ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಕೇಂದ್ರ ಸರ್ಕಾರವು ಜಾರಿ ಮಾಡಲಿರುವ ಎಐಸಿಟಿಇ ಯ ಹೊಸ ವೇತನ ಶ್ರೇಣಿಗಳನ್ನು, ರಾಜ್ಯದಲ್ಲಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗೆ ನೀಡಲು ಶೀಘ್ರದಲ್ಲಿಯೇ ಸಮಿತಿ ರಚಿಸಲಾಗುವುದು ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಅವರು ರಾಜ್ಯ ವಿಧಾನ ಪರಿಷತ್ತಿನಲ್ಲಿ ಇಂದು ಹೇಳಿದರು.
ಸದಸ್ಯ ಎಸ್. ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಸಿಬ್ಬಂದಿಗೆ ೨೦೧೧ ರ ಎಐಸಿಟಿಇ ವೇತನ ಶ್ರೇಣಿಯಲ್ಲಿ ವೇತನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಹೊಸ ವೇತನ ಶ್ರೇಣಿಯನ್ನು ಇದುವರೆಗೂ ಜಾರಿಗೊಳಿಸಿಲ್ಲ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕರಿಗೆ ಕಾಲ ಕಾಲಕ್ಕೆ ವಾರ್ಷಿಕ ವೇತನ ಬಡ್ತಿ ನೀಡಲಾಗಿದೆ. ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಗಳನ್ವಯ ಅರ್ಹತೆ ಹೊಂದಿರುವ ಇಲ್ಲಿನ ಒಟ್ಟು ೧೭ ಸಹಾಯಕ ಪ್ರಾಧ್ಯಾಪಕರು, ೧೪ ಸಹ ಪ್ರಾಧ್ಯಾಪಕರಿಗೆ ಕಾಲಬದ್ಧ ಪದೋನ್ನತಿ ನೀಡಲು ಕಳೆದ ಫೆಬ್ರವರಿ ೨೧ ರಂದು ಇಲಾಖಾ ಪದೋನ್ನತಿ ಸಮಿತಿ ಸಭೆಯಲ್ಲಿ ಮಂಡಿಸಲಾಗಿತ್ತು. ಪೂರ್ಣ ಪ್ರಮಾಣದ ಮಾಹಿತಿಯೊಂದಿಗೆ ಮುಂಬಡ್ತಿ ಪರಿಶೀಲನಾ ಸಮಿತಿ ಸಭೆಗೆ ಮಂಡಿಸಲು ಸೂಚಿಸಲಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ