ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇತ್ತೀಚಿಗೆ ವಾಟ್ಸಪ್, ಫೇಸ್ ಬುಕ್ಗಳಲ್ಲಿ ತೊಡಗಿದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಕುಸಿಯುತ್ತಿದೆ. ಜೀವನ ಕೌಶಲ್ಯ ಮತ್ತು ನೈತಿಕ ಮೌಲ್ಯಗಳಿಲ್ಲದೇ ಯುವ ವಿದ್ಯಾರ್ಥಿಗಳು ಹತಾಶರಾಗಿ ಅಮೂಲ್ಯವಾದ ಬದುಕನ್ನು ನಿರರ್ಥಕವಾಗಿಸುತ್ತಿದ್ದಾರೆ. ಇದು ನಿಜಕ್ಕೂ ವಿಷಾದನೀಯ ಎಂದು ಹಿರೇಬಾಗೇವಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ಹೇಳಿದರು.
ಬೆಳಗಾವಿಯ ಚಿಂತಾಮಣರಾವ್ ಸರಕಾರಿ ಪ ಪೂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಇಂದಿನ ವಿದ್ಯಾರ್ಥಿಗಳಿಗೆ ವಿಷಯ ಜ್ಞಾನದ ಜೊತೆಗೆ ಸೃಜನಶೀಲತೆಯು ಅವಶ್ಯಕವಾಗಿದ್ದು. ದಿನ ನಿತ್ಯ ಪದ ಬಂಧ ಬಿಡಿಸುವುದನ್ನು ರೂಢಿಸಿಕೊಳ್ಳಬೇಕು. ಸುಡೋಕುದಂಥ ಆಟಗಳನ್ನು ಆಡುತ್ತ ಮೆದುಳಿಗೆ ಕಸರತ್ತು ನೀಡಬೇಕು. ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರಲ್ಲದೇ ಕೆಲ ಸೃಜನಶೀಲ ಪ್ರಶ್ನೆಗಳನ್ನು ಕೇಳಿ ಮಕ್ಕಳನ್ನು ಪ್ರೇರೇಪಿಸಿದರು.
ಭವಿಷ್ಯತ್ತು ವರ್ತಮಾನದ ಕಾರ್ಯಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ವಿದ್ಯೆಯನ್ನು ಗಳಿಸುವಲ್ಲಿ ಮತ್ತು ಬದುಕಿನ ಸಂಕಷ್ಟ ಸಂದಿಗ್ದತೆ ಎದುರಿಸಲು ಧನಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ, ಕ್ರೀಡೆಗಳಲ್ಲಿ ವಿಜೇತರಾದವರಿಗೆ, ಎನ್ ಎಸ್ ಎಸ್ ಸ್ವಯಂಸೇವಕರಿಗೆ ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರಾಜಶೇಖರ ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪಿಯುಸಿ ಘಟ್ಟವನ್ನು ಗಂಭೀರವಾಗಿ ಪರಿಗಣಿಸಬೇಕು. ನಿರ್ಧಿಷ್ಟ ಗುರಿಯತ್ತ ಪ್ರಯತ್ನ ಮುಂದುವರೆಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.
ಉಪನ್ಯಾಸಕ ಜಿ.ಎಸ್.ಬೆಟಗೇರಿ ಸ್ವಾಗತಿಸಿದರು. ವ್ಹಿ.ಡಿ. ಮುಚ್ಚಂಡಿ ವರದಿ ವಾಚಿಸಿದರು. ಎಸ್ ಎಸ್ ಹಿರೇಮಠ ವಂದಿಸಿದರು. ವಿಜಯಾ ನಾಯ್ಕ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ