿ ಅಭಿಯೋಜಕ ಕೆ.ಆರ್. ಎಕ್ಸಂಬಿ ವಾದ ಮಂಡಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button