ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಚನಗಳು ಜೀವನದಲ್ಲಿ ಎದುರಿಸುವ ನೋವು, ನಲಿವುಗಳೇ ಆಗಿವೆ. ಜೀವನದ ಸಮಸ್ಯೆಗಳಿಗೆಲ್ಲ ಪರಿಹಾರ, ಸಾಂತ್ವನವನ್ನು ಶರಣರ ವಚನಗಳು ಹೇಳುತ್ತ ಬದಕುವ ದಾರಿಯನ್ನು ಹೇಳಿಕೊಟ್ಟಿವೆ ಎಂದು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಜಾಗತಿಕ ಲಿಂಗಾಯಿತ ಮಹಾಸಭೆ ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಮಹಾಂತೇಶನಗರದ ಮಹಾಂತ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಸತ್ಸಂಗದ ವಿಶೇಷ ಉಪನ್ಯಾಸ ಹಾಗೂ ಗೌರವ ಸನ್ಮಾನ ಕಾರ‍್ಯಕ್ರಮದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಬೆನನ್‌ಸ್ಮಿತ್ ಮಹಾವಿದ್ಯಾಲಯದ ಉಪನ್ಯಾಕ ಪ್ರೊ. ಶ್ರೀಕಾಂತ ಶಾನವಾಡ, ಶರಣರು ವಿಶ್ವದ ಜೀವಂತಿಕೆಗಾಗಿ ವಾಸ್ತವವನ್ನು ಅರುಹಿದ ಮಹಾ ಮಾನವತಾವಾದಿಗಳು. ಬೇರೆಯವರಂತೆ ಕೇವಲ ಸಿದ್ಧಾಂತಗಳ ನಿರೂಪಣೆಗೆ ಇಳಿಯದೇ ಬದುಕಿನ ಯತಾರ್ಥತೆಗೆ ಒತ್ತು ನೀಡುವುದರೊಂದಿಗೆ ಜನರ ಅರಿವನ್ನು ಹೆಚ್ಚಿಸಿದವರು. 12 ನೇ ಶತಮಾನದಲ್ಲಿದ್ದ ದೇವಾಲಯ ಮತ್ತು ಮಠಗಳು ಶೋಷಣೆ ಕೇಂದ್ರಗಳಾಗಿದ್ದವು. ಆಗ ದೇಹವನ್ನೇ ದೆಗುಲವನ್ನಾಗಿಸಿ, ಮನೆಗಳನ್ನೇ ಮಠಗಳನ್ನಾಗಿಸಿದ ಹಿರಿಮೆ ಶರಣರದ್ದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಿ. ಕೆ. ಜೋರಾಪುರ ಅವರನ್ನ ಗೌರವಿಸಲಾಯಿತು.
ಷಟ್‌ಸ್ಥಳ ಧ್ವಜಾರೋಹಣವನ್ನು ಗುರುರಾಜ ಮಠದ ರಾಜೇಶ್ವರಿ ದಂಪತಿಗಳು ನೆರವೇರಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಮಹಾಂತೇಶನಗರದ ರಹವಾಸಿ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯಿತ ಮಹಾಸಭೆ ಅಧ್ಯಕ್ಷರಾದ ಅರವಿಂದ ಪರುಶೆಟ್ಟಿ ವಹಿಸಿದ್ದರು. ಆನಂದ ಕರ್ಕಿ ಹಾಗೂ ಅಶೋಕ ಮಳಗಲಿ ನಿರೂಪಿಸಿದರು. ಎಸ್. ಜಿ. ಸಿದ್ನಾಳ ಸ್ವಾಗತಿಸಿದರು. ಅಡಿವೆಪ್ಪ ಬೆಂಡಿಗೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಾನಂದ ನಿರಾಕಾರಿ ವಂದಿಸಿದರು.
ಮಹಾನಂದಾ ಪರುಶೆಟ್ಟಿ, ಸುವರ್ಣಾ ಗುಡುಸ, ಅನ್ನಪೂರ್ಣಾ ಮಳಗಲಿ, ಸದಾನಂದ ಬಸೆಟ್ಟಿ, ಸತೀಶ ಚೌಗಲಾ, ಸಚಿನ್ ಶಿವಣ್ಣವರ, ರಾಜು ಪದ್ಮಣ್ಣವರ ಮುಂತಾದವರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ