ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಪರಿಸರ ಕಾರ್ಯಕರ್ತ ಶಿವಾಜಿ ಕಾಗಣಿಕರ್ ಗೆ ಈ ವರ್ಷದ ದೇವರಾಜ ಅರಸು ಪ್ರಶಸ್ತಿ ಲಭಿಸಿದೆ.
ಮಂಗಳವಾರ ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗ ಶೆಟ್ಟಿ ಪ್ರಶಸ್ತಿ ಘೋಷಣೆ ಪ್ರಕಟಿಸಿದರು. ಬರಗೂರು ರಾಮಚಂದ್ರಪ್ಪ ನೇತೃತ್ವದ ಆಯ್ಕೆ ಸಮಿತಿ ಕಾಗಣಿಕರ್ ಅವರನ್ನು ಆಯ್ಕೆಮಾಡಿದ್ದು, 5 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ಬೆಳಗಾವಿ ಸಮೀಪ ಕಟ್ಟಣಬಾವಿ ಎನ್ನುವ ಹಳ್ಳಿಯವರಾದ ಕಾಗಣಿಕರ್ ಅತ್ಯಂತ ಸರಳ ವ್ಯಕ್ತಿ. ಓಡಾಡಲು ವಾಹನವಿಲ್ಲ. ಬಸ್ ನಲ್ಲೇ ಓಡಾಡುತ್ತಾರೆ. ಶಿಕ್ಷಣ ಹಾಗೂ ಪರಿಸರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.
ಗ್ರಾಮೀಣರ ಅಡುಗೆ ಮನೆಯಲ್ಲಿ ಸೌದೆಯ ಒಲೆ ಬದಲಿಗೆ ಗೋಬರ್ ಗ್ಯಾಸ್ ಉರಿಸುವ ಮೂಲಕ ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ದುಡಿದವರು ಕಾಗಣೇಕರ್. ಬಂಬರಗಾ, ಕಟ್ಟನಬಾವಿ ಗ್ರಾಮಗಳ ಸುತ್ತಮುತ್ತಲಿನ ಮನೆಗಳಿಗೆ ಗೋಬರ್ ಗ್ಯಾಸ್ ತಲುಪಿಸಿದ ಖ್ಯಾತಿ ಇವರದ್ದು. ಗ್ರಾಮದ ೬೦ಕ್ಕೂ ಹೆಚ್ಚು ಮನೆಗಳು ಎರಡು ದಶಕಗಳ ಹಿಂದೆಯೇ ಸೌದೆ ಒಲೆಯಿಂದ ಗೋಬರ್ ಗ್ಯಾಸ್‌ಗೆ ಪರಿವರ್ತಿತವಾಗಿವೆ. ಇದರೊಂದಿಗೆ ಸರ್ಕಾರದ ನೆರವು ಗ್ರಾಮೀಣ ಜನರಿಗೆ ತಲುಪಿತು. ಉರುವಲಿನ ಸಮಸ್ಯೆ ಇಲ್ಲವಾಯಿತು. ಜತೆಗೆ ಹೊಗೆ ಮುಕ್ತ ಅಡುಗೆ ಮನೆ ಗ್ರಾಮೀಣರಿಗೆ ದೊರೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ