Latest

ಶಾಸಕರ ನಿಧಿ ಮತ್ತಷ್ಟು ಹೆಚ್ಚಳ: ಹೆಚ್.ಡಿ.ಕುಮಾರಸ್ವಾಮಿ

 

    ಎಸ್ ಪಿವಿ ಸಂಸ್ಥೆ ನಿರಾಸಕ್ತಿಯಿಂದಾಗಿ ಜವಳಿ ಪಾರ್ಕ್ ಸ್ಥಾಪನೆ ವಿಳಂಬ; ಎಂ.ಎಸ್.ಐ.ಎಲ್.ಗೆ ಹೆಚ್ಚುವರಿ ೯೦೦ ಸನ್ನದು ಹಂಚಿಕೆ;  ರಾಜ್ಯದಲ್ಲಿ 276 ಪಬ್ಲಿಕ್ ಶಾಲೆಗಳ ಪ್ರಾರಂಭ

  ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಮುಂದಿನ ಬಜೆಟ್‌ನಲ್ಲಿ ಹೆಚ್ಚಿಸಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪ ವೇಳೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಈಗಾಗಲೇ ಬಿಡುಗಡೆ ಆಗಿರುವ ಅನುದಾನ ವೆಚ್ಚ ಮಾಡದೆ ಬಾಕಿ ಉಳಿದಿರುವುದರಿಂದ ಶಾಸಕರ ನಿಧಿ ಹೆಚ್ಚಿಸಿಲ್ಲ. ಆದರೂ, ಮುಂದಿನ ಬಜೆಟ್‌ನಲ್ಲಿ ಹೆಚ್ಚಿಸಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
೨೦೦೧-೨೦೦೨ ರಲ್ಲಿ ಪ್ರತಿ ಕ್ಷೇತ್ರಕ್ಕೆ ತಲಾ ೨೫ ಲಕ್ಷ ರೂ. ನಿಗದಿಪಡಿಸುವ ಮೂಲಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಪ್ರಾರಂಭಿಸಲಾಗಿದೆ. ೨೦೦೬-೨೦೦೭ ನೇ ಸಾಲಿನಲ್ಲಿ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. ೨೦೧೩-೨೦೧೪ನೇ ಸಾಲಿನಲ್ಲಿ ಈ ನಿಧಿಯನ್ನು ಒಂದು ಕೋಟಿ ರೂ.ಯಿಂದ ಎರಡು ಕೋಟಿ ರೂ.ವರೆಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಈ ಯೋಜನೆಯಡಿ ಜಿಲ್ಲಾಧಿಕಾರಿಗಳ ಪಿ ಡಿ ಖಾತೆಯಲ್ಲಿ ೯೩೯.೭೪ ಕೋಟಿ ರೂ. ಅನುದಾನ ಲಭ್ಯವಿದೆ. ಅಲ್ಲದೆ, ೨೦೧೮-೧೯ ನೇ ಸಾಲಿನ ಆಯವ್ಯಯದಲ್ಲಿ ೬೦೦ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಅನುದಾನ ಬಳಕೆಯಾಗದೆ ಇರುವುದರಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಳವಾಲ್ಲ ಎಂದು ಮುಖ್ಯಮಂತ್ರಿ ವಿವರಿಸಿದರು.
ಈ ನಡುವೆ ಬಹುತೇಕ ಶಾಸಕರು ಶಾಸಕ ನಿಧಿ ಪರಿಷ್ಕರಿಸುವಂತೆ ಹಾಗೂ ಪ್ರಸ್ತುತ ಶಾಸಕರ ನಿಧಿ ಬಳಕೆಗೆ ಇರುವ ನಿಯಮಾವಳಿಗಳನ್ನು ಪರಿಷ್ಕರಿಸುವಂತೆ ಸಲಹೆ ನೀಡಿದ ಹಿನ್ನೆಲ್ಲೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕಾಮಗಾರಿಗಳ ಅನುಷ್ಠಾನಕ್ಕೆ ಇರುವ ನಿಯಮಾವಳಿಗಳನ್ನು ಸರಳಿಕರಣಗೊಳಿಸಲಾಗುವುದು ಹಾಗೂ ಬಯಲು ಸೀಮೆ, ಹೈದರಾಬಾದ್ ಕರ್ನಾಟಕ ಹಾಗೂ ಮಲೆನಾಡು ಪ್ರದೇಶದ ಶಾಸಕರಿಗೆ ಆದ್ಯತೆ ನೀಡಲಾಗುವುದು ಎಂದರು.

 ಜವಳಿ ಪಾರ್ಕ್ ಸ್ಥಾಪನೆ ವಿಳಂಬ:

ಕಲಬುರ್ಗಿ ಜವಳಿ ಪಾರ್ಕ್ ಸ್ಥಾಪನೆಗೆ ಎಸ್.ಪಿ.ವಿ ಸಂಸ್ಥೆ ನಿರಾಸಕ್ತಿಯೇ ಕಾರಣ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮುಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಸ್ಕೀಮ್ ಫಾರ್ ಇಂಟಿಗ್ರೆಟೆಡ್ ಟೆಕ್ಸ್‌ಟೈಲ್ ಪಾರ್ಕ್ ಯೋಜನೆಯಡಿ ೫೦ ಎಕರೆ ಜಮೀನಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಆದರೆ, ಎಸ್.ಪಿ.ವಿ ಸಂಸ್ಥೆ ತನ್ನ ವಂತಿಕೆಯನ್ನು ಪಾವತಿಸಲು ನಿರಾಸಕ್ತಿ ತೋರಿರುವ ಕಾರಣ ಈ ಜವಳಿ ಪಾರ್ಕ್ ಸ್ಥಾಪನೆ ವಿಳಂಬವಾಗಿದೆ ಎಂದು ಅವರು ತಿಳಿಸಿದರು.
ಜವಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಶೇಕಡಾ ೪೦ ರಷ್ಟು ಅನುದಾನದಂತೆ ೧೮.೫ ಕೋಟಿ ರೂ. ಅನುದಾನ ಪಡೆಯಬಹುದಾಗಿದೆ. ಈವರೆಗೆ ೧.೮೫ ಕೋಟಿ ರೂ. ಅನುದಾನವನ್ನು ಎಸ್.ಪಿ.ವಿ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ. ಈವರೆಗೆ ಪೂರ್ಣ ಅನದಾನವನ್ನು ಎಸ್.ಪಿ.ವಿ ಸಂಸ್ಥೆಗೆ ನೀಡಲಾಗಿದ್ದು, ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವೆಚ್ಚ ಭರಿಸಲಾಗಿದೆ. ಯೋಜನಾ ವೆಚ್ಚದಲ್ಲಿ ೨೫.೦೩ ಕೋಟಿ ರೂ. ವಂತಿಕೆಯನ್ನು ಎಸ್.ವಿ.ಪಿ ಸಂಸ್ಥೆ ಬ್ಯಾಂಕ್‌ಗಳ ಮೂಲಕ ಸಾಲ ಹಾಗೂ ಸದಸ್ಯರ ವಂತಿಕೆಯಾಗಿ ನೀಡಬೇಕಾಗಿದೆ. ಆದರೆ ಈವರೆಗೆ ಕೆವಲ ೯೫ ಲಕ್ಷ ರೂ. ಮಾತ್ರ ವಂತಿಕೆ ನೀಡಿರುವುದರಿಂದ ಹಾಗೂ ಎಸ್.ಪಿ.ವಿ.ಸಂಸ್ಥೆ ಸದಸ್ಯರ ನಿರಾಸಕ್ತಿಯಿಂದಾಗಿ ಕಲಬುರ್ಗಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ವಿಳಂಬವಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ಎಂ.ಎಸ್.ಐ.ಎಲ್.ಗೆ ಹೆಚ್ಚುವರಿ ಸನ್ನದು ಹಂಚಿಕೆ : 

ಎಂ.ಎಸ್.ಐ.ಎಲ್ ಸಂಸ್ಥೆಗೆ ರಾಜ್ಯಾದ್ಯಂತ ೯೦೦ (ಸಿಎಲ್-೨ಸಿ) ಸನ್ನದುಗಳನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪ ವೇಳೆ ಶಾಸಕ ದುರ್ಯೋಧನ ಐಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ೨೦೦೯ ರಲ್ಲಿ ಪ್ರತಿ ತಾಲೂಕಿಗೆ ಎರಡು ಸನ್ನದುಗಳಂತೆ ೩೫೨ ಸನ್ನದುಗಳು, ಜಿಲ್ಲಾ ಕೇಂದ್ರ ಸ್ಥಾನಕ್ಕೆ ಎರಡರಂತೆ ೫೮ ಸನ್ನದುಗಳು ಹಾಗೂ ಎಂ.ಎಸ್.ಐ.ಎಲ್ ಸಂಸ್ಥೆ ಪ್ರಾದೇಶಿಕ ಬೇಡಿಕೆ ಅಧ್ಯಯನ ಆಧರಿಸಿ ಕೋರಿಕೆ ಸಲ್ಲಿಸುವ ಸ್ಥಳಗಳಿ ೫೩ ಸನ್ನದುಗಳಂತೆ ಒಟ್ಟು ೪೬೩ ಸನ್ನದುಗಳನ್ನು ಹಂಚಿಕೆ ಮಾಡಲಾಗಿದೆ. ೨೦೧೬ ರಲ್ಲಿ ೨೨೦ ವಿಧಾನಸಭಾ ಕ್ಷೇತ್ರಗಳಿಗೆ ತಲಾ ನಾಲ್ಕರಂತೆ ೮೮೦, ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ ಐದು ಸನ್ನದುಗಳಂತೆ ಒಟ್ಟು ೨೦, ಹೀಗೆ ರಾಜ್ಯಾದ್ಯಂತ ಒಟ್ಟು ೯೦೦ (ಸಿಎಲ್-೨ಸಿ) ಸನ್ನದುಗಳನ್ನು ಎಂ.ಎಸ್.ಐ.ಎಲ್ ಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ಅಬಕಾರಿ ನಿಯಮಾವಳಿಯಂತೆ ಸರ್ಕಾರಿ ಏಕಸ್ವಾಮ್ಯದ ಸಂಸ್ಥೆಗಳಿಗೆ ಖುದ್ದಾಗಿ ಸನ್ನದು ನಡೆಸುವ ಮತ್ತು ಬೇರೆ ವ್ಯಕ್ತಿಗಳಿಗೆ ಪರಭಾರೆ ನೀಡಬಾರದು ಎಂಬ ಷರತ್ತಿಗೊಳ್ಳಪಟ್ಟು ಸಿಎಲ್-(೨ಸಿ) ಸನ್ನದು ಮಂಜೂರು ಮಾಡಲಾಗಿದೆ. ಅಲ್ಲದೆ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಿಂದ ೨೨೦ ಮೀಟರ್ ಅಂತರದಲ್ಲಿ ಮದ್ಯದ ಅಂಗಡಿ ಇರಬೇಕೆಂದು ಕರ್ನಾಟಕ ಅಬಕಾರಿ ನಿಯಮಗಳಲ್ಲಿ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸದನದ ಗಮನಕ್ಕೆ ತಂದರು.

೨೭೬ ಪಬ್ಲಿಕ್ ಶಾಲೆಗಳ ಪ್ರಾರಂಭ:

ರಾಜ್ಯಾದ್ಯಂತ ೨೭೬ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಡಾ ಉಮೇಶ ಜಿ. ಜಾಧವ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ೨೦೧೭-೧೮ ನೇ ಸಾಲಿನ ಆಯವ್ಯಯದಲ್ಲಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ೧೭೬ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮತ್ತು ೨೦೧೮-೧೯ ನೇ ಸಾಲಿನಲ್ಲಿ ಆಯವ್ಯಯದಲ್ಲಿ ೧೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಘೋಷಿಸಲಾಗಿದೆ ಎಂದು ತಿಳಿಸಿದರು.
ಇಂತಹ ಶಾಲೆಗಳನ್ನು ಗುರುತಿಸಿ ೧ ರಿಂದ ೧೨ ನೇ ತರಗತಿವರೆಗೆ ಒಂದೇ ಸೂರಿನಡಿ, ಗುಣಮಟ್ಟದ ಶಿಕ್ಷಣ ಒದಗಿಸುವ ಚಿಂತನೆಯಿಂದ ೨೦೧೭-೧೮ನೇ ಸಾಲಿನ ಆಯುವ್ಯಯ ಘೋಷಣೆಯಂತೆ ಪ್ರಾರಂಭಿಕವಾಗಿ ೧೭೬ ’ಕರ್ನಾಟಕ ಪಬ್ಲಿಕ್ ಶಾಲೆ’ ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಪ್ರಮುಖವಾಗಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಲು ಸಂಯೋಜಿಸಲಾಗುವ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿಗಳು ಒಂದೇ ಆವರಣದಲ್ಲಿರಬೇಕು ಅಥವಾ ಒಂದೇ ಹಳ್ಳಿಯ ವ್ಯಾಪ್ತಿಯಲ್ಲಿ ಇರುವಂತೆ ಯೋಜನೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಏಕಲವ್ಯ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಡಾ ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ, ಇಂದಿರಾ ಗಾಂಧಿ ವಸತಿ ಶಾಲೆ ಮೊದಲಾದ ವಸತಿ ಶಾಲೆಗಳನ್ನು ನಡೆಸಲಾಗುತ್ತಿರುವುದರಿಂದ ರಾಜ್ಯದಲ್ಲಿರುವ ಆದರ್ಶ ವಿದ್ಯಾಲಯಗಳನ್ನು ವಸತಿ ಶಾಲೆಗಳನ್ನಾಗಿ ಪರಿವರ್ತಿಸುವ ಹಾಗೂ ಆರನೇ ತರಗತಿಯಿಂದ ಪದವಿ ಪೂರ್ವ ಕಾಲೇಜಿನವರೆಗೆ ವಿಸ್ತರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಸಧ್ಯಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸದನಕ್ಕೆ ಮಾಹಿತಿ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button