Latest

ವಿಶ್ವಗುರುವಾಗುವ ಸಾಮರ್ಥ್ಯ ಭಾರತಕ್ಕಿದೆ -ದತ್ತಾತ್ರೆಯ ಹೊಸಬಾಳೆ

 

2 ದಿನಗಳ ಸ್ಟೆಪ್-2018 ಸಮಾವೇಶಕ್ಕೆ ಚಾಲನೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  

ವಿಜ್ಞಾನ ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶ್ವಕ್ಕೇ ಗುರುವನ್ನು ಕೊಡುವ ಸಾಮರ್ಥ್ಯ ಭಾರತಕ್ಕಿದೆ. ಇದನ್ನು ಬಳಸಿಕೊಂಡು ಮತ್ತೊಮ್ಮೆ ಭಾರತ  ಸರ್ವ ಕ್ಷೇತ್ರಗಳಲ್ಲಿ ವಿಶ್ವಗುರುವಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಶನಿವಾರ ಆರಂಭವಾದ ಪ್ರಬುದ್ಧ ಭಾರತ ಆಯೋಜಿಸಿರುವ 2 ದಿನಗಳ ಸ್ಟೆಪ್-2018 ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಭಾರತ ಇಂದು ಜಗತ್ತಿನಲ್ಲೇ ಅಗ್ರಮಾನ್ಯವಾಗಿ ಬೆಳೆಯುತ್ತಿದೆ. ಹಲವು ಶತಮಾನಗಳ ನಂತರ ಮತ್ತೆ ವಿಶ್ವಮಾನ್ಯ ಪಟ್ಟ ಸಿಗುತ್ತಿದೆ. ತನ್ನ ಶ್ರೇಷ್ಠತೆಯನ್ನು ಮೆರೆಯುವ ಅವಕಾಶ ಬರುತ್ತಿದೆ. ಕೇವಲ ಪುಸ್ತಕದ ಪಾಠದ ಬದಲು ಬದುಕುವ ಪಾಠ ಕಲಿಸುವ ಸಾಮರ್ಥ್ಯ ಭಾರತಕ್ಕಿದೆ. ಹಾಗಾಗಿ ಶೀಘ್ರದಲ್ಲೇ ವಿಶ್ವಗುರು ಪಟ್ಟ ಭಾರತಕ್ಕೆ ಲಭಿಸಬೇಕು ಎಂದು ಅವರು ಹೇಳಿದರು.

ಬೌದ್ಧಿಕ ಪ್ರಾಮಾಣಿಕತೆ, ವೈಯಕ್ತಿಕ ಜೀವನದಲ್ಲಿ ಶುದ್ಧತೆ ಮತ್ತು ಕ್ರಿಯಾತ್ಮಕತೆ ನಿಜವಾದ ಬುದ್ದಿ ಜೀವಿಗಳ ಲಕ್ಷಣವಾಗಬೇಕು. ಅಂದಾಗ ಭಾರತದ ಶ್ರೇಷ್ಠತೆಯನ್ನು ಪುನರ್ ಪ್ರತಿಷ್ಠಾಪಿಸಲು ಸಾಧ್ಯ. ಕೇವಲ ಹಳೆಯ ನೆನಪುಗಳೊಂದಿಗೆ ಬದುಕಲು, ದೇಶ ಕ್ಟಲು ಸಾಧ್ಯವಿಲ್ಲ. ಇತಿಹಾಸವನ್ನು ಮೆಲುಕು ಹಾಕುವುದರೊಂದಿಗೆ ಮತ್ತಷ್ಟು ಪ್ರಬಲವಾಗಿ ದೇಶ ಕಟ್ಟುವ ಕೆಲಸವಾಗಬೇಕು ಎಂದು ಹೊಸಬಾಳೆ ಹೇಳಿದರು.

ಭಾರತೀಯ ಮನಸ್ಸುಗಳ ಮೇಲೆ ಆಗಿರುವ ವಸಾಹತಿಕರಣದ ಪ್ರಭಾವವನ್ನು ತೊಡೆದುಹಾಕಬೇಕಿದೆ. ಬುದ್ದಿಜೀವಿಗಳಲ್ಲಿ ಅಧಿಕಾರಶಾಹಿಗಳನ್ನು ಓಲೈಸುವ, ಆಸ್ತಿ ಗಳಿಕೆಗಾಗಿ ತಮ್ಮ ವಿಚಾರಗಳನ್ನು ಬದಲಾಯಿಸುವ ಪ್ರವೃತ್ತಿ ಬೆಳೆದು ಬಂದಿದೆ. ಇದು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ವೈಜ್ಞಾನಿಕ ಸಾಧನೆಗಳಿಗೆ ಅಡ್ಡಗಾಲಾಗಿದೆ.ಇದರಿಂದ ಜನ ಬೇಸತ್ತಿದ್ದಾರೆ. ಸಾಮಾನ್ಯ ಮನುಷ್ಯನಲ್ಲಿ ಬುದ್ಧಿಜೀವಿಗಳನ್ನು ಕಂಡು ಹೇಸುವ, ಅಪನಂಬಿಕೆ ಮಾಡುವ ಮನಸ್ಥಿತಿ ಬೆಳೆದು ಬಂದಿದೆ.ಕಳೆದ ಅನೇಕ ದಶಕಗಳಿಂದ ಬುದ್ದಿಜೀವಿ ಆಗೋದು ದಂಧೆ ಆಗಿದೆ. ಸೆಮಿನಾರ್, ಕಾರ್ಯಾಗಾರಗಳಲ್ಲಿ ಪರಸ್ಪರ ಬುದ್ದಿಜೀವಿ ಎನ್ನುವುದು ಜನರಿಗೆ ಬುದ್ದಿಜೀವಿ ಎಂದರೇನೆ ಅಪಥ್ಯವಾಗುವಂತಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಭಾರತೀಯ ಬೌದ್ಧಿಕ ಪರಂಪರೆ ಇಡೀ ದೇಶಕ್ಕೆ ಮಾದರಿಯಾಗಿದೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವಾಗಿದ್ದರೂ ಭಾರತ ಯಾವುದೇ ದೇಶದ ಮೇಲೆ ದಂಡೆತ್ತಿ ಹೋಗಿಲ್ಲ. ಯಾವ ದೇಶಕ್ಕೂ ಅಪಾಯವನ್ನುಂಟುಮಾಡಿಲ್ಲ. ಒಬ್ಬನನ್ನೂ ಕೊಲ್ಲದೆ ಸಾವಿರಾರು ವರ್ಷ ಚೀನಾವನ್ನು ಆಳಿದೆ. ಬದಲಾಗಿ ಸಾಂಸ್ಕೃತಿಕ ರಾಯಬಾರಿಗಳನ್ನು ಕಳುಹಿಸಿದೆ. ಸಾವಿರಾರು ವರ್ಷಗಳ ಹಿಂದ ದಕ್ಷಿಣ ಭಾರತದಿಂದ ಚೀನಾ, ಜಪಾನ್ ಗೆ ಹೋದ ಬೋದಿ ಧರ್ಮ ಮಹಾರಾಜ ಅಲ್ಲಿಯ ಜನರಿಗೆ ಸಾಂಸ್ಕೃತಿಕ ಶಿಕ್ಷಣ ನೀಡಿದ. ಈಗಲೂ ಅವನನ್ನು ಪೂಜೆ ಮಾಡುತ್ತಾರೆ. ಭಾರತೀಯ ಸಂಸ್ಕೃತಿ, ಶಿಕ್ಷಣ ಇವುಗಳಿಂದ ಬೇರೆ ದೇಶಕ್ಕೆ ಪರಿಚಯ ಮಾಡಿದ ಸಂತರಿಂದಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಇದೆ ಎಂದು ಹೊಸಬಾಳೆ ಹೇಳಿದರು.
ಭಾರತೀಯ ಬೌದ್ಧಿಕ ಪರಂಪರೆ ಪಂಡಿತರಿಂದಷ್ಟೇ ಸಿಗಲ್ಲ. ಸಾಮನ್ಯರಲ್ಲೂ ಸಿಗುತ್ತದೆ. ಸಾಮಾನ್ಯ ಭಾರತೀಯನ ಸಾಮಾನ್ಯ ಜ್ಞಾನ ಅಚ್ಚರಿಗೊಳಿಸುವಂತದ್ದು. ಅಮೆರಿಕಾದಲ್ಲಿ ಸ್ಪೆಲ್ ಬಿ ಸ್ಪರ್ಧೆಯಲ್ಲಿ ಮೊದಲ ಐದು ಸ್ಥಾನ ಭಾರತೀಯರಿಗೆ ಹೋಗುತ್ತದೆ. ಭಾರತೀಯರಿಗೆ ಅಪರೂಪವಾದ ಜ್ಞಾಪಕ ಶಕ್ತಿ ಇದೆ. ಅದಕ್ಕೆ ಕಾರಣ ಜ್ಞಾನ ಪರಂಪರೆಯಲ್ಲಿ ಸ್ಮೃತಿಗೆ ಬಹಳ ಮಹತ್ವ ಇದೆ. ಅದು ನಮ್ಮ ಸಂಸ್ಕೃತಿ. ಆದರೆ, ಈಗ ಪಟ್ಟಭದ್ರ ಶಕ್ತಿ, ರಾಜಕೀಯ ಹಿತಾಶಕ್ತಿಗಳು ನಮ್ಮನ್ನು ಒಡೆಯುವ ತಂತ್ರ ಮಾಡುತ್ತಿದ್ದಾರೆ. ಅದಕ್ಕೆ ತಂತ್ರಜ್ಞಾನ ಬಳಸುತ್ತಾರೆ. ಅದಕ್ಕೆ ವಸಾಹತುಶಾಹಿ ವಿಚಾರದಿಂದ ಹೊರಬರಬೇಕು ಎಂದು ಕರೆ ನೀಡಿದರು.

ವಿಟಿಯು ಕುಲಪತಿ ಕರಿಸಿದ್ಧಪ್ಪ, ಕೆಎಲ್ಇ ವಿವಿ ಕುಲಪತಿ ವಿವೇಕ ಸಾವೋಜಿ, ಆರ್ ಸಿಯು ಕುಲಪತಿ ಶಿವಾನಂದ ಹೊಸಮನಿ ಮಾತನಾಡಿದರು.

ಪ್ರಬುದ್ಧ ಭಾರತದ ಸಂಚಾಲಕ ಚೈತನ್ಯ ಕುಲಕರ್ಣಿ ಸ್ವಾಗತಿಸಿದರು. ಸಹ ಸಂಚಾಲಕ ಸಚಿನ್ ಸಬ್ನಿಸ್ ಪರಿಚಯಿಸಿದರು. ದಿವ್ಯಾ ಹೆಗಡೆ ಪ್ರಾರ್ಥನೆ ಹಾಡಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಂದೀಪ್ ನಾಯರ್ ವಂದಿಸಿದರು.

ರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಕ್ಕೂಹೆಚ್ಚು ಪ್ರತಿನಿಧಿಗಳು ಸಮಾವಶದಲ್ಲಿ ಭಾಗವಹಿಸಿದ್ದರು. ಸಂಜೆಯವರೆಗೂ ವಿವಿಧ ಗೋಷ್ಠಿಗಳು ನಡೆದವು. 

ಸಂಸದ ಸುರೇಶ ಅಂಗಡಿ, ವಿಧಾನಪರಿಷತ್ ವಿರೋಧ ಪಕ್ಷದ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಅನಿಲ ಬೆನಕೆ, ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಮೊದಲಾದವರು ಆಗಮಿಸಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button