ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸ್ವಾಮಿ ವಿವೇಕಾನಂದ ಸ್ಮಾರಕದ ಉದ್ಘಾಟನೆಯ ಅಂಗವಾಗಿ ಫೆಬ್ರವರಿ ೩ ರಂದು ಭಕ್ತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಆತ್ಮಜ್ಞಾನಾನಂದಜೀ ಶಿಷ್ಯ ಅದ್ಭುತ ಗುರು ಪರಮಾದ್ಭುತ ಎಂಬ ವಿಷಯದ ಮೇಲೆ ಮಾತನಾಡುತ್ತ ಶ್ರೀ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಶ್ರೇಷ್ಠ ಸಂಬಂಧದ ಬಗ್ಗೆ ತಿಳಿಸಿದರು. ವಿವೇಕಾನಂದರು ನ್ಯೂಯಾರ್ಕಿನ ಕಾರುಗಳಲ್ಲಿ ಸಂಚರಿಸುತ್ತಿದ್ದಾಗಲೂ ಧ್ಯಾನದಲ್ಲಿ ಮುಳುಗುತ್ತಿದ್ದರು. ಶಾಂತಿ, ಸುಖ, ನೆಮ್ಮದಿಯು ವಿವೇಕ, ವೈರಾಗ್ಯ ಮತ್ತು ಜ್ಞಾನದಲ್ಲಿದೆಯೆಂದು ಹೇಳಿದರು.
ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪಾನಂದಜೀಯವರು ಮಾತನಾಡಿ ಶ್ರೀ ಶಾರದಾದೇವಿಯವರ ಜೀವನ ದಿವ್ಯತೆಯಿಂದ ಕೂಡಿದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಹೇಳುತ್ತ ಶಾರದೆ ಸಾಕ್ಷಾತ್ ಸರಸ್ವತಿ ಅವಳು ಜಗತ್ತಿಗೆ ಜ್ಞಾನ ನೀಡಲು ಬಂದಿದ್ದಾಳೆ. ಅವಳು ಸಾಮಾನ್ಯವಲ್ಲ, ಅವಳು ನನ್ನ ಶಕ್ತಿ ಎಂದು ಶ್ರೀರಾಮಕೃಷ್ಣರು ಹೇಳಿದ್ದನ್ನು ಸ್ಮರಿಸಿದರು.
ಊಟಿಯ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ರಾಘವೇಶಾನಂದಜೀ ಶ್ರೀರಾಮಕೃಷ್ಣರು ಭಕ್ತರನ್ನು ಭವಸಾಗರದಿಂದ ದಾಟಿಸಲು ಬಂದಿದ್ದಾರೆ. ಅದಕ್ಕಾಗಿಯೇ ಸ್ವಾಮಿ ವಿವೇಕಾನಂದರು ಖಂಡನ-ಭವ-ಬಂಧನ ಎಂಬ ಸ್ತೋತ್ರವನ್ನು ರಚಿಸಿದ್ದಾರೆ. ಭಗವಂತನಲ್ಲಿ ವ್ಯಾಕುಲತೆಯಿಂದ ನೀನೊಬ್ಬನೇ ಬೇಕು ಬೇರೆನೂ ಬೇಡ ಎಂದು ಪ್ರಾರ್ಥಿಸಿದರೆ ಖಂಡಿತವಾಗಿ ಬರುತ್ತಾನೆ ಎಂದು ಹೇಳಿದರು.
ಬೇಲೂರಿನ ರಾಮಕೃಷ್ಣ ಮಠ ಮತ್ತು ಮಿಶನ್ನಿನ ಟ್ರಸ್ಟಿಗಳಾದ ಸ್ವಾಮಿ ಮುಕ್ತಿದಾನಂದಜೀಯವರು ಗೃಹಸ್ಥರೂ ಭಗವಂತನನ್ನು ಅನುಭವಿಸಬಹುದು ಎಂಬುದಕ್ಕೆ ಶ್ರೀ ರಾಮಕೃಷ್ಣರೇ ಜೀವಂತ ನಿದರ್ಶನ. ಭಗವಂತನನ್ನು ಕೇವಲ ನಂಬುವುದಲ್ಲ; ಅನುಭವಿಸಬೇಕು. ಭಗವಂತನನ್ನು ಬಯಸಿ ಬದುಕುವುದೇ ಆಧ್ಯಾತ್ಮಿಕತೆಯ ಸಾರ. ಶ್ರೀ ರಾಮಕೃಷ್ಣರು ಆಧ್ಯಾತ್ಮಿಕ ಅನುಭವಗಳ ಸಾಗರ ಮತ್ತು ನಾವೆಲ್ಲ ಅದರ ಬಗ್ಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು.
ದಾವಣಗೆರೆಯ ರಾಮಕೃಷ್ಣ ಮಿಶನ್ನಿನ ಕಾರ್ಯದರ್ಶಿಗಳಾದ ಸ್ವಾಮಿ ನಿತ್ಯಸ್ಥಾನಂದಜೀಯವರು ಶೀಮಾತೆ ಮತ್ತು ತ್ಯಾಗ ಜೀವನದ ಕುರಿತಾಗಿ ಮಾತನಾಡುತ್ತ ಶ್ರೀಮಾತೆಯವರು ತ್ಯಾಗ ಜೀವನಕ್ಕೆ ತುಂಬ ಪ್ರಾಶಸ್ತ್ಯವನ್ನು ಕೊಟ್ಟಿದ್ದರು. ಅವರ ಹೃದಯ ದಯಾಪೂರ್ಣ ಮತ್ತು ಸತ್ಯದಿಂದ ಅಲಂಕೃತವಾಗಿತ್ತು ಎಂದರು.
ಸಾಯಂಕಾಲ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಖ್ಯಾತ ವಾಗ್ಮಿ ಮತ್ತು ಚಿಂತಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಕನ್ನಡ ನೆಲದಲ್ಲಿ ಸ್ವಾಮಿ ವಿವೇಕಾನಂದರ ಎಂಬ ವಿಷಯದ ಕುರಿತು ಮಾತನಾಡಿದರು. ಮಂಜುಷಾ ಪಾಟೀಲ ಕುಲಕರ್ಣಿ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಬೆಳಗಾವಿ ರಾಮಕೃಷ್ಣ ಮಿಶನ್ ಆಶ್ರಮದ ಕಾರ್ಯದರ್ಶಿಗಳಾದ ಸ್ವಾಮಿ ಆತ್ಮಪ್ರಾಣಾನಂದ ಸ್ವಾಮೀಜಿ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ