Latest

ವೃತ್ತಿರಂಗಭೂಮಿ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ: ಡಾ. ಪ್ರಕಾಶ ಗರುಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಂದಿನ ತಾಂತ್ರಿಕ ಯುಗದಲ್ಲಿ ವೃತ್ತಿ ರಂಗಭೂಮಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಕಾಲವಿದು. ತನ್ನ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಮೊದಲು ನಟರಿಗೆ ನೇರವಾಗಿ ಸಿಳ್ಳೆ ಹೊಡೆಯುವುದು, ಚಪ್ಪಾಳೆ ತಟ್ಟುವುದು, ಒನ್ಸಮೋರ್ ಎನ್ನುವುದರ ಮೂಲಕ ಪ್ರೇಕ್ಷಕರು ತಮ್ಮ ಸಂತೋಷ ವ್ಯಕ್ತ ಪಡಿಸುತ್ತಿದ್ದರು. ಇಂದು ಸುಧಾರಿಸಿದವರೆಂಬ ಭ್ರಮೆಯಲ್ಲಿ ಪ್ರತಿಕ್ರಿಯೆ ನೀಡಿದರೆ ತಾವೆಲ್ಲಿ ಸಣ್ಣವರಾಗಿ ಬಿಡುತ್ತೇವೆಯೋ ಎಂಬ ಭಯದಲ್ಲಿ ಮೂಕರಾಗುತ್ತಿದ್ದಾರೆ. ನಾಟಕವನ್ನು ಸಂಪೂರ್ಣವಾಗಿ ಆಸ್ವಾದಿಸುವುದನ್ನು ಕಲಿಯಬೇಕೆಂದು ಖ್ಯಾತ ನಿರ್ದೇಶಕ ಪ್ರಕಾಶ ಗರುಡ ಹೇಳಿದರು.
ನಗರದ ರಂಗಸಂಪದ, ರಂಗಾಯಣ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಮ ಪಾದುಕಾ ಪಟ್ಟಾಭಿಷೆಕ ನಾಟಕ ಪ್ರದರ್ಶನ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಡಾ. ಬಸವರಾಜ ಜಗಜಂಪಿ, ಖ್ಯಾತ ರಂಗಕರ್ಮಿ ಗರುಡ ಸದಾಶಿವರಯರ ನಾಟಕಗಳ ಕುರಿತಾಗಿಯೇ ನಾನು ಸಂಶೋದನೆ ಮಾಡಿದ್ದು. ಗರುಡ ಸದಾಶಿವರಾಯರ, ಶ್ರೀಪಾದರಾವ ಗರುಡ, ಡಾ. ಪ್ರಕಾಶ ಗರುಡ ಹೀಗೆ ಮೂರು ತಲೆಮಾರುಗಳಿಂದ ರಂಗಭೂಮಿಗಾಗಿ ತಮ್ಮ ಜೀವನವನ್ನು ಮುಡುಪಿಟ್ಟಿದೆ. ರಂಗಭೂಮಿಗೆ ಇವರ ಕೊಡುಗೆ ಅಪಾರವೆಂದು ಹೇಳಿದರು.
ಗರುಡ ಸದಾಶಿವರಾಯರ ರಚನೆಯ ಶ್ರೀರಾಮ ಪಾದುಕಾ ಪಟ್ಟಾಭಿಷೇಕ ಸಂಗೀತ ಪ್ರಧಾನವಾದ ನಾಟಕ. ಗರುಡ ಸದಾಶಿವರಾಯರ ಮೂಲ ಸಂಗೀತದ ಶ್ರೀಪಾದರಾವ ಸಂಗೀತ ನಿರ್ದೇಶನದಲ್ಲಿ ಸುಮಾರು ಇಪ್ಪತ್ತೈದಕ್ಕಿಂತ ಹೆಚ್ಚು ಗೀತೆಗಳಿದ್ದು, ಮೆಲಕು ಹಾಕುವ ಸಂಗೀತ ಪ್ರೇಕ್ಷಕರನ್ನು ಕೊನೆವರೆಗೂ ಸೆರೆಹಿಡಿದಿತ್ತು. ೩ ಗಂಟೆಯ ನಾಟಕ ಹೇಗೆ ಕೂಡುವುದೆಂಬ ನಿಟ್ಟುಸಿರು ಬಿಟ್ಟವರಿಗೆ ೩ ತಾಸುಗಳು ಕಳೆದುದೇ ಗೊತ್ತಾಗಲಿಲ್ಲ. ಅರ್ಥಪೂರ್ಣ ಸಂಭಾಷಣೆ, ಸುಮಧುರ ಸಂಗೀತ, ನೈಜ ಅಭಿನಯದಿಂದ ರಾಮಾಯಣ ಕಾಲಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವಲ್ಲಿ ನಾಟಕ ಯಶಸ್ವಿಯಾಯಿತು. ಎಲ್ಲ ಪಾತ್ರಧಾರಿಗಳೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು. ಅದರಲ್ಲಿ ವಿಶೇಷವಾಗಿ ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡ ಅಕ್ಷತಾ ಕುಮಟಾ ಮೊದಲ ಭಾಗ ಮುಗ್ಧ ತಾಯಿಯಾಗಿ, ನಂತರ ಪುತ್ರಮೋಹಿಯಾಗಿ ಕೊನೆಯಲ್ಲಿ ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟ ತಾಯಿಯಾಗಿ ಹೀಗೆ ಮೂರೂ ಹಂತದಲ್ಲಿ ತಮ್ಮ ನೈಜ, ಉತ್ತಮ ಅಭಿನಯದಿಂದ ಎಲ್ಲರ ಮನ ಗೆದ್ದರು.
ನಾಟಕ ರಚನೆ ಗರುಡ ಸದಾಶಿವರಾಯರು, ಹಿನ್ನೆಲೆ ಸಂಗೀತ ಮೂಲ ಗರುಡ ಸದಾಶಿವರಾಯರದ್ದು, ಈ ನಾಟಕಕ್ಕೆ ಶ್ರೀಪಾದರಾವ ಗರುಡ, ನಿರ್ದೇಶನ ಪ್ರಕಾಶ ಗರುಡ, ಬೆಳಕು ನಾಗರಾಜ ಪಾಟೀಲ ಅವರದಿತ್ತು.
ಡಾ. ಎ. ಎಲ್. ಕುಲಕರ್ಣಿ ಕಲಾವಿದರು, ಪ್ರಸ್ತುತ ನಾಟಕದ ನಿರ್ದೇಶಕರನ್ನು ವೇದಿಕೆಗೆ ಕರೆದು ಪುಷ್ಫಗುಚ್ಛ ನೀಡಿ ಸ್ವಾಗತಿಸಿದರು. ಪ್ರೊ. ಎಂ. ಎಸ್. ಇಂಚಲ, ಶಿರೀಷ ಜೋಶಿ, ಅಶೋಕ ಮಳಗಲಿ, ರಮೇಶ ಅನಿಗಳ, ಸುಭಾಷ ಏಣಗಿ, ಸಿ.ಜಿ. ಮುನವಳ್ಳಿ, ರಘುನಾಥ ಮುತಾಲಿಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Home add -Advt

ಇಂಥ ಅಧಿಕಾರಿಗಳು ನಮಗೆ ಬೇಕಾ?

ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾನು ತಂಡದೊಂದಿಗೆ ಬಂದಾಗ  ಇಲಾಖೆಯವರಿಂದ ಸಹಕಾರ ಸಿಗಲಿಲ್ಲ. ಎಷ್ಟೇ ವಿನಂತಿ ಮಾಡಿಕೊಂಡರೂ ಗೆಸ್ಟ್ ಹೌಸ್ ಕೀ ಸಿಗಲಿಲ್ಲ? ಕುಮಾರ ಗಂಧರ್ವ ರಂಗಮಂದಿರ ಒಳ್ಳೆಯ ರಂಗಮಂದಿರವಿದೆ. ಕಲಾವಿದರಿಗೆ ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ. ಕಲಾವಿದರನ್ನು ಗೌರವಿಸದ ಇಂಥ ಅಧಿಕಾರಿ ಬೇಕಾ? ಇದನ್ನು ಖಂಡಿಸಬೇಕು ಎಂದು ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ ಶಿಗ್ಗಾಂವಿ ಕಿಡಿ ಕಾರಿದರು.

Related Articles

Back to top button