Latest

ವರ್ಗಾವಣೆಗೆ ನಿರ್ಲಕ್ಷ್ಯ :ಸರಕಾರದ ವಿರುದ್ಧ ಶಿಕ್ಷಕರ ಕಿಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಸರಕಾರ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. 

3ನೇ ವರ್ಷವೂ ಶಿಕ್ಷಕರ ವರ್ಗಾವಣೆ ಅಯೋಮಯ ಎನ್ನುವ ಕುರಿತು ಪ್ರಗತಿವಾಹಿನಿ ಸೋಮವಾರ ಪ್ರಕಟಿಸಿರುವ ವರದಿಗೆ ರಾಜ್ಯದ ಎಲ್ಲೆಡೆಯಿಂದ ಶಿಕ್ಷಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ಶಿಕ್ಷಕರ ವರ್ಗಾವಣೆ 3ನೇ ವರ್ಷವೂ ಅಯೋಮಯ! ಅದಕ್ಕಿದೆ 3 ಕಾರಣ!! 

Home add -Advt

ಶಿಕ್ಷಕರ ಬಗ್ಗೆ ಸರಕಾರಕ್ಕೆ ಎಳ್ಳಷ್ಟೂ ಕಾಳಜಿ  ಇಲ್ಲ. ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆ ಸೇರಿದಂತೆ ಎಲ್ಲ ಕೆಲಸಗಳಿಗೆ ಶಿಕ್ಷಕರು ಬೇಕು. ಆದರೆ ಸೌಲಭ್ಯ ಮಾತ್ರ ಕೊಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ನಮ್ಮಂತಹ ಶಿಕ್ಷಕರು ಎಷ್ಟೋ ತೊಂದರೆಗಳನ್ನು ಎದುರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲು ಶ್ರಮಿಸುತ್ತಿದ್ದೇವೆ. ಸರ್ಕಾರದ ಎಲ್ಲಾ ಚುನಾವಣಾ ಕಾರ್ಯ, ಗಣತಿ ಕಾರ್ಯ ನಡೆಸುತ್ತೇವೆ. ನಾವು ನೆಮ್ಮದಿಯಾಗಿದ್ದರೆ ತಾನೆ ದೇಶ ಕಟ್ಟುವ ನಮ್ಮ ಕೆಲಸ ಯಶಸ್ವಿಯಾಗಿ ನಡೆಯುವುದು. ಆದರೆ ಇಂದು ನಮ್ಮ ಗೋಳನ್ನು ಕೇಳುವವರೇ ಇಲ್ಲ ಎಂದು ಶಿಕ್ಷಕಿರೊಬ್ಬರು ಅಳಲು ತೋಡಿಕೊಂಡಿದ್ದಾರೆ. 

12-13 ವರ್ಷಗಳಿಂದ ಮನೆ, ಮಕ್ಕಳು, ವಯಸ್ಸಾದ ಪಾಲಕರನ್ನು ಬಿಟ್ಟು 500-600 ಕಿಮೀ ದೂರದಲ್ಲಿ ಕೆಲಸ ಮಾಡುತ್ತಿದ್ದೇವೆ. ವರ್ಗಾವಣೆ ಕೊಡದೆ ನೆಮ್ಮದಿ ಕಳೆದುಕೊಂಡಿರುವ ನಮ್ಮಂತವರಿಂದ ಎಂತಹ ಗುಣಮಟ್ಟ ನಿರೀಕ್ಷಿಸುತ್ತೀರಿ ಎಂದು ಮತ್ತೋರ್ವ ಶಿಕ್ಷಕಿ ಪ್ರಶ್ನಿಸಿದ್ದಾರೆ. 

ಪ್ರಗತಿವಾಹಿನಿ ವರದಿಗೆ ಶಿಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ನಮ್ಮ ಗೋಳನ್ನು ಸರಕಾರದ ಮುಂದಿಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಶಿಕ್ಷಕರ ಗೋಳು ನಾಯಿ ಪಾಡಾಗಿದೆ. ಹೇಗಾದರೂ ನಮ್ಮನ್ನು ಈ ಪರಿಸ್ಥಿತಿಯಿಂದ ಪಾರು ಮಾಡಿ ಎಂದು ಗೋಗರೆದಿದ್ದಾರೆ. 

ಕೇವಲ ನೆಪಗಳನ್ನೇ ಹುಡುಕಿ ಶಿಕ್ಷಕರ ವರ್ಗಾವಣೆ ಮುಂದೂಡುತ್ತಿರುವ ಸರಕಾರದ ಧೋರಣೆಗೆ  ಎಲ್ಲೆಡೆ ಅಸಹನೆ ವ್ಯಕ್ತವಾಗುತ್ತಿದೆ. 

 

Related Articles

Back to top button